ಹೇಮಾವತಿಗೆ ಜಾರಿ ವಿದ್ಯಾರ್ಥಿನಿ ದಾರುಣ ಸಾವು
ಹಾಸನ: ತಾಲೂಕಿನ ಗೊರೂರುನಲ್ಲಿರುವ ಹೇಮಾವತಿ ಜಲಾಶಯದ ಕ್ರಸ್ಟ್ ಗೇಟ್ಗಳಿಂದ ಧುಮ್ಮಿಕ್ಕಿ ಹರಿಯುವ ನೀರಿನ ಸೌಂದರ್ಯ ವೀಕ್ಷಿಸಲು ಹೋಗಿದ್ದ ಹಾಸನ ನಗರದ ಕಾಲೇಜಿನ ವಿದ್ಯಾರ್ಥಿನಿ ನದಿಗೆ ಜಾರಿಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಬುಧವಾರ ನಡೆದಿದೆ. ಶ್ರೀನಗರ ಬಡಾವಣೆ ನಿವಾಸಿ ಸಬೀನಾ ಸಾವನ್ನಪ್ಪಿದ ವಿದ್ಯಾರ್ಥಿನಿ. ಬಿಇಜಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಬಿಎಂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ ತನ್ನ ಸ್ನೇಹಿತರಾದ ತುಂಗಾ, ಸೌಮ್ಯ ಮತ್ತು ಸಂಗೀತ ಎಂಬುವರೊಡನೆ ನದಿಗಿಳಿದು ಆಟವಾಡುತ್ತಿದ್ದಾಗ ಆಕಸ್ಮಿಕ ಜಾರಿ ಮೃತಪಟ್ಟಿದ್ದಾರೆ. ಮೃತದೇಹದ ಪತ್ತೆಗಾಗಿ ಶೋಧನಾ ಕಾರ್ಯ ನಡೆಯತ್ತಿದೆ ಎಂದು ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣವರ್ ತಿಳಿಸಿದ್ದಾರೆ. ಗೊರೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಂದು ಗ್ರಂಥ ಬಿಡುಗಡೆ
ಹಾಸನ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸನ ವಿಭಾಗ, ಶಾಂತಲಾ ವೇದಿಕೆ ಇವರ ವತಿಯಿಂದ ಆಗಸ್ಟ್ 8ರಂದು ಬೆಳಗ್ಗೆ 11.30ಕ್ಕೆ ಕಾಲೇಜು ಸಭಾಂಗಣದಲ್ಲಿ ಕ್ವಿಟ್ ಇಂಡಿಯಾ ದಿನಾಚರಣೆ ಮತ್ತು ಪ್ರೊ. ಸಿ.ಎನ್. ಲೋಕಪ್ಪಗೌಡರ ಮಧ್ಯಕಾಲೀನ ಭಾರತ ಇತಿಹಾಸ ಗ್ರಂಥದ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದೆ. ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಕಾರ್ಯಕ್ರಮದ ಉದ್ಘಾಟನೆ ಮತ್ತು ಗ್ರಂಥ ಬಿಡುಗಡೆ ಮಾಡುವರು. ಕಾವ್ಯಶ್ರೀ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಿ.ಎಸ್. ಶಂಕರನಾರಾಯಣ ಗೌರವ ಸಮರ್ಪಣೆ ಮಾಡುವರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ರೂಪರಾಜ ಚಂದನ್ ವಹಿಸುವರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಸಿ.ಎನ್.ಲೋಕಪ್ಪಗೌಡ ವಹಿಸುವರು.
ಲೋಕಾಯುಕ್ತ ಪೊ. ಅಧೀಕ್ಷಕರ ಪ್ರವಾಸ ಇಂದು
ಹಾಸನ: ಕರ್ನಾಟಕ ಲೋಕಾಯುಕ್ತ, ಹಾಸನ ವಿಭಾಗದ ಪೊಲೀಸ್ ಅಧೀಕ್ಷಕ ಡಾ. ಸಿ.ಬಿ.ವೇದಮೂರ್ತಿ ಮತ್ತು ತಂಡವು ಆಗಸ್ಟ್ 8ರಂದು ಅರಕಲಗೂಡು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೆ ನಂತರ ಹೊಳೆನರಸೀಪುರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ 2 ರಿಂದ ಸಂಜೆ 5.30 ರವರೆಗೆ ಭೇಟಿ ನೀಡುವರು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಕುವೆಂಪು ಕಾಲೇಜು: ಸಾಂ. ಸಂಘಗಳ ಉದ್ಘಾಟನೆ
ಹಾಸನ: ಕುವೆಂಪು ಪ್ರಥಮ ದರ್ಜೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ, ಸ್ವಾಗತ ಹಾಗೂ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯಾಸಂಗದ ಜತೆಗೆ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ದೇಶವನ್ನು ಕಟ್ಟುವಂತಹ ಕೆಲಸ ಮಾಡಬೇಕು ಎಂದು ಹೇಳಿದರು. ಶಿಕ್ಷಕರು ಹಾಗೂ ಪೋಷಕರು ತಮ್ಮ ಮಕ್ಕಳು ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಕೇವಲ ಹೆಚ್ಚು ಅಂಕಗಳನ್ನು ತಮ್ಮ ಮಕ್ಕಳು ಪಡೆಯುತ್ತಿಲ್ಲ ಎಂದು ಅವರ ಮೇಲೆ ಒತ್ತಡವನ್ನು ಹಾಕುವುದು ಸರಿಯಲ್ಲ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿಯನ್ನು ಹೊಂದಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಎಚ್.ಎಸ್.ಪ್ರಕಾಶ್, ಮಾಜಿ ಶಾಸಕ ಬಿ.ವಿ.ಕರೀಗೌಡ, ನಿವೃತ್ತ ಡಿಡಿಪಿಐ ಚಾಮರಾಜ್, ಕಾಲೇಜಿನ ಪ್ರಾಂಶುಪಾಲೆ ಉಷಾ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

