ಜನಾರ್ದನಸ್ವಾಮಿ ವಿಗ್ರಹ ಹೊಯ್ಸಳರ ಕಾಲದ್ದು
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಏ.10
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟದ ವತಿಯಿಂದ ಜಿಲ್ಲೆಯ ಆಲೂರು ತಾಲೂಕಿನಲ್ಲಿರುವ ಪಾಳ್ಯದಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯದಲ್ಲಿ ಪರಂಪರಾ ಕೂಟದ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಕೂಟದ ಸಂಚಾಲಕರು, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ನೇತೃತ್ವದಲ್ಲಿ ಪ್ರಾಯೋಗಿಕ ಬೋಧನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಯೋಗಿಕ ಬೋಧನಾ ಕಾರ್ಯಕ್ರಮದಡಿಯಲ್ಲಿ ಪಾಳ್ಯದ ಶ್ರೀ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯದ ಚಾರಿತ್ರಿಕ ಹಿನ್ನೆಲೆಯನ್ನು ಅಲ್ಲಿ ಲಭ್ಯವಿರುವ ಶಾಸನಗಳ ಆಧಾರದಲ್ಲಿ ಪರಂಪರಾ ಕೂಟದ ಸಂಚಾಲಕ ಇರ್ಷಾದ್ ವಿದ್ಯಾರ್ಥಿಗಳಿಗೆ ವಿವರ ನೀಡಿದರು.
ಈ ದೇವಾಲಯ ಕ್ರಿ.ಶ 12ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿತವಾಗಿದ್ದು, ವಿಜಯನಗರದ ಸಾಮಂತರ ಆಳ್ವಿಕೆಯ ಕಾಲದಲ್ಲಿ ವಿಸ್ತಾರಗೊಂಡಿರುವುದಾಗಿ ಇತಿಹಾಸ ಪ್ರಾಧ್ಯಾಪಕ ಇರ್ಷಾದ್ ವಿವರಿಸಿದರು.
ಮೂಲ ಹೆಸರು ಶೆಟ್ಟಿಗನಹಳ್ಳಿ ಎಂಬುದಾಗಿರುವ ಪಾಳ್ಯದ ಜನಾರ್ದನಸ್ವಾಮಿ ದೇವಾಲಯದ ಒಳ ಆವರಣದಲ್ಲಿನ ಕಲ್ಲಿನ ಕಂಬಗಳು, ಗರ್ಭಗೃಹದಲ್ಲಿರುವ ಜನಾರ್ದನಸ್ವಾಮಿ ವಿಗ್ರಹ ಹೊಯ್ಸಳರ ಕಾಲದ್ದಾಗಿದೆ ಎಂದು ವಿವರಿಸಿದರು.
ವಿಜಯನಗರದ ಸಾಮಂತ ಪಾಳೇಪಟುಗಳ ಕಾಲದಲ್ಲಿ ನಿರ್ಮಿತವಾಗಿರುವ ಪಾಕಶಾಲೆ, ಆಳ್ವರುಗಳ ಗುಡಿಗಳು, ರಂಗಸೇವೆ ಪ್ರಾಂಗಣಗಳನ್ನು ಉಲ್ಲೇಖಿಸಿ ಅಂದಿನ ಕಾಲದ ಇತಿಹಾಸದ ಕುರುಹುಗಳನ್ನು ವಿದ್ಯಾರ್ಥಿಗಳಿಗೆ ಮನನ ಮಾಡಿದರು.
ದೇವಾಲಯ ಸ್ಥಿತಿ ಶೋಚನೀಯ: ದೇವಾಲಯದ ಇಂದಿನ ವಾಸ್ತವ ಸ್ಥಿತಿಯು ಶೋಚನೀಯವಾಗಿದ್ದು, ಸಂಬಂಧಿಸಿದ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ, ಮುಜರಾಯಿ ಇಲಾಖೆಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ದೇವಾಲಯದ ಮೇಲೆ ಹಾಗೂ ಸುತ್ತಲಿನ ಗೋಡೆಗಳ ಮೇಲೆಲ್ಲಾ ಗಿಡಗಂಟೆಗಳು ಬೆಳೆದು, ದೇವಾಲಯಮ ದಿನದಿಂದ ದಿನಕ್ಕೆ ತನ್ನ ನೈಜತೆ ಕಳೆದುಕೊಳ್ಳುತ್ತಿದೆ ವಿಷಾದಿಸಿದರು.
ದೇವಾಲಯ ಪ್ರಾಂಗಣದಲ್ಲಿರುವ ಶಾಸನಗಳ ಮೇಲೆ ಸುಣ್ಣ ಬಳಿದಿದ್ದು, ದೇವಾಲಯದ ಹೊರ ಆವರಣದಲ್ಲಿ ಆಳ್ವರುಗಳ ಗುಡಿಯಲ್ಲಿ 9 ಆಳ್ವರ ವಿಗ್ರಹಗಳಿದ್ದು, ಜತೆಗೆ ರಾಮಾನುಜಾಚಾರ್ಯರು ಎನ್ನಲಾದ ಬೃಹದಾಕಾರದ ವಿಗ್ರಹ ಇರುವುದನ್ನು ವಿವರಿಸಿದರು.
ದೇವಾಲಯ ಗರ್ಭಗೃಹ, ಸುಕನಾಸ, ಮುಖಮಂಟಪಗಳನ್ನು ಒಳಗೊಂಡಿದ್ದು, ಮುಖಮಂಟಪದ ಮಧ್ಯದಲ್ಲಿ ಹೊಯ್ಸಳರ ಕಾಲದ್ದು ಎನ್ನಲಾದ ನಾಟ್ಯ ಪೀಠವಿರುವುದನ್ನು ಉಲ್ಲೇಖಿಸಿ ಇತಿಹಾಸ ವಿವರಗಳನ್ನು ನೀಡಿದರು.
ಇಲ್ಲಿರುವ ಶಾಸನಗಳಲ್ಲಿ ವಿಜಯನಗರದ ಸಾಮ್ರಾಜ್ಯದ ಬುಕ್ಕರಾಯ ಮತ್ತು ಅಚ್ಯುತರಾಯ ಎಂಬ ಹೆಸರು ಕಂಡುಬಂದಿರುವುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಜನಾರ್ದನಸ್ವಾಮಿ ದೇವಾಲಯದ ದಕ್ಷಿಣದಲ್ಲಿರುವ ಶಾಸನದ ಕುರಿತಂತೆ ವಿವರ ನೀಡಿದ ಇರ್ಷಾದ್ ಅವರು, ವಿಜಯನಗರದ ಸಾಮ್ರಾಜ್ಯದ ದೊರೆ 1ನೇ ಬುಕ್ಕರಾಯನ ಕಾಲದ್ದಾಗಿರುವ ಈ ದೇವಾಲಯದ ಅಭಿವೃದ್ಧಿಯು ಕ್ರಿ.ಶ ಎಂಬುದಾಗಿ ತಿಳಿಸಿದರು.
ಮಲ್ಲಿಗೆ ನಾಡಿನ ಚಂದನಹಳ್ಳಿ ಮತ್ತು ವೋಘನಾಡಿನ ಹರದನಪುರದ ವಾರ್ಷಿಕ ಆದಾಯದಲ್ಲಿ ಈ ದೇವಾಲಯದ ಪೂಜಾ ಕಾರ್ಯಗಳಿಗಾಗಿ ಗದ್ಯಾಣ ಹಣವನ್ನು ಹಾಗೂ ಉತ್ತರದ ದಿಕ್ಕಿನಲ್ಲಿರುವ ಕ್ರಿ.ಶ 555ರ ಕಾಲದ ಮತ್ತೊಂದು ಶಾಸನದಲ್ಲಿ ವಿಜಯನಗರದ ಅಚ್ಯುತರಾಯನ ಆಳ್ವಿಕೆಯ ಕಾಲದಲ್ಲಿ ಶೆಟ್ಟಿಗನಹಳ್ಳಿಪಾಳ್ಯದ ಜನಾರ್ಧನಸ್ವಾಮಿ ದೇವಾಲಯಕ್ಕೆ ಬೇಲೂರಿನ ತಿರುಮಲರಾಜ ಅರಸನ ಭಾವಮೈದ ರಘುಪತಿ ಒಡೆಯ ಎಂಬಾತ ಸ್ವಲ್ಪ ಭೂಮಿಯನ್ನು ಜನಾರ್ದನಸ್ವಾಮಿಯವರ ನಿತ್ಯಪೂಜೆಗಾಗಿ ದಾನವಾಗಿ ನೀಡಿರುವ ಕುರಿತು ತಿಳಿಸಿದರು.
ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಅಶೋಕ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಕಿರಣ್ ರಾವತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

