ಹಾಸನ

ಟಿಎಪಿಸಿಎಂಎಸ್ನಿಂದ ರಸಗೊಬ್ಬರ ವಿತರಣೆಗೆ ಎಲ್ಲ ನೆರವು

Published On :

ಕ.ಪ್ರ.ವಾರ್ತೆ   ಅರಸೀಕೆರೆ   ಆ.8
ಸತತ ಬರಗಾಲದಿಂದ ಬೇಸತ್ತಿರುವ ರೈತರಿಗೆ ಸಂಜೀವಿನಿಯಂತೆ ಸೋನೆ ಮಳೆ ಬಂದಿದ್ದು, ಬಿತ್ತನೆ ಮಾಡಲು ನೆರವಾಗುವ ದೃಷ್ಟಿಯಲ್ಲಿ ಟಿಎಪಿಸಿಎಂಎಸ್ನಿಂದ ಅಗತ್ಯ ಪ್ರಮಾಣದ ರಸಗೊಬ್ಬರ ವಿತರಣೆಗೆ ಎಲ್ಲ ನೆರವು ನೀಡಲಾಗುವುದೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ  ಪಾಲ್ಗೊಂಡು ಮಾತನಾಡಿದರು.
ಖಾಸಗಿ ವ್ಯಾಪಾರಸ್ಥರಿಂದ ರೈತರು ಶೋಷಣೆಗೆ ಒಳಗಾಗದಂತೆ ಸಹಕಾರ ಸಂಘಗಳ ಮೂಲಕ ಅತ್ಯಂತ ಕಡಿಮೆ ದರದಲ್ಲಿ ರಸಗೊಬ್ಬರ ಪೂರೈಸಲು ಸೂಚಿಸಲಾಗಿದ್ದು ಒಂದು ವೇಳೆ ಗೊಬ್ಬರ ಖರೀದಿಗೆ ಹಣಕಾಸಿನ ಕೊರತೆ ಕಂಡುಬಂದಲ್ಲಿ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆಯ ವೇಳೆಯಲ್ಲಿ ರಸಗೊಬ್ಬರ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು.
2ನೇ ಬಾರಿಗೆ ಆಯ್ಕೆಯಾದ ತಮ್ಮನ್ನು ತಾಲೂಕಿನಾದ್ಯಂತ ಜನರು, ಸಂಘ-ಸಂಸ್ಥೆಗಳ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು ತಾಲೂಕಿನ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದ್ದು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಕೆರೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ತಾವು ಕ್ರಮ ವಹಿಸುವುದಾಗಿ ತಿಳಿಸಿದ ಅವರು ಜನಸಾಮಾನ್ಯರ, ಸಂಘ-ಸಂಸ್ಥೆಗಳ ಹಿತ ಕಾಯುವ ಕೆಲಸ ಮಾಡುವುದಾಗಿ ನುಡಿದರು.
ಸಂಸ್ಥೆಯ ಅಧ್ಯಕ್ಷ ಸ್ವಾಮಿ ಮಾತನಾಡಿ, ಸಹಕಾರ ಸಂಘಗಳ ಅಭಿವೃದ್ಧಿಗೆ ಶಾಸಕರು ದಿಟ್ಟ ಕ್ರಮ ತೆಗೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ನಷ್ಟದಲ್ಲಿದ್ದ ಸಂಸ್ಥೆ ಇದೀಗ ಚೇತರಿಸತೊಡಗಿದೆ. ಅವರ ಸಹಕಾರ ಮತ್ತಷ್ಟು ದೊರೆತರೆ ರೈತರಿಗೆ, ಷೇರುದಾರರಿಗೆ ಇನ್ನಷ್ಟು ನೆರವು ನೀಡಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಮುರುಂಡಿ ಶಿವಯ್ಯ, ತಾಪಂ ಅಧ್ಯಕ್ಷ ಹೆಚ್.ಟಿ.ಶಿವಮೂರ್ತಿ, ಕಾರ್ಯದರ್ಶಿ ಎಸ್.ಎನ್.ತಿಮ್ಮೇಗೌಡ, ಸಂಸ್ಥೆಯ ನೌಕರರು ಹಾಗೂ ಜನಪ್ರತಿನಿಧಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.