ಇದ್ದೂ ಇಲ್ಲದಂತಾಗಿರುವ ರೇಲ್ವೆ ನಿಲ್ದಾಣ
ಕ.ಪ್ರ. ವಾರ್ತೆ ಆಲೂರು ಏ. 19
ಪಟ್ಟಣದಿಂದ ಕೇವಲ ಫರ್ಲಾಂಗ್ನಷ್ಟು ದೂರದಲ್ಲಿ ಇರುವ ಹಂತನಮನೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರೇಲ್ವೆ ನಿಲ್ದಾಣ ಆಲೂರಿನ ಜನತೆಗೆ ಇದ್ದರೂ ಇಲ್ಲದಂತಾಗಿದೆ.
ಆಲೂರಿನ ಮೂಲಕ ಯಶವಂತಪುರ- ಮಂಗಳೂರು, ಮಂಗಳೂರಿನಿಂದ ಬೆಂಗಳೂರಿಗೆ ಪ್ರತಿದಿನ ರಾತ್ರಿ ರೈಲು ಸಂಚಾರವಿದ್ದರೆ ಸೋಮವಾರದಿಂದ ಶನಿವಾರದವರೆಗೆ ಒಂದು ದಿನ ಯಶವಂತಪುರದಿಂದ ರೈಲು ಮಂಗಳೂರಿಗೆ ಸಂಚರಿಸಿದರೆ, ಮತ್ತೊಂದು ದಿನ ಮಂಗಳೂರಿನಿಂದ ಬೆಂಗಳೂರಿಗೆ ರೈಲು ಸಂಚರಿಸುತ್ತದೆ.
ಇದರೊಂದಿಗೆ ದಿನಕ್ಕೆ ಐದಾರು ಗೂಡ್ಸ್ ರೈಲುಗಳ ಸಂಚಾರವಿದೆ. ಇಷ್ಟು ರೈಲುಗಳ ಸಂಚಾರವಿದ್ದರೂ ಆಲೂರಿನ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಇಲ್ಲಿ ಯಾವುದೇ ಪ್ಯಾಸೇಂಜರ್ ರೈಲಿನ ನಿಲುಗಡೆ ಇಲ್ಲ.
23-12-2009 ರಂದು ಉದ್ಘಾಟನೆಗೊಂಡ ಈ ರೇಲ್ವೆ ನಿಲ್ದಾಣ ಯಾರ ಪ್ರಯೋಜನಕ್ಕಾಗಿ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಈ ರೇಲ್ವೆ ನಿಲ್ದಾಣ ಹೆಸರಿಗಷ್ಟೇ ನಿಲ್ದಾಣವಾಗಿ ಪರಿಣಮಿಸಿದ್ದು, ಇಲ್ಲಿ ಯಾವುದೇ ರೈಲಿನ ನಿಲುಗಡೆ ಈವರೆಗೂ ಆಗದಿರುವುದೇ ಇವರ ನಿರಾಸೆಗೆ ಕಾರಣವಾಗಿದೆ. 1966 ರಲ್ಲಿ ಈ ಗ್ರಾಮದಲ್ಲಿ ಹಿಂದಿದ್ದ ರೇಲ್ವೆ ನಿಲ್ದಾಣ ಸ್ಥಳದಲ್ಲಿ ನೂತನ ನಿಲ್ದಾಣ ನಿರ್ಮಾಣವಾಗಿ ಆ ಸಂದರ್ಭದಲ್ಲಿ ಇಲ್ಲಿನ 60 ಎಕರೆ ಭೂಮಿಯನ್ನು ರೇಲ್ವೆ ಇಲಾಖೆ ವಶಪಡಿಸಿಕೊಂಡಿದ್ದು, ಆ ಸಮಯದಲ್ಲಿ ಮೀಟರ್ ಗೇಜ್ನ ಒಂದು ಜತೆ ಹಳಿಯನ್ನು ಹಾಗೂ ಚಿಕ್ಕದಾದ ನಿಲ್ದಾಣವನ್ನು ನಿರ್ಮಿಸಿ, ನಂತರ ಇಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಿ ಬೆಂಗಳೂರು- ಮಂಗಳೂರು ಪ್ಯಾಸೇಂಜರ್ ರೈಲು ನಿಲುಗಡೆ ಮಾಡಲಾಗುತ್ತಿತ್ತು.
ತಾಲೂಕಿನ ಜನತೆ ಇಲ್ಲಿಂದ ಮಂಗಳೂರು, ಸಕಲೇಶಪುರ, ಹಾಸನ, ಬೆಂಗಳೂರು, ಮೈಸೂರುಗಳಿಗೆ ಪ್ರಯಾಣಿಸುತ್ತಿದ್ದರು. ಅಲ್ಲದೆ ಅರಸೀಕೆರೆ ಜಂಕ್ಷನ್ನಿಂದ ಭಾರತದ ನಾನಾ ರಾಜ್ಯಗಳಿಗೂ ಪ್ರಯಾಣಿಸುತ್ತಿದ್ದರು. ಬೇಸಿಗೆ ಹಾಗೂ ದಸರಾ ರಜೆ ಸಂದರ್ಭದಲ್ಲಿ ರಾಜ್ಯದಲ್ಲಿ ನಾನಾ ಭಾಗಗಳಿಂದ ಪ್ರಕೃತಿ ಪ್ರಿಯರು ಆಲೂರು ಗ್ರಾಮದಲ್ಲಿ ಇರುವ ನೆಂಟರಿಷ್ಟರ ಮನೆಗಳಿಗೆ ಬಂದು ಇಲ್ಲಿಂದ ರೈಲಿನಲ್ಲಿ ಸುಬ್ರಹ್ಮಣ್ಯಕ್ಕೆ ಟಿಕೆಟ್ ಪಡೆದು ಪಶ್ಚಿಮಘಟ್ಟದ ರುದ್ರರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಂಡು ಸುಬ್ರಹ್ಮಣ್ಯ, ಧರ್ಮಸ್ಥಳಗಳಲ್ಲಿ ಇರುವ ದೇವಸ್ಥಾನಗಳ ದರ್ಶನ ಪಡೆದು ಪುನಃ ರೈಲಿನಲ್ಲೇ ವಾಪಸಾಗುತ್ತಿದ್ದರು.
ಆದರೆ ಈ ಮಾರ್ಗವನ್ನು ಮೀಟರ್ಗೇಜ್ನಿಂದ ಬ್ರಾಡ್ಗೇಜ್ಗೆ ಏರಿಸುವ ಕಾಮಗಾರಿಗಾಗಿ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಬ್ರಾಡ್ಗೇಜ್ ಆಗಿ ಪರಿವರ್ತನೆಗೊಂಡ ನಂತರ ಈ ಸ್ಥಳದಲ್ಲಿ ಇದ್ದ ಹಳೆಯ ನಿಲ್ದಾಣದ ಸ್ಥಳದಲ್ಲಿ ನೂತನವಾಗಿ ಸುಸಜ್ಜಿತ ರೈಲು ನಿಲ್ದಾಣ ನಿರ್ಮಿಸಿ ಒಂದು ಕಿ.ಮೀ. ಪ್ಲಾಟ್ ಫಾರಂ ಹಾಗೂ 3 ಕಿ.ಮೀ. ಡಬಲ್ ಕ್ರಾಸಿಂಗ್ ಹಳಿಗಳನ್ನು ನಿರ್ಮಿಸಲಾಯಿತು. ಹಾಗೂ 3 ಕಿ.ಮೀ.ವರೆಗೂ ನಿಲ್ದಾಣದ ಒಂದು ಬದಿಯಲ್ಲಿ ತಂತಿ ಬೇಲಿಯನ್ನು ಹಾಕಲಾಯಿತು.
ಗ್ರಾಮಸ್ಥರ ಪರದಾಟ: ಇದರಿಂದಾಗಿ ನಿಲ್ದಾಣ ಹಾಗೂ ರೇಲ್ವೆ ಕ್ರಾಸಿಂಗ್ಗಾಗಿ 60 ಎಕರೆ ಜಾಗ ನೀಡಿದ ಹಂತನಮನೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ನಿಲ್ದಾಣವಾದರೆ ಗ್ರಾಮ ಅಭಿವೃದ್ಧಿ ಕಾಣುತ್ತಿದೆ ಎಂಬ ಕನಸು ಕಂಡಿದ್ದ ಗ್ರಾಮಸ್ಥರು ನಿಲ್ದಾಣದಿಂದಾಗಿ ತಮ್ಮ ಜೀವನ ಸಾಗಣೆ ದುಸ್ಥರವಾಗುತ್ತಿರುವುದಕ್ಕೆ ರೇಲ್ವೆ ಇಲಾಖೆಯವರನ್ನು ಶಪಿಸುವಂತಾಗಿದೆ. ಏಕೆಂದರೆ ಗ್ರಾಮವಿರುವುದು ನಿಲ್ದಾಣದ ಒಂದು ಬಂದಿಯಲ್ಲಾದರೆ, ಗ್ರಾಮಸ್ಥರ ಹೊಲ-ಗದ್ದೆಗಳು ಇರುವುದು ರೇಲ್ವೆ ಹಳಿಯ ಇನ್ನೊಂದು ಬದಿಯಲ್ಲಿ. ಕೇವಲ ಒಂದು ಹಳಿಯನ್ನು ದಾಟಿದರೆ ಸಿಗುವ ಜಮೀನಿಗೆ ಹೋಗಲು 3 ಕಿ.ಮೀ. ಬಳಸಿ ಬರುವಂತಾಗಿದ್ದು, ಕೃಷಿ ಉಪಕರಣ ಹಾಗೂ ಜಾನುವಾರುಗಳನ್ನು ಸಾಗಿಸಲು ಹಾಗೂ ತಾವು ಬೆಳೆದ ಬೆಳೆಯನ್ನು ಮನೆಗೆ ತರಲು ಪರದಾಡುವಂತಾಗಿದೆ. ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದಾಗ ರೇಲ್ವೆ ಅಧಿಕಾರಿಗಳು ಅಂಡರ್ ಪಾಸ್ ರಸ್ತೆ ಮಾಡಿಕೊಡುವ ಭರವಸೆ ನೀಡಿದ್ದರು. ಭರವಸೆ ಭರವಸೆಯಾಗಿಯೇ ಉಳಿದಿದೆ.
ಹಂತನಮನೆ ಗ್ರಾಮದ ಕೆರೆಯನ್ನು ಹಲವೆಡೆ ಮುಚ್ಚಲಾಗಿದೆ. ಕೆರೆಯಲ್ಲಿ ನೀರಿಲ್ಲದೆ ಬೆಳೆದ ಬೆಳೆಯಲ್ಲಾ ಬಾಡುವಂತಾಗಿ ಅರ್ಧಕ್ಕರ್ಧ ಗ್ರಾಮಸ್ಥರು ತಮ್ಮ ಜಮೀನು ಹಾಳುಬಿಟ್ಟು ಕೂಲಿ ಮಾಡುವಂತಾಗಿದೆ.
ಕಳೆದ ವರ್ಷ ಮಾರ್ಗ ಪರಿಶೀಲನೆಗಾಗಿ ಬಂದಿದ್ದ ಸೌತ್ ವೆಸ್ಟರ್ನ್ ರೇಲ್ವೆಯ ಜಿಎಂ ಆರ್.ಎನ್. ಚತುರ್ವೇದಿಗೆ ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ತಮ್ಮ ಊರಿನಲ್ಲಿ ಹೋಗುವ ಬರುವ ರೈಲುಗಳನ್ನು ನೋಡಿ, ಎಂದು ನಾವು ಇಲ್ಲಿಂದ ಪ್ರಯಾಣಿಸುತ್ತೇವೆ ಎಂದು ಸಂಯಮದಿಂದ ಕಾಯುತ್ತಿರುವ ಜನತೆ ರೊಚ್ಚಿಗೆದ್ದು ಉಗ್ರ ಹೋರಾಟಕ್ಕೆ ಇಳಿಯುವ ಮುನ್ನ ರೇಲ್ವೆ ಸಚಿವರು ಶೀಘ್ರ ಇತ್ತ ಗಮನಹರಿಸಿ ಈ ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಮಾಡುವುದರ ಜತೆಗೆ ಅಂಡರ್ ಪಾಸ್ ರಸ್ತೆ ನಿರ್ಮಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

