ಹಾಸನ

ಜೀತವೆಂಬ ನರಕದಲ್ಲಿ 826ಕ್ಕೂ ಹೆಚ್ಚು ಮಂದಿ

Published On :

ಕನ್ನಡಪ್ರಭ ವಾರ್ತೆ , ಹಾಸನ , ಆ. 19
ಸ್ವಯಂ ಸೇವಾ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಸುಮಾರು 862 ಮಂದಿ ಜೀತಕ್ಕೆ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮದಲ್ಲಿ 200 ಕುಟುಂಬಗಳು ವಾಸವಾಗಿದ್ದು, ಈ ಪೈಕಿ 50ಕ್ಕೂ ಹೆಚ್ಚು ದಲಿತರು ಜೀತ ಪದ್ಧತಿಗೆ ಬಲಿಯಾಗಿ, ಸವರ್ಣೀಯರ ಮನೆಗಳಲ್ಲಿ ಜೀತ ಮಾಡುತ್ತಾ ಜೀವನ ಸವೆಸುತ್ತಿದ್ದಾರೆ. ತಮಗೆ ಕಷ್ಟ ಎಂದು ಹೇಳಿಕೊಂಡು ಬಂದ ಬಡವರಿಗೆ ಸವರ್ಣಿಯರು ಸಾಲಕೊಟ್ಟು ನಂತರ ಅವರನ್ನ ಜೀತದಾಳಾಗಿ ದುಡಿಸಿಕೊಳ್ಳುತ್ತಿರುವ ಅನಿಷ್ಠ ಪದ್ಧತಿ ಭಾನುವಾರ ಬೆಳಕಿಗೆ ಬಂದಿದೆ.
ಸ್ವಯಂ ಸೇವಾ ಸಂಸ್ಥೆ ಜೀವಿಕ ನಡೆಸಿದ ಸಮೀಕ್ಷೆ ಪ್ರಕಾರ ಹಾಸನ ತಾಲೂಕಿನಲ್ಲಿ 138, ಅರಕಲಗೂಡು-88, ಚನ್ನರಾಯಪಟ್ಟಣ-19, ಸಕಲೇಶಪುರ-420, ಹೊಳೆನರಸೀಪುರ-30, ಆಲೂರು-137 ಮತ್ತು ಬೇಲೂರಿನಲ್ಲಿ 30 ಮಂದಿ ಸೇರಿ ಒಟ್ಟು 862 ಮಂದಿ ಈಗಲೂ ಜೀತ ಮಾಡುತ್ತಿದ್ದಾರೆ. ಅರಸೀಕೆರೆ ತಾಲೂಕಿನಲ್ಲಿ ಜೀವಿಕ ಸಮೀಕ್ಷೆ ಇನ್ನೂ ಪ್ರಾರಂಭವಾಗಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೀತ ಪದ್ಧತಿ ಇನ್ನು ಜೀವಂತವಾಗಿರುವುದು ಸಾಬೀತಾಗಿದೆ.
ಹಲವು ವರ್ಷಗಳ ಹಿಂದೆ ಜೀತ ನಿಷೇಧವಾಗಿದ್ದರೂ ರಾಜಾರೋಷವಾಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣಿಗೆ ಕಾಣದಂತೆ ಮೂಕ ಪ್ರೇಕ್ಷಕರಾಗಿದ್ದಾರೆ. ಜೀತದ ವಿರುದ್ಧ ದೂರನ್ನು ದಾಖಲಿಸಿಕೊಳ್ಳುವ ಗೋಜಿಗೆ ಈವರೆವಿಗೂ ಯಾವ ಅಧಿಕಾರಿಗಳು ಮುಂದಾಗಿಲ್ಲ. ಇದರಿಂದಾಗಿ ಜೀತ ಇಂದಿಗೂ ಎಗ್ಗಿಲ್ಲದಂತೆ ನಡೆಯುತ್ತಿದೆ. ಈ ಗ್ರಾಮದಲ್ಲಿ ಅದರಲ್ಲೂ ಹೆಚ್ಚಾಗಿ ದಲಿತರು, ಪಡೆದ ಸಾಲದ ಮೊತ್ತದಲ್ಲಿ ವರ್ಷಕ್ಕಿಷ್ಟು ತಿರುವಳಿ ಲೆಕ್ಕದಲ್ಲಿ ನಿರಂತರವಾಗಿ ಸವರ್ಣೀಯರ ಹೊಲ ಮನೆಗಳಲ್ಲಿ ಜೀತದಾಳಾಗಿ ದುಡಿಯುತ್ತಿದ್ದಾರೆ.
ದೇಶಾದ್ಯಂತ ಜೀತಪದ್ಧತಿಯ ಬಗ್ಗೆ ಪುನರ್‌ಸರ್ವೇ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ  ಸರಿಯಾಗಿ ಸರ್ವೇ ಕಾರ್ಯ ಸರ್ಕಾರದಿಂದ ಆಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ನಡೆದಿದ್ದರೆ, ಮತ್ತೆ ಕೆಲವು ಜಿಲ್ಲೆಗಳಲ್ಲಿ ಸರಿಯಾಗಿ ಜೀತದ ಬಗ್ಗೆ ಸರ್ವೇ ಕಾರ್ಯ ನಡೆದಿಲ್ಲ. ಇದರಿಂದ ಎಷ್ಟು ಪ್ರಮಾಣದಲ್ಲಿ ಜೀತ ನಡೆಯುತ್ತಿದೆ ಎಂಬುದು ತಿಳಿದು ಬಂದಿಲ್ಲ.
ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮದಲ್ಲಿ ನಡೆಯುತ್ತಿದ್ದ ಜೀತ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದ್ದಂತೆ, ಹಣ ನೀಡಿದ್ದವರು, ಜೀತಕ್ಕಿದ್ದವರಿಗೆ ಬೆದರಿಕೆ ಒಡ್‌ಡುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ  ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಭಾನುವಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜೀತ ಬಗ್ಗೆ ಪರಿಶೀಲಿಸಿದ್ದರು. ಇದರಿಂದ ಬಡವರಿಗೆ ಹಣ ಕೊಟ್ಟವರು, ಬೆದರಿಕೆಯನ್ನು ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಜೀತಪದ್ಧತಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.