ಅರಣ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಧರಣಿ
ಕ.ಪ್ರ.ವಾರ್ತೆ , ಹಾಸನ , ಆ.20
ಸಮರ್ಪಕ ವೇತನ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅರಣ್ಯ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಗಳ ದಿನಗೂಲಿ ನೌಕರರು ಮಂಗಳವಾರದಿಂದ ಅನಿದಿರ್ಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ನಗರದ ಅರಣ್ಯ ಭವನದ ಮುಂದೆ ದಿನಗೂಲಿ ನೌಕರರು ಧರಣಿ ನಡೆಸಿ, ತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.
ರಾಜ್ಯ ಸಂಘಟನೆ ಹಲವು ಬಾರಿ ವೃತ್ತ ಕಚೇರಿಗೆ ಭೇಟಿ ನೀಡಿ ಹಾಸನ ವಿಭಾಗದ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ ಹಾಗೂ ತುಮಕೂರು ವಿಭಾಗದ ಕುಣಿಗಲ್, ಹುಲಿಯೂರು ದುರ್ಗ ಹಾಗೂ ಸಾಮಾಜಿಕ ವಲಯದ ನೌಕರರ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅಲ್ಲದೇ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಕಚೇರಿಗಳಿಗೆ ಪತ್ರ ಬರೆದಿದ್ದರೂ ನೌಕರರ ಬೇಡಿಕೆಗಳನ್ನು ಬಗ್ಗೆ ಅಧಿಕಾರಿಗಳು ತೀರಾ ಉದಾಸೀನ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ವಿಭಾಗದ ಅರಕಲಗೂಡು, ಹೊಳೆನರಸೀಪುರ, ಬೇಲೂರು, ಹಳೇಬೀಡು ವಲಯಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ (ಪಿಟಿ ಕ್ಯಾಶ್ ಪೇಮೆಂಟ್ಪಿಸಿಪಿ) ನೌಕರರಿಗೆ ಬ್ಯಾಂಕ್ ಮುಖೇನ ಸಂಬಳ ಪಾವತಿಸುತ್ತಿಲ್ಲ.
ಸಮಾನ ವೇತನಕ್ಕೆ ಬಿಗಿಪಟ್ಟು: ಹೊಳೆನರಸೀಪುರ ವಲಯದಲ್ಲಿ ಪ್ರತಿ ನೌಕರನಿಗೆ 2 ಸಾವಿರ ರು. ಅರಕಲಗೂಡು ವಲಯದಲ್ಲಿ 3 ಸಾವಿರ ರು.ವೇತನ ನೀಡಲಾಗುತ್ತಿದೆ. ಅಲ್ಲದೇ ಸುಳ್ಳು ಮಾಹಿತಿ ನೀಡಿ ವಂಚಿಸಲಾಗುತ್ತಿದೆ. ಈ ಪದ್ಧತಿಯನ್ನು ನಿಲ್ಲಿಸಬೇಕು. ತುಮಕೂರು ವಿಭಾಗದ ಕುಣಿಗಲ್, ಹುಲಿಯೂರು ದುರ್ಗ ವಲಯಗಳಲ್ಲಿ ಮೇಲಿನ ರೀತಿಯಲ್ಲಿ ವೇತನದಲ್ಲಿ ತಾರತಮ್ಯವಿದೆ. ಎಲ್ಲಾ ನೌಕರರಿಗೂ ಸಮಾನ ವೇತನ ನೀಡುವಂತೆ ಧರಣಿ ನೀಡುವಂತೆ ಪಟ್ಟು ಹಿಡಿದರು.
ರಾಜ್ಯದ ಎಲ್ಲಾ ವೃತ್ತಗಳಲ್ಲಿ ಸರ್ಕಾರಿ ಆದೇಶದಂತೆ 10 ವರ್ಷ ಪಿಸಿಪಿ ಸೇವೆ ಸಲ್ಲಿಸಿರುವ ನೌಕರರಿಗೆ ಏ.1, 2009ರಿಂದಲೇ ಜಾರಿಗೆ ಬರುವಂತೆ 1 ಸಾವಿರ ರು. ಹೆಚ್ಚುವರಿ ವೇತನ ಮತ್ತು ಏ. 1, 2012ರಿಂದ 10 ವರ್ಷ ಪೂರೈಸಿರುವ ನೌಕರರಿಗೆ 1 ಸಾವಿರ ರು.ಪಾವತಿ ಮಾಡಲು ಆದೇಶವಿದೆ.
ಆದರೆ ಹಾಸನ ವೃತ್ತ ವ್ಯಾಪ್ತಿಯಲ್ಲಿ ಹೆಚ್ಚಿನ ಪಿಸಿಪಿ ನೌಕರರಿಗೆ ಈ ಸೌಲಭ್ಯ ಸಿಕ್ಕಿಲ್ಲ ಮತ್ತು ಹತ್ತು ವರ್ಷ ಪೂರೈಸಿರುವ ನೌಕರರ ಮಾಹಿತಿಯನ್ನು ವಲಯ ಕಚೇರಿಗಳಿಂದ ಕಳುಹಿಸಿಲ್ಲ ಎಂದು ಆರೋಪಿಸಿದರು.
ಹೊಳೆನರಸೀಪುರ ವಲಯದಲ್ಲಿ ಸಾಮಾಜಿಕ ಅರಣ್ಯ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಈಶ್ವರನಾಯಕ ಎಂಬುವರು ಈ ಹಿಂದೆ ಎಂಆರ್ನಲ್ಲಿ ಕೆಲಸ ಮಾಡುತ್ತಿದ್ದ ನೌಕರ ಹಾಗೂ ಹೇಮಲತಾ ಪಿಸಿಪಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕೇವಲ ಮೂರು ಸಾವಿರ ಮಾತ್ರ ವಾಪತಿ ಮಾಡಲಾಗುತ್ತಿದೆ. ಈ ನೌಕರರಿಗೆ ಏ.1, 2012ರ ದಿನಾಂಕಕ್ಕೆ 10 ವಷಂಗಳ ಸೇವೆ ಪೂರೈಸಿದ್ದಾರೆ. ಆದರೂ ಇವರಿಗೆ ಕಡಿಮೆ ವೇತನ ಹಾಗೂ ಹೆಚ್ಚುವರಿ ವೇತನವನ್ನು ನೀಡುತ್ತಿಲ್ಲ ಎಂದು ದೂರಿದರು.
ಅರಕಲಗೂಡು ವಲಯದ ನೌಕರರಿಗೆ 9 ತಿಂಗಳಿನಿಂದ ವೇತನ ಕೊಡಬೇಕಾಗಿದೆ. ಇತರೆ ವಲಯಗಳಲ್ಲಿ 4 ತಿಂಗಳಿಂದ ವೇತನ ನೀಡಬೇಕಿದೆ. ಈ ಬೇಡಿಕೆಗಳ ಬಗ್ಗೆ ಕಳೆದ 3 ವರ್ಷಗಳಿಂದಲೂ ಇಲಾಖೆಯ ಗಮನಕ್ಕೆ ತರಲಾಗಿದೆ. ಎರಡು ಬಾರಿ ಕಚೇರಿ ಮುಂದೆ ಮುಷ್ಕರ ನಡೆಸಲಾಗಿತ್ತು. ಮುಷ್ಕರದ ಸಂದರ್ಭದಲ್ಲಿ ಕೇವಲ ಭರವಸೆ ಕೊಟ್ಟು ಕಳುಹಿಸಿದ್ದಾರೆ. ಆದರೆ ನೌಕರರ ಬೇಡಿಕೆಗಳು ಮಾತ್ರ ಇನ್ನೂ ಈಡೇರಿಲ್ಲ ಎಂದು ಕಿಡಿಕಾರಿದರು.
ದಿನಗೂಲಿ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಪ್ರತಿಕೃತಿ ದಹನ ಹಾಗೂ ತಮಟೆ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜು, ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಜಿ.ಕೃಷ್ಣ, ಬಿ.ವಿ.ನಾಗರಾಜು, ಸಂಘಟನಾ ಕಾರ್ಯದರ್ಶಿ ಜಯರಾಮು, ನಿರ್ದೇಶಕ ರುದ್ರಪ್ಪ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

