ಶಿಕ್ಷಕರ ಭವನದ ಮೇಲೆ ದಾಳಿ: ಪುಸ್ತಕಗಳು ವಶಕ್ಕೆ
ಅರಕಲಗೂಡು: ಶಾಸಕ ಎ.ಮಂಜು ಅವರ ಭಾವಚಿತ್ರ ಇರುವ ನೋಟ್ ಪುಸ್ತಕ, ಇಂಗ್ಲಿಷ್ ಗ್ರಾಮರ್ ಪುಸ್ತಕ ಮತ್ತು ಲೆದರ್ ಫೈಲ್ಗಳನ್ನು ಮಂಗಳವಾರ ಮಧ್ಯಾಹ್ನ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ಮಧ್ನಾಹ್ನ 3 ಗಂಟೆ ವೇಳೆಗೆ ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ಪಟ್ಟಣದ ಶಿಕ್ಷಕ ಭವನದ ಮೇಲೆ ದಾಳಿ ಮಾಡಿದ ಅಧಿಕಾರಿ ಸುನಿಲ್ ಕುಮಾರ್ ಮತ್ತು ತಂಡ ಶಿಕ್ಷಕರ ಭವನದ ಕೊಠಡಿಯೊಂದರಲ್ಲಿದ್ದ 16 ಫೈಲ್ಗಳು, 270 ಆಂಗ್ಲ ಭಾಷಾ ಗ್ರಾಮರ್ ಪುಸ್ತಕಗಳು ಮತ್ತು 7500 ನೋಟ್ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿ ವೇಳೆ ಚುನಾವಣೆ ನೀತಿ ಸಂಹಿತೆ ವೆಚ್ಚಗಳ ಸಂಚಾರಿ ಜಾಗೃತಿ ತಂಡದ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕೆ.ಎಂ.ಜಯರಾಜ್, ಸಿ.ಪಿ.ಐ ರಾಜು, ಪಿ.ಎಸ್.ಐ ಭರತ್ ಇತರರು ಇದ್ದರು.
ಅಧಿಕಾರಿಗೆ ದಿಗ್ಬಂಧನ: ಶಿಕ್ಷಕರ ಭವನದ ಮೇಲೆ ದಾಳಿ ಮಾಡಿದ ಪಿಎಸ್ಐ ಸುನಿಲ್ಕುಮಾರ್ ಅವರನ್ನು ಶಿಕ್ಷಕರ ಭವನದ ಮುಂದೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ದಿಗ್ಬಂಧನಕ್ಕೊಳಪಡಿಸಿದ ಘಟನೆ ನಡೆಯಿತು.
ಶಾಸಕ ಎ.ಮಂಜು ಅವರ ಭಾವಚಿತ್ರ ಇದ್ದ ಪುಸ್ತಕಗಳನ್ನು ವಶಪಡಿಸಿಕೊಂಡ ನಂತರ ಮುಂದಿನ ಕ್ರಮಕ್ಕೆ ಸ್ಥಳೀಯ ಪಿಎಸ್ಐ ಭರತ್ ಅವರಿಗೆ ಸೂಚಿಸಿ ಹಿಂದಿರುಗುತ್ತಿದ್ದ ವೇಳೆ ಶಿಕ್ಷಕರ ಭವನದ ಮುಂದೆ ಅವರನ್ನು ತಡೆದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.
ಠಾಣೆ ಎದುರು ಪ್ರತಿಭಟನೆ: ಬಿಇಒ ರೇವಣ್ಣ ಅವರನ್ನು ಠಾಣೆಗೆ ಕರೆತಂದ ವಿಷಯ ಪಟ್ಟಣದಲ್ಲಿ ಹಬ್ಬುತ್ತಿದ್ದಂತೆಯೇ ಠಾಣೆಯ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಇಒ ರೇವಣ್ಣ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು, ರಾಜಕೀಯ ದುರುದ್ದೇಶದಿಂದ ಅಧಿಕಾರಿಯೊಬ್ಬರನ್ನು ಠಾಣೆಗೆ ಕರೆತರಲಾಗಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

