ಹಾಸನ

ಉದರಕ್ಕೆ ಕತ್ರಿ, ಮೂತ್ರವೂ ನಿಂತ್ರಿ!

Published On :

ಕ.ಪ್ರ.ವಾರ್ತೆ , ಹಾಸನ , ಆ. 20
ಹೊಟ್ಟೆನೋವು ಎಂದು ಬಂದ ಮಹಿಳೆಯ ಗರ್ಭಕೋಶದ ಆಪರೇಷನ್ ವೇಳೆ ಆಕೆಯ ಮೂತ್ರ ಚೀಲವನ್ನೇ ಕತ್ತರಿಸಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.  ವೈದ್ಯರ ಎಡವಟ್ಟಿನಿಂದಾಗಿ ಅಮಾಯಕ ಮಹಿಳೆ, ಈಗ ನಿರಂತರ ಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ತಮ್ಮ ತಪ್ಪನ್ನು ಸರಿಪಡಿಸದ ವೈದ್ಯರು, ಈಗ ಬೇರೆಡೆ ಹೋಗಿ ಎಂದು ಆಕೆಯನ್ನು ಸಾಗ ಹಾಕಲು ಯತ್ನಿಸುತ್ತಿರುವುದು ಬಡಪಾಯಿ ಕುಟುಂಬವನ್ನು ಕಂಗೆಡಿಸಿದೆ. ಈ ಮಹಿಳೆ ಹೆಸರು ರತ್ನಮ್ಮ. ತಾಲೂಕಿನ ಹೆರಗು ಗ್ರಾಮದ ಈಕೆ ಉದರ ಬೇನೆ ಹಿನ್ನೆಲೆಯಲ್ಲಿ 4 ತಿಂಗಳ ಹಿಂದೆ ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು, ಆಕೆಯ ಗರ್ಭಕೋಶ ಆಪರೇಷನ್ ಮಾಡಬೇಕು ಎಂದರು. ಬಳಿಕ ವೈದ್ಯರೊಬ್ಬರು ಗರ್ಭಕೋಶದ ಆಪರೇಷನ್ ನಡೆಸಿ, ಕೆಲವು ದಿನಗಳ ನಂತರ ಆಸ್ಪತ್ರೆಯಿಂದ ರತ್ನಮ್ಮರನ್ನು ಬಿಡುಗಡೆ ಮಾಡಿದರು.
ಅಲ್ಲಿಂದ ರತ್ನಮ್ಮಗೆ ಇನ್ನೊಂದು ಸಮಸ್ಯೆ ಶುರುವಾಯ್ತು. ಗರ್ಭಕೋಶ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ವೈದ್ಯರು ಆಕೆಯ ಮೂತ್ರಚೀಲವನ್ನೂ ಕತ್ತರಿಸಿದ್ದರು. ಇದರಿಂದ ಮೂತ್ರ ನಿರಂತರವಾಗಿ ವಿಸರ್ಜನೆಯಾಗುತ್ತಿತ್ತು. ಕುಡಿದ ನೀರು ಮೈಯಲ್ಲಿ ನಿಲ್ಲದೆ ಒಂದೇ ಸಮನೆ ಸೋರುತ್ತಿದೆ. ಮತ್ತೆ ಬಂದು ಪರೀಕ್ಷೆ ಮಾಡಿಸಿದ್ರೂ ಸಮಸ್ಯೆ ಸೃಷ್ಟಿಸಿರುವ ವೈದ್ಯರು, ಏನೋನು ಸೂಬುಬು ಹೇಳಿ ತನ್ನನ್ನು ವೃಥಾ ನರಳಿಸುತ್ತಿದ್ದಾರೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.  
ಕಷ್ಟಪಡುತ್ತಿರುವ ಕುಟುಂಬ: ಕಳೆದ ನಾಲ್ಕೈದು ತಿಂಗಳುಗಳಿಂದ ಕುಟುಂಬ ಸದಸ್ಯರು ರತ್ನಮ್ಮಳ ಆರೋಗ್ಯ ಸುಧಾರಿಸಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ತಪ್ಪಾಗಿದೆ ಎಂದಷ್ಟೇ ಹೇಳುವ ಮೂಲಕ ವೈದ್ಯರು ನುಣಿಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.  ಬೆಂಗಳೂರಿನಿಂದ ನುರಿತ ವೈದ್ಯರು ಬರುತ್ತಾರೆ, ಅವರಿಂದ ನಿರಂತರ ಮೂತ್ರ ಸಮಸ್ಯೆ ಸರಿಪಡಿಸಲಾಗುವುದು ಎನ್ನುವ ಸ್ಥಳೀಯ ವೈದ್ಯರು, ಮತ್ತೊಮ್ಮೆ ಬೆಂಗಳೂರಿಗೆ ಹೋಗಿ ಎನ್ನುತ್ತಿದ್ದಾರೆ. ತಪ್ಪು ಮಾಡಿರುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ರತ್ನಮ್ಮ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.