ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಲು 84,990 ಅರ್ಜಿ: ಡಿಸಿ
ಕನ್ನಡಪ್ರಭ ವಾರ್ತೆ ಹಾಸನ ಏ 10
ವಿಧಾನಸಭಾ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಈವರೆಗೆ ಹೆಸರು ಸೇರಿಸಲು, ತಿದ್ದುಪಡಿಗಾಗಿ ಒಟ್ಟು 84,990 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 20,720 ಅರ್ಜಿಗಳನ್ನು ಅಂಗೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಈವರೆಗೆ ಹೆಸರು ಸೇರಿಸದೇ ಇರುವ ಮತದಾರರಿಗೆ ನಮೂನೆ 6 ಫಾರಂ ಭರ್ತಿಯಾಗಿರುವುದು 66,879 ಅರ್ಜಿಗಳು, ವಾಸವಿಲ್ಲದ ಮತದಾರರ ಹೆಸರು ನಮೂದು ಕೈಬಿಡಲು ನಮೂನೆ-7 9245 ಅರ್ಜಿಗಳು, ನಮೂದುಗಳ ತಿದ್ದುಪಡಿಗಾಗಿ ನಮೂನೆ-8ರಲ್ಲಿ 680 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸ್ಥಳಾಂತರವಾಗಿದ್ದರೆ, ನಮೂನೆ-8ಎ ನ್ನು ಸೂಕ್ತ ರೀತಿಯಲ್ಲಿ ಭರ್ತಿ ಮಾಡಿ ಸಮರ್ಥನೆಗಾಗಿ ಅವಶ್ಯಕ ದಾಖಲೆಗಳೊಂದಿಗೆ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್ಓ) ಮನೆ ಮನೆಗೆ ತೆರಳಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಲವೆಡೆ ಮತದಾರರ ಪಟ್ಟಿಯಲ್ಲಿ ಸಣ್ಣಪುಟ್ಟ ಗೊಂದಲಗಳು ಕಂಡು ಬಂದಿದ್ದು, ಅದನ್ನು ಸರಿಪಡಿಸಲು ಕ್ರಮವಹಿಸಲಾಗಿದೆ ಎಂದರು.
ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ: ಈ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಕೈಗೊಂಡಿದ್ದು, ಮತದಾರರು ತನ್ನ ಹಕ್ಕಿನಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರದಿಂದ ಕಾರ್ಯನಿರ್ವಹಿಸಿದ್ದಾರೆ. ಈಗಾಗಲೇ ಬೂತ್ಮಟ್ಟದಲ್ಲಿ ಅಧಿಕಾರಿ, ಸಿಬ್ಬಂದಿ ನಿಯೋಜನೆ ಗೊಂಡಿರುವವರು ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಒಟ್ಟು 12,63,170 ಮತದಾರರಿದ್ದು, 1872 ಮತಕೇಂದ್ರ ಕಲ್ಪಿಸಲಾಗುತ್ತಿದೆ. ಮಲೆನಾಡು ಭಾಗವಾದ ಸಕಲೇಶಪುರ, ಆಲೂರು, ಅರಕಲಗೂಡಿನಲ್ಲಿ ಕಾಡಾನೆಗಳ ಗಲಾಟೆ ಇರುವ ಕಡೆಗಳಲ್ಲಿ 178 ಗ್ರಾಮಗಳನ್ನು ಗುರುತಿಸಿದ್ದು, ಅದರಲ್ಲಿ 68 ಬೂತ್ಗಳಿಗೆ 21 ಮಾರ್ಗದಲ್ಲಿ ಅರಣ್ಯ ಇಲಾಖೆಯವರು, ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿ ಅವರು ಕಾಡಾನೆ ಗಲಾಟೆ ಕಂಡು ಬಂದಲ್ಲಿ ಅದನ್ನು ನಿಯಂತ್ರಿಸಲು ಪ್ರಯತ್ನಿಸಿ ನಿರ್ಭೀತಿ ಮತದಾನಕ್ಕೆ ಅವಕಾಶ ಕಲ್ಲಿಸಲಾಗುತ್ತಿದೆ ಎಂದರು.
24 ಚೆಕ್ಪೋಸ್ಟ್ ಸ್ಥಾಪನೆ: ಜಿಲ್ಲೆಯಲ್ಲಿ 24 ಚೆಕ್ಪೋಸ್ಟ್ ಗುರುತಿಸಿದ್ದು, ಈ ಪೈಕಿ 10 ಚೆಕ್ಪೋಸ್ಟ್ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾವೆ. ಚನ್ನರಾಯಪಟ್ಟಣ 1, ಶ್ರವಣಬೆಳಗೊಳ 2, ಅರಕಲಗೂಡಿನಲ್ಲಿ 3, ಹೊಳೆನರಸೀಪುರದಲ್ಲಿ 2, ಸಕಲೇಸಶಪುರದಲ್ಲಿ 2 ಚೆಕ್ಪೋಸ್ಟ್ಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಿ ವಾಹನಗಳನ್ನು ಪರಿಶೀಲನೆ ನಡೆಸಿ ಅಕ್ರಮವಾಗಿ ಸಾಗಿಸುವ ಹಣ ಹಾಗೂ ಮದ್ಯ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈವರೆಗೆ ಇಂಥ 5 ಪ್ರಕರಣ ದಾಖಲಾಗಿದ್ದು, ಕಟ್ಟಾಯ ಹೋಬಳಿಯ ಮಾರ್ಗದಲ್ಲಿ ಎರಡು ವಾಹನಗಳಲ್ಲಿ ಅಕ್ರಮ ಮದ್ಯವಗಳು ಪತ್ತೆಯಾಗಿವೆ ಎಂದರು.
ದೂರು ಸಲ್ಲಿಸಲು ದೂರವಾಣಿ: ಎಲ್ಲಾ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೂರು ಸಲ್ಲಿಸಲು 24 ತಾಸುಗಳ ಕಾಲ ಕಾರ್ಯನಿರ್ವಹಿಸುವಂತಹ ದೂರವಾಣಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲಿ ದೂರು ದಾಖಲಿಸಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ 386 ಅತೀ ಸೂಕ್ಷ್ಮ ಮತಗಟ್ಟೆಗಳು, 585 ಸೂಕ್ಷ್ಮ ಮತಗಟ್ಟೆಗಳಾಗಿದ್ದು, ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಕ್ಯಾಮರಗಳನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. 692 ರೌಡಿ ಶೀಟರ್ನಲ್ಲಿ ಹೆಸರಿರುವವರು, ಗೂಂಡಾಗಳು ಇದ್ದಾರೆ. ಅವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ 29 ಜನರನ್ನು ಚುನಾವಣೆ ಸಂಬಂಧ ಗಡಿಪಾರಿಗೆ ನೋಟಿಸ್ ನೀಡಲಾಗಿದೆಎಂದು ಜಿಲ್ಲಾ ಎಸ್ಪಿ ಅಮಿತ್ಸಿಂಗ್ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಜಿಪಂ ಕಾರ್ಯದರ್ಶಿ ಪುಟ್ಟಸ್ವಾಮಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

