ಹಾಸನ

ಚಿರತೆ ದಾಳಿಗೆ ತುತ್ತಾದ ಕುಟುಂಬ ಪ್ರತಿಭಟನೆ

Published On :

ಕ.ಪ್ರ ವಾರ್ತೆ೤ ಹಾಸನ೤ ಆ. 13
ಚಿರತೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಸಣ್ಣಮ್ಮ ಕುಟುಂಬಕ್ಕೆ ಇನ್ನೂ ಪರಿಹಾರ ನೀಡದಿರುವುದನ್ನು ಖಂಡಿಸಿ ಆಕೆಯ ಕುಟುಂಬವರ್ಗದವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ, ನಂತರ  ಜಿಲ್ಲಾಧಿಕಾರಿಗೆ ಮನವಿ ನೀಡಿದರು.
 ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿ ಹರದನಹಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯ  ಸಣ್ಣಮ್ಮ ಎಂಬುವರು ಪರಿಶಿಷ್ಟ ಆದಿ ದ್ರಾವಿಡ ಉಪಜಾತಿಗೆ ಸೇರಿದವರು. ಇವರು ಜೂ.9ರಂದು ಕಾಣೆಯಾಗಿದ್ದರು.  ನಂತರ ಕುಟುಂಬದವರು ಸಂಬಂಧಿಕರ ಮನೆಗಳಲ್ಲಿ ಇರಬಹುದು ಎಂದು ಹುಡುಕಾಟ ನಡೆಸಿದ್ದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ.
  ಈ ಸಂದರ್ಭದಲ್ಲಿ ಚಿರತೆ ಏನಾದರೂ ದಾಳಿ ನಡೆಸಿರಬಹುದೇ ಎಂಬ ಅನುಮಾನದಿಂದ ಬೆಟ್ಟದ ತಪ್ಪಲಿನಲ್ಲಿ ಹುಡುಕಾಟ ನಡೆಸಿದಾಗ ಸಣ್ಣಮ್ಮನ ಶವ ಪತ್ತೆಯಾಗಿತ್ತು. ಈ ಶವ ಗುರುತು ಸಿಗದಷ್ಟು ಹಾಳಾಗಿತ್ತು. ಅದು ಚಿರತೆ ತಿಂದು ಹಾಕಿರುವುದು ಸಹ ಸಾಬೀತಾಗಿದೆ.
 ಇವರು ಸಾವನ್ನಪ್ಪಿ 3 ತಿಂಗಳು ಕಳೆಯುತ್ತಿದ್ದರೂ ದಲಿತ ವಿರೋಧಿ ನೀತಿ ಅನುಸರಿಸುವ ಮೂಲಕ ಪರಿಹಾರ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
  ಈ ಭಾಗದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆ ದಾಳಿಗೆ ಸಾವನ್ನಪ್ಪಿರುವ ಬೇರೆ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ.
  ಆದರೆ ನಮಗೆ ಮಾತ್ರ ಇನ್ನೂ ಪರಿಹಾರ ನೀಡಿಲ್ಲ. ಅರಣ್ಯ ಇಲಾಖೆಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದರೂ ವಿನಾಕಾರಣ ಹೇಳಿ ಪರಿಹಾರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
  ಚಿರತೆ ದಾಳಿಯಿಂದಲೇ ಸಣ್ಣಮ್ಮ ಸಾವನ್ನಪ್ಪಿರುವ ಬಗ್ಗೆ ದೃಢಪಟ್ಟಿದ್ದರೂ ನಿರ್ಲಕ್ಷ್ಯ ತೋರಲಾಗುತ್ತಿದೆ.
 ಈ ಬಗ್ಗೆ ಹಲವು ಬಾರಿ ಪರಿಹಾರಕ್ಕೆ ಒತ್ತಾಯಿಸಿದ್ದರೂ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
 ಅಲ್ಲದೆ ಸಣ್ಣಮ್ಮನ ಕುಟುಂಬಕ್ಕೆ ಪರಿಹಾರ ನೀಡದಂತೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಅನಾಮಧೇಯ ಹೆಸರಿನಲ್ಲಿ ಪತ್ರ ಬರೆದಿದ್ದಾರೆ. ಹೀಗಾಗಿ ಆ ಪತ್ರಕ್ಕೆ ಅರಣ್ಯಾಧಿಕಾರಿಗಳು ಹೆಚ್ಚು ಮಹತ್ವ ನೀಡಿ,  ಪರಿಹಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಇನ್ನಾದರೂ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಈ ವಿರುದ್ಧ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
 ಪ್ರತಿಭಟನೆಯಲ್ಲಿ ಸಣ್ಣಮ್ಮನ ಪತಿ ರಂಗಯ್ಯ, ಪುತ್ರ ಗಿರೀಶ್ ಹಾಗೂ ತಿಮ್ಮಯ್ಯ ಇದ್ದರು.     


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.