ಮಕ್ಕಳಿಗೆ ಹಾಲು ವಿತರಣೆಯಲ್ಲಿ ನಿಗಾವಹಿಸಿ
ಕ.ಪ್ರ.ವಾರ್ತೆ ಹಾಸನ ಆ. 13
ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲು ವಿತರಣೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಯಾವುದೇ ವ್ಯತ್ಯಯವಾಗದಂತೆ ಎಚ್ಚರಿಕೆಯಿಂದ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಹಾಲು ವಿತರಣೆ - ಐಸಿಡಿಎಸ್ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಈ ತಿಂಗಳಾಂತ್ಯದವರೆಗೆ ಅಗತ್ಯದಷ್ಟು ಹಾಲಿನ ಪುಡಿ, ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಅಂಕಿ ಅಂಶ ಪಡೆದರು.
ಹಿನ್ನೆಡೆ ಆಗಬಾರದು: ಹಾಲು ವಿತರಣೆ ಯೋಜನೆಗೆ ಯಾವೊಂದು ಅಂಗನವಾಡಿ ಶಾಲೆಗಳಲ್ಲಿ ಹಿನ್ನಡೆಯಾಗಬಾರದು. ಹಾಗಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳೆ ಹೊಣೆಗಾರರಾಗ ಬೇಕಾಗುತ್ತದೆ ಎಂದ ಜಿಲ್ಲಾಧಿಕಾರಿ ಹಾಲು ಅಥವಾ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಸ್ವಚ್ಚತೆ ಹಾಗೂ ಪೌಷ್ಠಿಕ ಆಹಾರ ನೀಡುವಂತೆ ತಿಳಿಸಿದರು.
ಪ್ರತಿಯೊಂದು ಅಂಗನವಾಡಿಗಳಿಗೆ ಗ್ಯಾಸ್ ಹಾಗೂ ವಿದ್ಯುತ್ ಸಂಪರ್ಕ ಪಡೆಯುವುದು ಕಡ್ಡಾಯ ಎಂದ ಅವರು ಅರಸೀಕೆರೆ ತಾಲೂಕಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆಯಲು ಹಣ ಪಾವತಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ತಿಂಗಳ ಅಂತ್ಯದೊಳಗೆ ಸಮಸ್ಯೆ ಬಗೆಹರಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ನಿರ್ದೇಶನ ನೀಡಿದರು. ಠೇವಣಿ ಮಾಡಿದ್ದರೂ ಗ್ಯಾಸ್ ಸಂಪರ್ಕ ನೀಡದಿರುವ ಕಡೆಗಳಲ್ಲಿ ವಾರದೊಳಗೆ ಸಮಸ್ಯೆ ಬಹೆರಿಸುವುದಾಗಿ ತಿಳಿಸಿದರು. ಯಾವುದೇ ಅಂಗನವಾಡಿಗಳಲ್ಲಿ ಹಾಲು ವಿತರಣೆ, ಗ್ಯಾಸ್ ಸಂಪರ್ಕದ ಕೊರತೆ ಉಂಟಾಗದಂತೆ ಸಮನ್ವಯತೆ ಸಾಧಿಸಿ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಿದಾನಂದ್ ಅವರಿಗೆ ತಿಳಿಸಿದರು.
ಅಪೌಷ್ಠಿಕ ಮಕ್ಕಳ ಆರೈಕೆ ಕೇಂದ್ರ: ಇದೇ ರೀತಿ ಗರ್ಭಿಣಿ, ಬಾಣಂತಿಯರಿಗೆ ನೀಡಲಾಗುವ ಪೌಷ್ಠಿಕ ಆಹಾರದ ವಿತರಣೆಯಲ್ಲೂ ಯಾವುದೇ ವ್ಯತ್ಯಯವಾಗದಂತೆ ಅನುಷ್ಠಾನಗೊಳಿಸಿ ಜಿಲ್ಲೆಯಲ್ಲಿರುವ 302 ಅಪೌಷ್ಠಿಕ ಮಕ್ಕಳಿಗೆ ಕಾಲ ಕಾಲಕ್ಕೆ ತಪಾಸಣೆಯಾಗಬೇಕು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಅಪೌಷ್ಠಿಕ ಮಕ್ಕಳ ಆರೈಕೆ ಕೇಂದ್ರ ತೆರೆದು ಚಿಕಿತ್ಸೆ ನೀಡಬೇಕು ಪ್ರತಿ ಅಪೌಷ್ಠಿಕ ಮಕ್ಕಳ ಬಗ್ಗೆ ವೈಯಕ್ತಿಕ ಗಮನ ಹರಿಸಿ ಜಿಲ್ಲೆಯಲ್ಲಿ ಅಪೌಷ್ಠಿಕತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಪೌಷ್ಠಿಕ ಆಹಾರ ತಯಾರಿಕಾ ಘಟಕಗಳಿಗೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ, ತಹಸೀಲ್ದಾರರು ತಿಂಗಳಿಗೆ ಎರಡು ಬಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾರಕ್ಕೊಮ್ಮೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಎಲ್ಲಾ ಕೇಂದ್ರಗಳಿಗೆ ತಿಂಗಳಿಗೊಮ್ಮೆಯಾದರೂ ಭೇಟಿ ನೀಡಿ ಪರಿಶೀಲಿಸಿ ವರದಿ ಪುಸ್ತಕದಲ್ಲಿ ಅಭಿಪ್ರಾಯ ಗಮನಿಸಬೇಕು, ನ್ಯೂನತೆಗಳಿದ್ದರೆ ಸರಿಪಡಿಸಿಕೊಳ್ಳಲು ಸ್ಥಳದಲ್ಲೇ ಸೂಚನೆ ನೀಡಬೇಕು ಎಂದು ಅವರು ಹೇಳಿದರು. ಸರ್ಕಾರಿ ಮತ್ತು ಅನುದಾನಿತ ಗುರುತಿಸಲಾಗಿರುವ ಎಲ್ಲಾ 2765 ಶಾಲೆಗಳ 1,68,152 ವಿದ್ಯಾರ್ಥಿಗಳಿಗೂ ಕಾಲಕಾಲಕ್ಕೆ ಹಾಲು ಪೂರೈಕೆಯಾಗಬೇಕು. ಹಾಲು ತಯಾರಿಕೆ ವೇಳೆ ಹೆಚ್ಚಿನ ಗಮನ ಹರಿಸಬೇಕು ಹಾಲಿನ ಪುಡಿಯನ್ನು ಡಬ್ಬಗಳಲ್ಲಿಟ್ಟು ಸುರಕ್ಷಿತಗೊಳಿಸಬೇಕು. ಯಾವುದೇ ಶಾಲೆಯಲ್ಲಿ ಅಡುಗೆ ಅನಿಲ ಸಂಪರ್ಕದಿಂದ ದೂರ ಉಳಿಯಬಾರದು. ಸಿಲಿಂಡರ್ಗಳನ್ನು ಎಲ್ಲೆಲ್ಲೋ ಇಳಿಸಿ ಹೋಗದೆ ಕಡ್ಡಾಯವಾಗಿ ಶಾಲೆಗಳಿಗೇ ಪೂರೈಕೆ ಮಾಡಬೇಕು.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗಮನ ಹರಿಸಿ ತಮ್ಮ ನಿರ್ದೇಶನ ಕಾರ್ಯರೂಪಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹಾಲಿನ ಪುಡಿ ಸರಬರಾಜಿನಲ್ಲಿ ಯಾವುದೇ ವಿಳಂಬ ಮಾಡದೇ ನಿಗದಿತ ಪ್ರಮಾಣದಲ್ಲಿ ಒಂದು ಕೆ.ಜಿ.ಯ ಪ್ರಮಾಣದಲ್ಲಿ ಪೂರೈಸಬೇಕು. ಪ್ರಾರಂಭದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊಂದಾಣಿಕೆಯಿಂದ ಸರಿಪಡಿಸಿಕೊಳ್ಳಬೇಕು. ಯಾವುದೇ ಗಂಭೀರ ಅಡ್ಡಿಗಳಿದ್ದಲ್ಲಿ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಅವರು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ಅಪೌಷ್ಠಿಕ ಮಕ್ಕಳನ್ನು ಆಸ್ಪತ್ರೆಗೆ ಕರೆತರುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕರ್ತವ್ಯ ವಾಗಿದೆ. ಅವರನ್ನು ಆರೈಕೆ ಮಾಡಿ ಸದೃಢರನ್ನಾಗಿಸುವುದು ಆರೋಗ್ಯ ಇಲಾಖೆಯ ಹೊಣೆಗಾರಿಕೆ ಎಂದರು. ಜಿಲ್ಲೆಯಲ್ಲಿ 94515 ಮಕ್ಕಳಿಗೆ ಮಾಸಿಕ 17012 ಕೆ.ಜಿ. ಹಾಲಿನ ಪುಡಿ ಅಗತ್ಯವಿದ್ದು, ವಾರಕ್ಕೆ ಮೂರು ದಿನದಂತೆ ಹಾಲು ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಿದಾನಂದ್ ತಿಳಿಸಿದರು. ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ ನಾನಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಕ್ಕಳ ತಜ್ಞರು ಸಭೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

