ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಬಂಡಾಯ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಅರಸೀಕೆರೆ ಏ.7
ಈಗಲೂ ತಮಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ದೊರೆಯುವ ಆಶಾಭಾವನೆ ಇದ್ದು, ಒಂದು ವೇಳೆ ಟಿಕೆಟ್ ಸಿಗದಿದ್ದಲ್ಲಿ ತಾವು ತಮ್ಮ ಬೆಂಬಲಿಗರು ಮತ್ತು ಅಭಿಮಾನಿಗಳ ಅಭಿಲಾಷೆಯಂತೆ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದತೆ ಮಾಡಿಕೊಂಡಿರುವುದಾಗಿ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗ ಕಾರ್ಯದರ್ಶಿ ಜೆ.ಪಿ.ಎನ್. ಜಯಣ್ಣ ಹೇಳಿದ್ದಾರೆ.
ಭಾನುವಾರ ಪಟ್ಟಣದಲ್ಲಿ ಹಿತೈಷಿಗಳು ಮತ್ತು ಅಭಿಮಾನಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸಾಮಾಜಿಕ ನ್ಯಾಯ, ಜಾತ್ಯಾತೀತ ನಿಲುವನ್ನು ಪ್ರತಿಪಾದಿಸುವ ಕಾಂಗ್ರೆಸ್ ವೀರಶೈವ ಮತ್ತು ಹಿಂದುಳಿದ ವರ್ಗಕ್ಕೆ ಜಿಲ್ಲೆಯಲ್ಲಿ ಸೂಕ್ತ ಪ್ರಾತಿನಿಧ್ಯತೆ ನೀಡದೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ದಲಿತ, ಹಿಂದುಳಿದ ವರ್ಗ ಹಾಗೂ ವೀರಶೈವರು ಲಕ್ಷಕ್ಕೂ ಹೆಚ್ಚು ಮತದಾರರಿದ್ದರೂ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿದ್ದು ಸಕಲೇಶಪುರ ಕ್ಷೇತ್ರ ಮೀಸಲು ಕ್ಷೇತ್ರವಾಗಿರುವುದರಿಂದ ದಲಿತರಿಗೆ ಟಿಕೆಟ್ ನೀಡಲಾಗಿದೆ. ಆದರೆ ಅರಸೀಕೆರೆ, ಬೇಲೂರು, ಅರಕಲಗೂಡು ಕ್ಷೇತ್ರಗಳಲ್ಲಿ ಹಿಂದುಳಿದವರು ಹಾಗೂ ಲಿಂಗಾಯಿತರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅನ್ಯಾಯವೆಸಗಲಾಗಿದೆ ಎಂದು ದೂರಿದರು.
ಈ ಸಮಾಜಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಈಗಲೂ ಅವಕಾಶವಿದ್ದು ರಾಜ್ಯ ನಾಯಕರು ಗಮನ ಹರಿಸಿ ಸಾಮಾಜಿಕ ನ್ಯಾಯದಡಿ ಈ ವರ್ಗಗಳಿಗೆ ಟಿಕೆಟ್ ನೀಡದೇ ಇದ್ದಲ್ಲಿ ಜಾತಿ ರಾಜಕೀಯ ಮಾಡುತ್ತಿರುವವರಿಗೆ ಜನರೇ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಅವರು ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ತಮಗೆ ಈ ಬಾರಿ ಟಿಕೆಟ್ ಸಿಗುವ ಭರವಸೆ ಪಡೆದಿದ್ದ ಅವರು ಕಡೆಗಳಿಗೆಯಲ್ಲಿ ಉಂಟಾದ ಬದಲಾವಣೆ ತಮ್ಮ ಮನಸ್ಸಿಗೆ ತುಂಬ ಬೇಸರ ತರಿಸಿದೆ. ಪಕ್ಷವನ್ನು ಕಟ್ಟಿ ಬೆಳೆಸಿ ತಾಲೂಕಿನಲ್ಲಿ ನೆಲೆ ಕಲ್ಪಿಸಿದ ತಮ್ಮನ್ನು ಟಕೆಟ್ ವಂಚಿತರನ್ನಾಗಿ ಮಾಡಿರುವುದು ನೋವು ತಂದಿದೆ ಎಂದು ಹೇಳಿದರು.
ಬಿ. ಶಿವರಾಂ 4 ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಈ ತಾಲೂಕಿಗೆ ಅಥವಾ ಈ ಜಿಲ್ಲೆಗೆ ನೀಡಿರುವ ಕೊಡುಗೆಯಾದರೂ ಏನು ಅಂತಹ ವ್ಯಕ್ತಿಗೆ ಕ್ಷೇತ್ರದಲ್ಲಿ ಮತದಾರರು ಮತ ನೀಡುವ ಅಗತ್ಯವಾದರೂ ಏನಿದೆ. ವಸ್ತುಸ್ಥಿತಿ ಅರ್ಥಮಾಡಿಕೊಳ್ಳದೆ ಹೈಕಮಾಂಡ್ ಮೇಲೆ ಪ್ರಭಾವ ಭೀರಿ ಟಿಕೆಟ್ ತಂದಿರುವವರಿಗೆ ಈ ಕ್ಷೇತ್ರದ ಜನರು ಕಮಾಂಡ್ ಮಾಡಿಸಿಕೊಳ್ಳುವಷ್ಟು ದಡ್ಡರೇನಲ್ಲ ಎಂದು ಕಿಡಿಕಾರಿದರು.
ಪುರಸಭಾ ಆಡಳಿತದಲ್ಲಿ ಲೆಕ್ಕಕ್ಕೆ ಇಲ್ಲದಾಗಿದ್ದ ಕಾಂಗ್ರೆಸ್ ಸದಸ್ಯರ ಸಂಖ್ಯೆಯನ್ನು 10 ಕ್ಕೆ ಹೆಚ್ಚಿಸಿದ ಸಾಧನೆಯ ಹಿಂದೆ ತಮ್ಮ ಶ್ರಮ ಇದೆ ಎಂಬುದನ್ನು ಮರೆತು ಸ್ಥಳೀಯ ಮುಖಂಡರಿಗೆ ಆದ್ಯತೆ ನೀಡದೆ ಕ್ಷೇತ್ರದ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿರುವುದಕ್ಕೆ ತುಂಬ ವಿರೋಧ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

