ಸಾರಿಗೆ ಬಸ್ ಹರಿದು ಕಾಲು ಮುರಿತ; ಪ್ರತಿಭಟನೆ
ಕ.ಪ್ರ. ವಾರ್ತೆ, ಆಲೂರು , ಆ. 21
ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೇಲೆ ಸಾರಿಗೆ ಬಸ್ ಹರಿದು ಕಾಲು ಸಂಪೂರ್ಣ ಜಜ್ಜಿಹೋಗಿ, ಅಪಘಾತ ಸಂಭವಿಸಿ ಗಂಟೆಗಟ್ಟಲೇ ಕಳೆದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಬಾರದೆದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದರಿಂದ ರೊಚ್ಚಿಗೆದ್ದ ನಾಗರಿಕರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಸಂತೆ ದಿನವಾದ ಬುಧವಾರ ತಾಲೂಕಿನ ನೇರಗಳಲೆ ಗ್ರಾಮದ ಎನ್.ವಿ.ಮಲ್ಲೇಶ್ ಎಂಬುವರು ಸಂತೆ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಹೋಗಲು ಬಸ್ ನಿಲ್ದಾಣದಲ್ಲಿ ಮಗ್ಗೆ ಮಾರ್ಗವಾಗಿ ಕೊಡ್ಲಿಪೇಟೆಗೆ ಹೋಗುವ ಅರಕಲಗೂಡು ಡಿಪೋಗೆ ಸೇರಿದ ಬಸ್ ಹತ್ತುತ್ತಿದ್ದರು. ಆಗ ಬಸ್ ಸಂಚರಿಸಿದ ಕಾರಣ ಅವರ ಬಲಗಾಲು, ಬಸ್ ಮುಂಭಾಗದ ಚಕ್ರಕ್ಕೆ ಸಿಕ್ಕಿಹಾಕಿಕೊಂಜು ಜಜ್ಜಿಹೋಯಿತು. ತಕ್ಷಣವೇ ಸಾರ್ವಜನಿಕರು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು.
ಆದರೆ, ಘಟನೆ ನಡೆದು ಗಂಟೆಗಳೆ ಕಳೆದರೂ ಸಂಸ್ಥೆಯ ಯಾರೊಬ್ಬರು ಸುಳಿಯದೇ ಬೇಜವಾಬ್ದಾರಿತನ ಪ್ರದರ್ಶಿಸಿದ್ದು, ಸಂಸ್ಥೆಯ ಡಿ.ಸಿ.ಯೂ ವಿಷಯ ತಿಳಿದೂ ಶೀಘ್ರ ಯಾವುದೇ ಕ್ರಮ ಕೈಗೊಳ್ಳದ ಕಾರಣ ರೊಚ್ಚಿಗೆದ್ದ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಡಿ.ಸಿ.ವಿರುದ್ದ ಘೋಷಣೆಗಳನ್ನು ಕೂಗಿದರು.
ಕಳೆದ ಕೆಲವು ತಿಂಗಳ ಹಿಂದೆ ಬಸ್ಸೊಂದು ನಿಲ್ದಾಣದ ಒಳ ಭಾಗಕ್ಕೆ ನುಗ್ಗಿ ಗೋಡೆಗೆ ಗುದ್ದಿದ್ದು ಅಂದು ಅದೃಷ್ಟವಷಾತ್ ಪ್ರಯಾಣಿಕರು ಬಚಾವಾಗಿದ್ದರು. ತುಂಡಾಗಿದ್ದ ಗೋಡೆಯನ್ನು ಈವರೆಗೂ ಕಟ್ಟುವ ಗೋಜಿಗೆ ಹೋಗದ ಸಂಸ್ಥೆಯವರು ಹಾಗೆಯೇ ಬಿಟ್ಟಿರುವುದು ಅವರ ಕಾರ್ಯ ವೈಖರಿ ಹೇಗಿದೆಯೆಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಬಸ್ ನಿಲ್ದಾಣದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದ್ದು ಚಾಲಕರು ಮನಸೋ ಇಚ್ಛೆ ವರ್ತಿಸಿ ಬೇಕಾಬಿಟ್ಟಿಯಾಗಿ ಬಸ್ಗಳನ್ನು ನಿಲ್ಲಿಸುವುದು ಹಾಗೂ ಚಲಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಪಘಾತ ಸಂಭವಿಸಿದಾಗ ಸ್ಪಂದಿಸದ ಇಂತಹ ನಿರ್ಲಕ್ಷ್ಯ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ನಂತರ ಆ್ಯಂಬುಲೆನ್ಸ್ನೊಂದಿಗೆ ನಿಲ್ದಾಣಕ್ಕೆ ಬಂದು ಅಪಘಾತಕ್ಕೊಳಗಾದ ವ್ಯಕ್ತಿಯೊಂದಿಗೆ ಅಪಘಾತವೆಸಗಿದ ಬಸ್ ನಿರ್ವಾಹಕನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು.
ನಿರ್ಲಕ್ಷ್ಯ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರು ಹಾಗೂ ಸಂಚಾರ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಲು ತೀರ್ಮಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

