ಸಿಎಂ ತವರಲ್ಲಿ ಕೈ ಸೋಲಿಸಲು ಜೆಡಿಎಸ್ ಪಣ
ಕ.ಪ್ರ.ವಾರ್ತೆ ಮೈಸೂರು ಆ. 13
ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಕೆಜೆಪಿ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.
ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರ ರಾಜಿನಾಮೆಯಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ಮೇಲೆ ಕಾಂಗ್ರೆಸ್, ಬಿಜೆಪಿ, ಕೆಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಂತರ ರಾಜ್ಯ ಮಟ್ಟದಲ್ಲಿ ಕೆಜೆಪಿ-ಬಿಜೆಪಿ ನಡುವೆ ಹೊಂದಾಣಿಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶಸ್ವಿ ಸೋಮಶೇಖರ್ ನಾಮಪತ್ರ ಹಿಂಪಡೆದಿದ್ದರು. ಅಭ್ಯರ್ಥಿಯನ್ನು ಕಣಕ್ಕಿಳಿಸದ ಜೆಡಿಎಸ್ ಇದೀಗ ಕೆಜೆಪಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದೆ.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷರೂ ಆದ ಶಾಸಕ ಎಸ್. ಚಿಕ್ಕಮಾದು, ವರಿಷ್ಠ ಸೂಚನೆಯಂತೆ ಮೈಸೂರು-ಚಾಮರಾಜನಗರ ಜಿಲ್ಲಾ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಕೆಜೆಪಿ ಅಭ್ಯರ್ಥಿ ಯು.ಎಸ್. ಶೇಖರ್ ಮೂಲತಃ ಜೆಡಿಎಸ್ ಕಾರ್ಯಕರ್ತ. ಹಿಂದೆ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಿದ್ದರು. ಆ ಹಿನ್ನೆಲೆಯಲ್ಲಿ ಅವರ ಗೆಲವಿಗೆ ನಾವೆಲ್ಲ ಶ್ರಮಿಸಲಿದ್ದೇವೆ. ನಮಗೆ ಕಾಂಗ್ರೆಸ್ ನೇರ ಸ್ಪರ್ಧಿಯಾಗಿದ್ದು, ಕಾಂಗ್ರೆಸ್ ವಿರೋಧಿ ಮತಗಳನ್ನು ಒಟ್ಟುಗೂಡಿಸಿ ಕೆಜೆಪಿ ಅಭ್ಯರ್ಥಿ ಗೆಲವಿಗೆ ಹೋರಾಡುವುದಾಗಿ ತಿಳಿಸಿದರು.
ಶಾಸಕ ಸಾ.ರಾ. ಮಹೇಶ್ ಮಾತನಾಡಿ, ಈ ಹಿಂದೆ ಮೈಸೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಂಚಿಕೊಳ್ಳುವಾಗ ಜೆಡಿಎಸ್-ಕಾಂಗ್ರೆಸ್ ನಡುವೆ ಹೊಂದಾಣಿಕೆಯಾಗುತ್ತಿತ್ತು. ನಂತರದ ದಿನಗಳಲ್ಲಿ ಸಂಸದರ ಇಬ್ಬಗೆ ನೀತಿಯಿಂದ ಅದು ಮುರಿದು ಬಿದ್ದಿತ್ತು. ಹಾಗಾಗಿ ಅವರಿಗೆ ತಕ್ಕ ಉತ್ತರ ನೀಡಲು ಈ ಚುನಾವಣೆಯನ್ನು ಬಳಸಿಕೊಳ್ಳುತ್ತೇವೆ. ನಿರುದ್ಯೋಗಿ ರಾಜಕಾರಣಿಗಳು ಜಾಸ್ತಿಯಾಗುತ್ತಿದ್ದಾರೆ. ಒಂದು ಚುನಾವಣೆಯಲ್ಲಿ 8-10 ಕೋಟಿ ಖರ್ಚು ಮಾಡುವ ಈ ಭಾಗದ ಸಂಸದರು ಪ್ರಾಮಾಣಿಕರಂತೆ ಮಾತನಾಡುತ್ತಾರಷ್ಟೆ ಎಂದು ಟೀಕಿಸಿದರು.
ಚುನಾವಣೆಗೆ ಕಾಂಗ್ರೆಸ್ಸೇ ಕಾರಣ: ಬೆಂಗಳೂರು ಗ್ರಾಮಾಂತರ, ಮಂಡ್ಯ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ಸೇ ಕಾರಣ. ಇಷ್ಟು ವರ್ಷಗಳಲ್ಲಿ 11-12 ತಿಂಗಳ ಅವಧಿ ಇದ್ದಾಗಲೂ ಉಪಚುನಾವಣೆ ನಡೆಸಿರಲಿಲ್ಲ. ಆದರೆ, ಯುಪಿಎ ಸರ್ಕಾರ ಬೇಕೆಂದೇ ಉಪಚುನಾವಣೆ ನಡೆಯುವಂತೆ ಮಾಡಿ ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಕಿಡಿಕಾರಿದರು.
ನಾವೆಲ್ಲರೂ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಿಂದ ರಾಜಕೀಯ ಪ್ರವೇಶಿಸಿದವರು. ಅಬ್ದುಲ್ ನಜೀರ್ಸಾಬ್ ಅವರು ಗ್ರಾಪಂ ಪ್ರತಿನಿಧಿ ಪ್ರಧಾನಿ ಹುದ್ದೆಗೆ ಸಮ ಎಂದು ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ಪಂಚಾಯತ್ರಾಜ್ ವ್ಯವಸ್ಥೆಗೆ ಗೌರವ ನೀಡುತ್ತಿದ್ದರು. ಆದರೆ, ಈಗಿನ ಮುಖ್ಯಮಂತ್ರಿ ಪಂಚಾಯತ್ರಾಜ್ ಮಸೂದೆಗೆ ತಿದ್ದುಪಡಿ ತಂದು ಗ್ರಾಪಂ ಸದಸ್ಯರ ಹಕ್ಕನ್ನು ಮೊಟಕುಗೊಳಿಸಲು ಮುಂದಾಗಿದ್ದಾರೆ. ಇದರಿಂದ ಸದಸ್ಯರೆಲ್ಲರೂ ಕಾಂಗ್ರೆಸ್ ವಿರುದ್ಧ ಸೆಟದು ನಿಂತಿದ್ದಾರೆ. ಅಂಥವರನ್ನೆಲ್ಲ ಒಟ್ಟುಗೂಡಿಸಿ ಕೆಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪಂಚಾಯತ್ರಾಜ್ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

