ಕಸ ವಿಲೇವಾರಿ ಸಮರ್ಪಕ ನಿರ್ವಹಣೆಗೆ ಸೂಚನೆ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.8
ಲೋಕಾಯುಕ್ತ ಎಸ್ಪಿ ವೇದಮೂರ್ತಿ ಮತ್ತವರ ತಂಡ ಗುರುವಾರ ಪಟ್ಟಣಕ್ಕೆ ಭೇಟಿ ನೀಡಿ ಇಲ್ಲಿನ ಪುರಸಭೆ ಮತ್ತು ಬಿಸಿಎಂ ಇಲಾಖೆಗಳಿಗೆ ತೆರಳಿ ಇಲಾಖೆಗಳ ಕಾರ್ಯಯೋಜನೆ, ಯೋಜನೆಗಳ ಅನುಷ್ಠಾನ, ಪ್ರಗತಿ, ವಸ್ತುಸ್ಥಿತಿ ಹಾಗೂ ಅವುಗಳ ಸಮಗ್ರ ವರದಿಯ ಪರಿಶೀಲನೆ ನಡೆಸಿತು.
ಪುರಸಭೆಗೆ ಭೇಟಿ ನೀಡಿದ ಲೋಕಾಯುಕ್ತ ಎಸ್ಪಿ ವೇದಮೂರ್ತಿಯವರು ಪುರಸಭೆಯಲ್ಲಿ 2012-13ನೇ ಸಾಲಿನಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ, ಅವುಗಳ ಅನುಷ್ಠಾನ, ಪ್ರಗತಿಯ ವರದಿ ಪರಿಶೀಲನೆ ನಡೆಸಿದರು.
ಸಾರ್ವಜನಿಕ ದೂರಿನ ಅನ್ವಯ ಪುರಸಭೆ ಕೈಗೊಂಡಿರುವ ಕಸ ಸಂಗ್ರಹಣೆ, ಕಸ ವಿಲೇವಾರಿ, ಹಾಗೂ ಪಟ್ಟಣದಲ್ಲಿನ ಸ್ವಚ್ಛತೆ, ಕೊರತೆಯ ಕುರಿತಂತೆ ಪುರಸಭೆಯ ಪರಿಸರ ಎಂಜಿನೀಯರ್ ಹಾಗೂ ಪ್ರಭಾರಿ ಮುಖ್ಯಾಧಿಕಾರಿಗಳನ್ನು ವರದಿ ಕೇಳಿದರು.
ಪಟ್ಟಣದ ವ್ಯಾಪ್ತಿಯಲ್ಲಿನ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಸ್ಥಳಕ್ಕೂ ಭೇಟಿ ನೀಡಿದ ಲೋಕಾಯುಕ್ತರು ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು. ಅಲ್ಲದೇ ಸಾರ್ವಜನಿಕರ ದೂರಿನ ಅನ್ವಯ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಚರಂಡಿಗಳಲ್ಲಿನ ಅವ್ಯವಸ್ಥೆಯಿಂದಾಗಿ ಉಂಟಾಗಿರುವ ಸ್ವಚ್ಛತೆಯ ಕುರಿತಂತೆ ಸ್ಥಳದಲ್ಲಿನ ಆಟೋ ಚಾಲಕರು ಪುರಸಭೆಯ ನಿರ್ಲಕ್ಷದ ಬಗ್ಗೆ ದೂರಿನ ಸುರಿಮಳೆಗೈದರು.
ಕೂಡಲೇ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚಿಸಿದ ಲೋಕಾಯುಕ್ತರು, ನಂತರ ಇಲ್ಲಿನ ಅಂಬೇಡ್ಕರ್ ಬಡಾವಣೆಗೆ ಭೇಟಿ ನೀಡಿ ಪುರಸಭೆಯ ನಿರ್ಲಕ್ಷ್ಯದಿಂದಾಗಿ ಸಮರ್ಪಕ ರಸ್ತೆ ಸೌಲಭ್ಯ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸದಿರುವ ಕುರಿತಂತೆಯೂ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಪ್ರಕಾಶ್ ಹಾಗೂ ಪರಿಸರ ಎಂಜಿನೀಯರ್ ಅರ್ಚನಾ ಅವರನ್ನು ಸಮಜಾಯಿಷಿ ಕೇಳಿದರು. ಈ ದೂರುಗಳನ್ನು ಕೂಡಲೇ ಸರಿಪಡಿಸಿ ತಮಗೆ ವರದಿ ನೀಡುವಂತೆ ಸೂಚಿಸಿದರು.
ಲೋಕಾಯುಕ್ತರು ಪುರಸಭೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಮುಖವಾಗಿ ಪುರಸಭೆಯ ವತಿಯಿಂದ ನಿರ್ಮಿಸಲಾಗಿರುವ ಸುಮಾರು 300ಕ್ಕೂ ಹೆಚ್ಚಿನ ವಾಣಿಜ್ಯ ಮಳಿಗೆಗಳಿಂದ ಪುರಸಭೆಗೆ ಸುಮಾರು 72ಲಕ್ಷ ರು.ಗಳಷ್ಟು ಬಾಡಿಗೆ ಬಾಕಿ ಬರಬೇಕಾಗಿರುವ ವಿಷಯದ ಕುರಿತಂತೆ, ಕೂಡಲೇ ಸದರಿ ಮಳಿಗೆದಾರರಿಗೆ ನೋಟಿಸ್ ನೀಡಿ, ಬರಬೇಕಾಗಿರುವ ಬಾಕಿ ಬಾಡಿಗೆಯನ್ನು ಸೂಕ್ತ ಕ್ರಮ ಕೈಗೊಂಡು ವಸೂಲು ಮಾಡಿ ವರದಿ ನೀಡುವಂತೆ ಸೂಚಿಸಿದರು.
ಬಿ.ಸಿ.ಎಂ ಇಲಾಖೆಗೆ ಭೇಟಿ ನೀಡಿದ ಲೋಕಾಯುಕ್ತರು ಇಲಾಖೆಯ ವ್ಯಾಪ್ತಿಯಲ್ಲಿನ ಹಾಸ್ಟೆಲ್ಗಳಲ್ಲಿನ ವಿದ್ಯಾರ್ಥಿಗಳ ಹಾಜರಾತಿ, ವ್ಯವಸ್ಥೆಗಳ ವಿವರ, ಹಾಗೂ ವಾರ್ಡನ್ಗಳ ಕಾರ್ಯವೈಖರಿ ಹಾಗೂ ಇವುಗಳ ಮೇಲುಸ್ತುವಾರಿಯನ್ನು ಪರಿಶೀಲಿಸಿರುವ ಇಲಾಖೆಯ ಅಧಿಕಾರಿ ತಿಮ್ಮೇಗೌಡ ಅವರ ಭೇಟಿಯ ವಿವರಗಳ ಪಟ್ಟಿಯನ್ನು ಪರಿಶೀಲಿಸಿದರು.
ಇಲಾಖೆಯ ಸಿಬ್ಬಂದಿಯೊಬ್ಬರು ಕಳೆದ ತಿಂಗಳಿನಲ್ಲಿ 7 ದಿನ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರೂ ಅವರ ವೇತನವನ್ನು ನೀಡಿರುವ ಕುರಿತಂತೆ ಲೋಪವನ್ನು ಪತ್ತೆಹಚ್ಚಿದ ಲೋಕಾಯುಕ್ತ ಎಸ್ಪಿ ವೇದಮೂರ್ತಿ ಅವರು ಈ ಕುರಿತಂತೆ ಸೂಕ್ತ ಸಮಜಾಯಿಷಿ ನೀಡುವಂತೆ ಬಿ.ಸಿ.ಎಂ ಅಧಿಕಾರಿ ತಿಮ್ಮೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

