ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಜೀತ ಪದ್ಧತಿ
ಹಾಸನ: ಕಷ್ಟ ಎಂದು ಬಂದ ಕಡು ಬಡವರಿಗೆ ಸಾಲ ಕೊಟ್ಟು ಅವರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುವ ಅನಿಷ್ಠ ಪದ್ಧತಿ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ.
ಜಿಲ್ಲೆಯ ಅರಕಲಗೂಡು ತಾ. ರಾಮನಾಥಪುರ ಹೋಬಳಿಯ ರಾಗಿಮರೂರು ಗ್ರಾಮದಲ್ಲಿ ಈ ದಾಸ್ಯಪದ್ಧತಿ ರಾಜಾರೋಷವಾಗಿ ನಡೆಯುತ್ತಿದೆ. ದೇಶದಲ್ಲಿ ಜೀತಪದ್ಧತಿ ನಿಷೇಧವಾಗಿ 37 ವರ್ಷ ಕಳೆದಿದ್ದರೂ, ಇಂದಿಗೂ ಇದು ಎಗ್ಗಿಲ್ಲದಂತೆ ನಡೆಯುತ್ತಿದೆ. ಈ ಗ್ರಾಮದಲ್ಲಿ ಅದರಲ್ಲೂ ಹೆಚ್ಚಾಗಿ ದಲಿತರು, ಪಡೆದ ಸಾಲದ ಮೊತ್ತದಲ್ಲಿ ವರ್ಷಕ್ಕಿಷ್ಟು ತಿರುವಳಿ ಲೆಕ್ಕದಲ್ಲಿ ನಿರಂತರವಾಗಿ ಸವರ್ಣೀಯರ ಹೊಲ ಮನೆಗಳಲ್ಲಿ ಜೀತದಾಳಾಗಿ ದುಡಿಯುತ್ತಿದ್ದಾರೆ.
ಜೀತ, ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿ ವಿರುದ್ಧ ನಾನಾ ಕಾನೂನುಗಳಿದ್ದರೂ ಜಿಲ್ಲೆಯಲ್ಲಿ ಮಾತ್ರ ದಾಸ್ಯಪದ್ಥತಿ ರಾಜಾರೋಷವಾಗಿ ನಡೆಯುತ್ತಿದೆ.
ವಿಪರ್ಯಾಸ ಎಂದ್ರೆ...ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿಯೇ ಸುಮಾರು 800ಕ್ಕೂ ಹೆಚ್ಚು ಮಂದಿ ಜೀತಪದ್ಧತಿಯಲ್ಲಿ ದುಡಿಯುತ್ತಿದ್ದಾರೆ.
ದೇಶಾದ್ಯಂತ ಪುನರ್ ಸರ್ವೇ ಮಾಡಿ ಜೀತದಾಳುಗಳನ್ನು ಮುಕ್ತಗೊಳಿಸಿ ಎಂದು 2012ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಜೀತ ಪದ್ಧತಿ ನಡೆಯುತ್ತಿದೆ. ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿಲ್ಲ. ಕಠಿಣ ಕಾನೂನು ಕುರುಡಾಗಿದೆಯೋ ಅಥವಾ ಸಂಬಂಧಪಟ್ಟ ಅಧಿಕಾರಿಗಳು ನಿಸಾಹಯಕರಾಗಿದ್ದಾರೋ ಗೊತ್ತಿಲ್ಲ.
40 ವರ್ಷಗಳಿಂದ ಜೀತ: ರಾಗಿಮರೂರು ಗ್ರಾಮದಲ್ಲಿ 200 ಕುಟುಂಬಗಳಿದ್ದು, ಈ ಪೈಕಿ 50ಕ್ಕೂ ಹೆಚ್ಚು ದಲಿತರು ಮದುವೆ ಮುಂಜಿಗೋ, ಮನೆ ನಿರ್ಮಿಸಿಕೊಳ್ಳಲೋ, ಇತರೆ ಬೇರಾವುದೋ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಗ್ರಾಮದ ಸವರ್ಣೀಯರಿಂದ ಸಾಲ ಪಡೆದು ಕಳೆದು 40-50 ವರ್ಷಗಳಿಂದ ಜೀತದಾಳುಗಳಾಗಿ ಮನೆ ಮತ್ತು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಬಾಲ್ಯವಸ್ಥೆಯಿಂದಲೇ ಜೀತಗಾರರಾಗಿದ್ದಾರೆ.
ವರ್ಷಕ್ಕೆ ರು.9 ರಿಂದ 12 ಸಾವಿರ ರು.ಗಳ ವರೆಗೆ ನಿಗದಿ ಮಾಡಿದ್ದು, ಬೆಳಗ್ಗೆ 6ಕ್ಕೆ ಜೀತ ಪ್ರಾರಂಭವಾದರೆ ಕೆಲಸ ಮುಗಿಯುವುದು ರಾತ್ರಿಗೇ. ದಿನಕ್ಕೆ 3 ಹೊತ್ತು ಊಟ ನೀಡುತ್ತಾರೆ. ಪಡೆದ ಸಾಲ ತೀರುವವರೆಗೂ ಜೀತ ಮಾಡಲೇಬೇಕು. ಜೀತಕ್ಕೆ ಇರುವವರು ಅನಾರೋಗ್ಯ ಹಾಗೂ ಇತರೆ ಕಾರಣದಿಂದ ಕೆಲಸಕ್ಕೆ ಬಾರದೇ ಮನೆಯಲ್ಲಿಯೇ ಉಳಿದುಕೊಂಡರೆ ಹಣ ಕೊಟ್ಟವರು ನಿಂದಿಸುತ್ತಾರೆ.
ಹೆಚ್ಚೆಂದ್ರೆ 2 ದಿನ ಮಾತ್ರ ರಜೆ: ಸಾಲ ಪಡೆದವರು ನಮ್ಮಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದರೆ ಸಾಲ ಕೊಟ್ಟವರು ಪಡೆದಂತಹ ತಾವು ಕೊಟ್ಟ ಹಣಕ್ಕೆ ಶೇ.5ರಷ್ಟು ಬಡ್ಡಿ ಸೇರಿಸಿ ಒಮ್ಮೆಗೆ ಪಾವತಿಸುವಂತೆ ತಾಕೀತು ಮಾಡುತ್ತಾರೆ. ಕೆಲವರು 50 ರು.ಗಳಿಗೆ ಜೀತ ಮಾಡುತ್ತಿದ್ದಾರೆ. ಮಕ್ಕಳ ಮದುವೆ ಸಾಲ ಮಾಡಿದರೆ ತೀರಿಸುವವರೆಗೂ ಇಳಿವಯಸ್ಸಾದರೂ ಸಹ ದುಡಿಸಿಕೊಳ್ಳುತ್ತಾರೆ. ಅನಾರೋಗ್ಯವನ್ನೂ ಲೆಕ್ಕಿಸುವಂತಿಲ್ಲ. ಮನರಂಜನೆ ಮಾತೇ ಇಲ್ಲ. ಮನೆ ಕಡೆ ತೊಂದರೆ ಇದೆ ಅಂತಾ ರಜೆ ಕೇಳಿದ್ರೆ, ಅದಕ್ಕೂ ನೂರೆಂಟು ತಕರಾರು. ಕೊನೆಗೆ ಕಾಡಿ ಬೇಡಿ ರಜೆ ಕೊಟ್ಟರೂ ಹೆಚ್ಚೆಂದ್ರೆ 2 ದಿನ ಮಾತ್ರ ನೀಡುತ್ತಾರೆ ಅಷ್ಟೇ.
ವ್ಯಕ್ತಿಯೊಬ್ಬ ಮಕ್ಕಳ ಮದುವೆಗೆ 60 ಸಾವಿರ ರು.ಗಳನ್ನು ಸಾಲವಾಗಿ ಪಡೆದಿದ್ದ. ಆತನಿಗೆ ವಯಸ್ಸಾಗಿದ್ದರಿಂದ ತೀರಿಸಲಾಗದ ಕಾರಣ ಹಣ ಕೊಟ್ಟವರು, ಕಾಲೇಜಿಗೆ ಹೋಗುತ್ತಿದ್ದ ಆತನ ಮಗನನ್ನು ಬಲವಂತವಾಗಿ ಜೀತಪದ್ಧತಿಗೆ ದೂಡಿದ್ದಾರೆ. ಸುಪ್ರೀಂ ಕೋರ್ಟ್ ಪುನರ್ ಸರ್ವೇ ಮಾಡುವಂತೆ ಆದೇಶಿಸಿದ್ದರೂ ರಾಜ್ಯ ಸರ್ಕಾರ ಜೀತಪದ್ಧತಿಯ ನಿರ್ಮೂಲನೆಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ತಮ್ಮ ವಿರುದ್ಧ ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ತಿರುಗಿ ಬೀಳಲು ಸಾಧ್ಯವಾಗದೇ ಮೂಕರಾಗಿ ಜೀತ ಮಾಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಜೀತ ಪದ್ಧತಿಯಲ್ಲಿ ಸಿಲುಕಿರುವವರ ನೆರವಿಗೆ ಧಾವಿಸಬೇಕಾಗಿದೆ.
-ಪಿ.ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

