ಬರಗೆಟ್ಟಿದ್ದರೂ ಪಟ್ಟಿಯಿಂದ ಅರಸೀಕೆರೆ ಕೈಬಿಟ್ಟ ಸರ್ಕಾರ
ಪಿ.ಶಾಂತಕುಮಾರ್
ಅರಸೀಕೆರೆ: ಸತತ ಬರದ ಬೇಗುದಿಗೆ ಸಿಕ್ಕು ನಲುಗಿ ಇಲ್ಲಿನ ಆರ್ಥಿಕ ಮೂಲವಾಗಿದ್ದ ತೆಂಗಿನ ಮರಗಳು ಸುಳಿ ಬಿದ್ದು ಹೋಗಿ ಕಂಗಾಲಾಗಿರುವ ರೈತರು ತಮ್ಮ ಬದುಕಿಗಾಗಿ ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅರಸೀಕೆರೆ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಸರ್ಕರ ಕೈ ಬಿಟ್ಟಿದೆ.
ಇತ್ತೀಚಿಗೆ ಸರ್ಕಾರ ಬಿಡುಗಡೆ ಮಾಡಿರುವ 20 ಜಿಲ್ಲೆಗಳ 51 ತಾಲೂಕುಗಳ ಪಟ್ಟಿಯಲ್ಲಿ ಅರಸೀಕೆರೆ ತಾಲೂಕಿನ ಹೆಸರು ಮಾಯವಾಗಿದೆ. ಇದು ಆತಂಕ ಮತ್ತು ಆಶ್ಚರ್ಯಕ್ಕೆ ಎಡೆಮಾಡಿದೆ. ಮಳೆ ಅಭಾವದಿಂದ ತಾಲೂಕಿನಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ಸಂಪೂರ್ಣ ನಾಶವಾಗಿವೆ ಎಂದು ತೋಟಗಾರಿಕಾ ಇಲಾಖೆ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದರೂ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಈ ಕ್ಷೇತ್ರವನ್ನು ಪಟ್ಟಿಯಿಂದ ಕೈಬಿಟ್ಟಿರಬಹುದೆಂಬ ಅನುಮಾನ ತಾಲೂಕಿನ ಜನರನ್ನು ಕಾಡಲಾರಂಭಿಸಿದೆ.
ಮುಂಗಾರು ಆರಂಭವಾದಾಗಿನಿಂದಲೂ ಮಳೆ ಇಲ್ಲಿಯ ರೈತನ ಬದುಕಿನೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಿದ್ದರಿಂದ ರೈತರು ಸಾಲ ಮಾಡಿ ಆಭರಣಗಳನ್ನು ಅಡವಿಟ್ಟು ಕೈಯಲ್ಲಿದ್ದ ಅಷ್ಟಿಟ್ಟು ಹಣವನ್ನು ಹಾಕಿ ಬಿತ್ತನೆ ಮಾಡಿ ಮತ್ತೆ ವರುಣನ ಅವಕೃಪೆಯಿಂದಾಗಿ ಸಂಪೂರ್ಣ ಬೆಳೆ ನಾಶವಾಗಿ ಬರಿಗೈಯಾಗಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆದರೆ, ಇಲ್ಲಿನ ಪರಿಸ್ಥಿತಿಯನ್ನರಿತು ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಸರ್ಕಾರ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ವಿರೋಧ ಪಕ್ಷದ ಶಾಸಕರಿದ್ದಾರೆ ಎಂಬ ಕಾರಣಕ್ಕೆ ರೈತರ ಹಿತ ಮರೆತು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಹ ವಾತಾವರಣ ನಿರ್ಮಾಣ ಮಾಡಲು ಹೊರಟಂತಿದೆ. ಅರಸೀಕೆರೆ ತಾಲೂಕಿಗೆ ಸೇರಿಕೊಂಡಿರುವ ಬೇಲೂರು ಕ್ಷೇತ್ರದ ಜಾವಗಲ್ ತಮ್ಮ ಕಾರ್ಯಕ್ಷೇತ್ರವೆಂಬುದನ್ನು ಶಾಸಕ ವೈ.ಎನ್.ರುದ್ರೇಶಗೌಡ ಮರೆತಿದ್ದಾರೆ ಎಂಬುದೇ ವಿಪರ್ಯಾಸದ ಸಂಗತಿಯಾಗಿದೆ.
ಕುಡಿಯಲು ನೀರಿಲ್ಲದೆ, ಜಾನುವಾರುಗಳಿಗೆ ಮೇವಿಲ್ಲದೆ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೂ ಇದು ಅಧಿಕಾರಿಗಳ ಗಮನಕ್ಕೆ ಬಂದಂತಿಲ್ಲ. ಕೆಲ ರೈತ ಮುಖಂಡರು ಗೋಶಾಲೆ ಆರಂಭಿಸುವಂತೆ ಒತ್ತಾಯಿಸಿ ಆಮರಣಾಂತ ಉಪವಾಸ ಕೈಗೊಂಡ ಘಟನೆ ವಿಧಾನಪರಿಷತ್ತಿನಲ್ಲಿ ಪ್ರಸ್ತಾವವಾಗಿ ಅರಸೀಕೆರೆ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವರು ವಾಗ್ದಾನ ನೀಡಿದ್ದು ಮಾಸುವ ಮುನ್ನವೇ ಸರ್ಕಾರ ತಾಲೂಕಿನ ರೈತರನ್ನು ಆತಂಕದ ಮಡುವಿಗೆ ತಳ್ಳಿದೆ.
ಜಿಲ್ಲಾ ರಾಜಕಾರಣಿಗಳ ನಿರಂತರ ಅವಕೃಪೆಗೆ ಪಾತ್ರವಾಗಿ ಮಲತಾಯಿ ಧೋರಣೆಗೊಳಗಾಗಿದ್ದ ತಾಲೂಕು ಮತ್ತೆ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಲ್ಲಿ 600-700 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಿಕ್ಕರೂ ಪ್ಲೋರೈಡ್ ಸಮಸ್ಯೆಯಿಂದ ಬಳಲುವಂತಾಗಿರುವುದು ಒಂದೆಡೆಯಾದರೆ ಮಳೆಯ ಅಭಾವದಿಂದ ಅಂತರ್ಜಲ ಪಾತಾಳ ತಲುಪಿದೆ. ಕೆರೆ-ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿವೆ. ಇಂತಹ ಎಲ್ಲ ಸಂಕಷ್ಟದ ಸನ್ನಿವೇಶವನ್ನು ಎದುರಿಸುತ್ತಿರುವ ರೈತನ ಮೇಲೆ ಸರ್ಕಾರಕ್ಕೆ ಕರುಣೆ ಬಾರದಿರುವುದು ಆಶ್ಚರ್ಯದ ಸಂಗತಿಯಾಗಿದೆ.
ತಾಲೂಕಿನ ಬಾಣಾವರ, ಕಣಕಟ್ಟೆ, ಕಸಬಾ, ಗಂಡಸಿ, ಹಾಗೂ ಜಾವಗಲ್ ಹೋಬಳಿಗಳ ವ್ಯಾಪ್ತಿಯಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದಿದ್ದರಿಂದ ಬೆಳೆ ಸಂಪೂರ್ಣ ನಾಶಗೊಂಡಿದೆ. ಅಧಿಕಾರಿಗಳು ಯಾವ ಮಾನದಂಡದ ಮೇಲೆ ಸರ್ಕಾರಕ್ಕೆ ವರದಿ ಕಳುಹಿಸಿದ್ದಾರೆ ಎಂಬುದು ಅರ್ಥವಾಗದ ಸಂಗತಿಯಾಗಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ.
ಘೋರ ಅನ್ಯಾಯ: ಮುಂಗಾರು ಹಂಗಾಮಿನಿಂದಲೂ ಉತ್ತಮ ಮಳೆ ಬೀಳುತ್ತಿರುವ ಪ್ರದೇಶಗಳನ್ನು ಬರಪೀಡಿತವೆಂದು ಘೋಷಿಸಿ ನೈಜವಾಗಿ ಬರವನ್ನು ಎದುರಿಸುತ್ತಿರುವ ತಾಲೂಕನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಸರ್ಕಾರ ತಾಲೂಕಿನ ರೈತ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ. ಜನಪ್ರತಿನಿಧಿಗಳು ಶಾಸನಸಭೆಯಲ್ಲಿ ತಮ್ಮ ತಾಲ್ಲೂಕಿನ ವಾಸ್ತವ ಸ್ಥಿತಿಯನ್ನು ತಿಳಿಸುವಲ್ಲಿ ವಿಫಲರಾದರೇ ಅಥವಾ ಅಧಿಕಾರಿಗಳು ಅಸಮರ್ಪಕ ಹಾಗೂ ಅಸಮಂಜಸ ವರದಿ ನೀಡಿದ್ದಾರೆಯೇ ಎನ್ನುವ ಪ್ರಶ್ನೆ ಸಹಜವಾಗಿಯೇ ರೈತ ಸಮುದಾಯವನ್ನು ಕಾಡತೊಡಗಿದೆ.
ಮಲತಾಯಿ ಧೋರಣೆ: ತಾಲೂಕಿನಲ್ಲಿ ಜೆಡಿಎಸ್ ಶಾಸಕರಿರುವ ಹಿನ್ನೆಲೆಯಲ್ಲಿ ಸರ್ಕಾರ ಅರಸೀಕೆರೆ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈ ಬಿಡುವ ಮೂಲಕ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತಾಳಿದ್ದು, ಇದು ಕಾಂಗ್ರೆಸ್ ಸರ್ಕಾರದ ಅಮಾನವೀಯ ನೀತಿ ಎಂದು ರೈತ ಶಿವಯ್ಯ ಖಂಡಿಸಿದ್ದಾರೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಪ್ರಯತ್ನ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

