ಸಂಚಾರಿ ನಿಯಮ ಕಡ್ಡಾಯ ಪಾಲನೆಗೆ ಸಹಕರಿಸಲು ಮನವಿ
ಅರಕಲಗೂಡು: ಪಟ್ಟಣದಲ್ಲಿ ಸಂಚಾರಿ ನಿಯಮ ಕಡ್ಡಾಯ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಪಟ್ಟಣ ಠಾಣೆಯ ಸಿಪಿಐ ರಾಜು ಮತ್ತು ಎಸ್ಐ ಭರತ್ ಕೋರಿದ್ದಾರೆ. ಪಟ್ಟಣದಲ್ಲಿ ನಡೆದ ಪ್ರಯಾಣಿಕರ ಸಾಗಣೆಯ ವಾನಗಳ ಚಾಲಕರು ಮತ್ತು ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು ಪಟ್ಟಣದಲ್ಲಿ ಸಂಚಾರಿ ವ್ಯವಸ್ಥೆ ಸುಧಾರಿಸಲು ಸಾರ್ವಜನಿಕರ ಸಲಹೆಗಳ ಮೇರೆಗೆ ಕ್ರಮಕ್ಕೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ವ್ಯತ್ಯಯವಾಗದಂತೆ ಪರ್ಯಾಯ ಮಾರ್ಗೋಪಾಯಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. ಸಿಪಿಐ ರಾಜು ಮಾತನಾಡಿ ಪಟ್ಟಣದಲ್ಲಿ ಸಂಚರಿಸುವ ಆಟೋಗಳು, ವ್ಯಾನುಗಳು, ಟ್ರಾಕ್ಸ್ಗಳು ಮತ್ತು ಗೂಡ್ಸ್ ವಾಹನಗಳ ದಾಖಲೆಗಳನ್ನು ಕಾಯ್ದುಕೊಳ್ಳಬೇಕು, ಇನ್ಸ್ಯೂರೆನ್ಸ್ ಕ್ರಮಬದ್ದವಾಗಿರಬೇಕು, ಚಾಲಕರು ನಿಗದಿತ ಯುನಿಫಾರಂ ಧರಿಸಬೇಕು ಇದಕ್ಕೆ ಕಾಲಾವಕಾಶ ನೀಡಿ ನಂತರ ಜಾರಿಗೆ ತರಲಾಗುವುದು ಎಂದರು. ಸಭೆಯಲ್ಲಿ ಟೆಂಪೋ ಚಾಲಕರು ಮತ್ತು ಮಾಲೀಕರ ಸಂಘದ ರಾಮಣ್ಣ ಮತ್ತಿತರರು ಸಲಹೆಗಳನ್ನು ನೀಡಿದರು.
ಶಿಲ್ಪಕಲಾ ಶಿಕ್ಷಣಉಚಿತ ತರಬೇತಿಗೆ ಅರ್ಜಿ ಆಹ್ವಾನ
ಹಾಸನ: ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ (ಟೆರ್ರಾಕೋಟ) ವಿಭಾಗಗಳಲ್ಲಿ ಉಚಿತ ತರಬೇತಿಗಾಗಿ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ವಿಭಾಗದ ತರಬೇತಿ ಅವಧಿ 18 ತಿಂಗಳಾಗಿದ್ದು, ಕುಂಭ ಕಲೆಯ (ಟೆರ್ರಾಕೋಟ) ತರಬೇತಿ ಅವಧಿಯು 6 ತಿಂಗಳಾಗಿರುತ್ತದೆ. ವಿದ್ಯಾರ್ಹತೆ ಕನಿಷ್ಠ 7ನೇ ತರಗತಿ ಉತ್ತೀರ್ಣ, ವಯೋವುತಿ 18 ರಿಂದ 35 ವರ್ಷದವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ, ತರಬೇತಿಗೆ ಬೇಕಾದ ಕಚ್ಚಾ ಸಾಮಗ್ರಿ, ತರಬೇತಿ ಪ್ರವಾಸ, ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ತರಗತಿಗಳು ಆ. 28 ರಂದು ಪ್ರಾರಂಭ ಗೊಳ್ಳಲಿದೆ. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ನಿರ್ದೇಶಕರು, 9900158885 ಸಂಪರ್ಕಿಸಬಹುದಾಗಿದೆ.
ಇಂದು ಪರಂಪರಾ ಕೂಟದ ಉದ್ಘಾಟನೆ
ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕತಿಕ, ಕ್ರೀಡಾ, ಎನ್ಎಸ್ಎಸ್, ಎನ್ಸಿಸಿ ಮತ್ತು ಪರಂಪರಾ ಕೂಟದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆ.19 ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಪಿ.ಆರ್.ಶಾಂತ ತಿಳಿಸಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಭಾಷಣಕಾರರಾಗಿ ಆಲೂರು ನಾಗರಾಜ್ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಟಿ.ಮಲ್ಲೇಶ್, ಜಿಪಂ ಸದಸ್ಯ ಎಚ್.ಎನ್.ದೇವೇಗೌಡ(ಪಾಪಣ್ಣಿ), ಕೆ.ಶ್ರೀನಿವಾಸ್, ಎ.ಆರ್.ರವಿಕುಮಾರ್, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಎಂ.ಎನ್.ಜೈಪ್ರಕಾಶ್ ಭಾಗವಹಿಸುವರು. ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದ್ದಾರೆ.
ಹೇಗಿದೆ ನಂ ಹೇರ್ಸ್ಟೈಲ್...
ಕ.ಪ್ರ.ವಾರ್ತೆ , ಹಾಸನ , ಆ.18
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸಂತ ಜೋಸೆಫ್ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮದೇ ಆದ ರೀತಿಯಲ್ಲಿ ಪ್ರದರ್ಶಿಸಿದ ಹೇರ್ಸ್ಟೈಲ್ ಎಲ್ಲರನ್ನು ಆಕರ್ಷಿಸಿತು.
ಹೇರ್ಸ್ಟೈಲ್ ಮಾಡಲು ಸ್ನೇಹಿತರ ನೆರವು ಪಡೆದುಕೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಹೆಣ್ಣು ಮಕ್ಕಳಿಂದ ನೈಲ್ಪಾಲಿಶ್, ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆ ಪ್ರದರ್ಶನ, ನೃತ್ಯ ಹಾಗೂ ಹಾಡುಗಳ ಮನೋರಂಜನಾ ಕಾರ್ಯಕ್ರಮ ಸಹ ನಡೆಯಿತು. ಪ್ರತಿ ವರ್ಷದಂತೆ ಈ ವಿನೂತನ ಸ್ಪರ್ಧೆಯನ್ನು ಈ ವರ್ಷವೂ ನಡೆಸಲಾಯಿತು. ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ಫಾದರ್ ಐವಾನ್ ಮೆಂಡೊನ್ಸ್, ಪ್ರಾಂಶುಪಾಲ ಫಾದರ್ ಜರಾಲ್ಡ್ ಪುರ್ಟಾಡೋ ಹಾಗೂ ಉಪ ಪ್ರಾಂಶುಪಾಲರಾದ ಹೇಮಲತಾ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

