ಧಾರ್ಮಿಕ ಭಾವನೆ ಉತ್ತಮ ವ್ಯಕ್ತಿತ್ವದ ಪ್ರತೀಕ
ಅರಸೀಕೆರೆ: ದೇವಾಲಯ ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿಗೆ ಕೊಂಡೊಯ್ಯುವ ಜ್ಞಾನ ದೇಗುಲಗಳಾಗಿದ್ದು, ಈ ನಿಟ್ಟಿನಲ್ಲಿ ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ಶ್ರದ್ಧಾಭಕ್ತಿಯ ಕೇಂದ್ರ ಎಂದು ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕಣಕಟ್ಟೆ ಹೋಬಳಿಯ ಎಸ್.ಕಸುವನಹಳ್ಳಿಯಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ದೇವಾಲಯಕ್ಕೆ ಕಳಸ ಸ್ಥಾಪನೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸ್ವಾಗತಾರ್ಹ ಬೆಳವಣಿಗೆ: ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಗುರು ಹಿರಿಯರ ಬಗ್ಗೆ ಗೌರವ ದೇವರ ಮೇಲೆ ಭಕ್ತಿ ಇರುವುದರಿಂದಲೇ ಗ್ರಾಮದ ಎಲ್ಲಾ ಜನರು ದೇಣಿಗೆ ಸಂಗ್ರಹಿಸಿ ಜೀರ್ಣೋದ್ಧಾರದ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದರ್ಶಯುತ ಮೌಲ್ಯ ಮುಖ್ಯ: ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ದೈವತ್ವದ ಆರಾಧನೆ ಮಾಡುತ್ತಿರುವುದರಿಂದ ನಾಡು ಸಮೃದ್ಧವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಆದರ್ಶಯುತ ಮೌಲ್ಯಗಳನ್ನು ಚಿಕ್ಕಂದಿನಿಂದಲೇ ಕಲಿಸಿಕೊಟ್ಟರೆ ಅವರು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.
ವಿದೇಶಿಯರಿಗೂ ಆಕರ್ಷಣೆ: ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ ವಿದೇಶಿಯರು ಭಾರತೀಯ ಸಂಸ್ಕೃತಿಯತ್ತ ಆಕರ್ಷಿತರಾಗಿ ಅದನ್ನು ಅಳವಡಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಕಾಣಲು ಹವಣಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವಜನಾಂಗವನ್ನು ಸರಿದಾರಿಗೆ ತರುವ ಮೂಲಕ ಸಮಾಜ ನಿರ್ಮಾಣಕ್ಕೆ ಎಲ್ಲರೂ ಬದ್ದರಾಗಬೇಕೆಂದರು.
ಅಜ್ಞಾನಿಗಳು ದುಷ್ಚಟಗಳ ದಾಸರು: ಬುದ್ಧಿವಂತರು ಸಮಯವನ್ನು ವ್ಯರ್ಥ ಮಾಡದೆ ಮತ್ತಷ್ಟು ಜ್ಞಾನ ಸಂಪಾದನೆ ಮಾಡಿಕೊಳ್ಳುತ್ತಾರೆ. ಅಜ್ಞಾನಿಗಳು
ವ್ಯರ್ಥವಾಗಿ ಕಾಲಹರಣ ಮಾಡುತ್ತ ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗಿ ತಮ್ಮ ಆರೋಗ್ಯದ ಜೊತೆಗೆ, ತಮ್ಮ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ. ಭಗವಂತನು ಕೊಟ್ಟಿರುವ ಅತ್ಯಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ದೇವರ ಸ್ಮರಣೆ, ಸಮಾಜಸೇವಾ ಕಾರ್ಯಗಳು, ಪುಣ್ಯದ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬೆಲಗೂರು ಆಂಜನೇಯ ಸ್ವಾಮಿ ಕ್ಷೇತ್ರದ ಬಿಂದು ಮಾಧವ ಶರ್ಮ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿಗಳ ಸಮ್ಮುಖದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ದಿಬ್ಬದಹಳ್ಳಿ ಶ್ಯಾಮಸುಂದರ್, ಸಾಹಿತಿ ಚಟ್ಟನಹಳ್ಳಿ ಮಹೇಶ್ ಮಾತನಾಡಿದರು.
ಜಿಪಂ ಸದಸ್ಯ ಪಾರ್ವತಮ್ಮ ಶಿವಮೂರ್ತಿ, ತಾಪಂ ಸದಸ್ಯ ದಿನೇಶ್, ಎಪಿಎಂಸಿ ಉಪಾಧ್ಯಕ್ಷ ಸನಾವುಲ್ಲಾ ಇನ್ನಿತರರು ಇದ್ದರು. ದೇವಾಲಯ ಉದ್ಘಾಟನೆಯ ಅಂಗವಾಗಿ ಸುತ್ತಮುತ್ತಲಿನ ಗ್ರಾಮದೇವತೆಗಳನ್ನು ಕರೆತಂದು ದೇವತಾ ಪ್ರಾರ್ಥನೆ, ಪುಣ್ಯಾಹ, ಅಂಕುರಾರ್ಪಣೆ, ರಕ್ಷಾಬಂಧನ, ವಾಸ್ತುಹೋಮ, ಪರ್ಯಾಗ್ನೀಕರಣ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಡನೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

