ಹಾಸನ

ಸೋರುತಿಹುದು ಕಂದಾಯ ಇಲಾಖೆ ಕಚೇರಿ

Published On :

ಬಿಲ್ ಪಾವತಿಸದೆ ಕತ್ತಲಿನಲ್ಲಿ ಕಾರ್ಯ ನಡೆಯುತಿಹುದಿಲ್ಲಿ... ಹೆಂಚುಗಳು ಒಡೆದು ಹೋಗಿದ್ದರೆ, ಗೋಡೆಗಳು ಶೀತಪೀಡಿತ...
ಕ.ಪ್ರ.ವಾರ್ತೆ ಹಾಸನ ಆ. 22
ಕಂದಾಯ ಇಲಾಖೆ (ರೆವಿನ್ಯೂ) ಅಕ್ಷರಶ: ಅವ್ಯವಸ್ಥೆಗಳ ಗೂಡಾಗಿದೆ. ಸಾರ್ವಜನಿಕರ ಕೆಲಸಕ್ಕೆ ಯೋಗ್ಯವಾದ ವ್ಯವಸ್ಥೆ ಇಲ್ಲಿ ಇಲ್ಲದೆ ನರಳುತ್ತಿದೆ. ನಗರದ ಹೊಸಲೈನ್ ರಸ್ತೆಯಲ್ಲಿರುವ ಕಂದಾಯ ಇಲಾಖೆ ಕಚೇರಿಯಲ್ಲಿ ಮಳೆಗಾಲ ಬಂತೆಂದರೆ ಸಂಪೂರ್ಣ ಸೋರುತ್ತದೆ. ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಕೆಲಸಕ್ಕೆ ತೊಂದರೆ, ಜೊತೆಗೆ ಕಡತಗಳ ನಿರ್ವಹಣೆ ಸರಿಯಾಗಿ ಸಾಧ್ಯವಾಗುತ್ತಿಲ್ಲ.
ಜಿಲ್ಲಾದ್ಯಂತ ಕಳೆದ ಒಂದು ತಿಂಗಳಿನಿಂದ ಮಳೆ ಸುರಿಯುತ್ತಿದೆ. ಮಳೆ ಬಂತೆಂದರೆ ಕಂದಾಯ ಇಲಾಖೆ ಕಚೇರಿ ಒಳಗೇನೇ ಸಿಬ್ಬಂದಿ, ಸಾರ್ವಜನಿಕರು ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೊಡೆ ಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಲವು ವರ್ಷಗಳಿಂದ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಒಟ್ಟಾರೆ ಇಲ್ಲಿನ ಸಿಬ್ಬಂದಿ, ಸಾರ್ವಜನಿಕರು ವನವಾಸ ಅನುಭವಿಸುತ್ತಿದ್ದಾರೆ.
ಜಮೀನಿನದೂ ಸೇರಿದಂತೆ ನಾನಾ ಕೆಲಸಗಳಿಗಾಗಿ ಸಾರ್ವಜನಿಕರು, ರೈತರು ಕಂದಾಯ ಇಲಾಖೆಗೆ ಭೇಟಿ ನೀಡುತ್ತಾರೆ. ಬಹಳ ಮುಖ್ಯವಾದ ಹಾಗೂ ಬೆಲೆ ಬಾಳುವ ದಾಖಲೆಗಳ ಕಡತ ಇಲ್ಲಿ ಇಡಲಾಗುತ್ತಿದ್ದರೂ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಮಳೆ ಬಂದಾಗ ಗೋಡೆಯ ಮೇಲೆ ನೀರು ಇಳಿಯುವುದರಿಂದ ಕಡತಗಳು ಸಂಪೂರ್ಣವಾಗಿ ಒದ್ದೆಯಾಗಿ ಹಾಳಾಗುತ್ತಿವೆ. ಜೊತೆಗೆ ತೇವಾಂಶ ಹೆಚ್ಚಾಗಿರುವುದರಿಂದ ಯಾವ ಸಂದರ್ಭದಲ್ಲಾದರೂ ಗೋಡೆ ಸಂಪೂರ್ಣವಾಗಿ ಕುಸಿಯುವ ಅಪಾಯ ಹೆಚ್ಚಾಗಿದೆ.
ಕಚೇರಿ ಮೇಲ್ಚಾವಣಿಯ ಹೆಂಚುಗಳು ಸಹ ಸಂಪೂರ್ಣವಾಗಿ ಒಡೆದು ಹೋಗಿದ್ದು, ಮಳೆ ನೀರು ಕಚೇರಿಯೊಳಗೆ ಸೇರಿ ಪುಟ್ಟ ಕೆರೆಯಂತಾಗುತ್ತದೆ. ಇದರಿಂದ ಸಾರ್ವಜನಿಕರ ಕೆಲಸಕ್ಕೆ ಸಂಪೂರ್ಣವಾಗಿ ಅಡಚಣೆ ಜತೆಗೆ ಸಿಬ್ಬಂದಿ ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ಇಷ್ಟಾದರೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಗಳು ಈವರೆಗೊ ಇತ್ತ ಗಮನ ಹರಿಸದಿರುವುದು ವಿಪರ್ಯಾಸ.  
ಕಚೇರಿಗೆ ಬೇರೆ ಕಟ್ಟಡ ಅಥವಾ ಬೇರೆಡೆ ವರ್ಗಾಹಿಸುವ ಅನಿವಾರ್ಯತೆ ಹೆಚ್ಚಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಜೊತೆಗೆ ಕಚೇರಿಯ ವಿದ್ಯುತ್ ಬಿಲ್  ಸರಿಯಾಗಿ ಪಾವತಿಸದ ಕಾರಣ ಮೀಟರ್ ಬಿಚ್ಚಿಕೊಂಡು ಹೋಗಿರುವ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ವಿದ್ಯುತ್ ಪೂರೈಕೆ ಬೇರೆ ನಿಂತಿದೆ. ಕಚೇರಿಯಲ್ಲಿ ಸಂಪೂರ್ಣವಾಗಿ ಕತ್ತಲೆಯಿಂದ ಕೂಡಿರುತ್ತದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವರೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

ಮಳೆಗಾಲದಲ್ಲಿ ಕಂದಾಯ ಇಲಾಖೆ ಕಚೇರಿ ಸೋರುತ್ತಿರುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದು ಈ ಬಗ್ಗೆ ಚರ್ಚಿಸಲಾಗಿದೆ. ಕಚೇರಿ ರಿಪೇರಿಗೆ ಶೀಘ್ರವೇ ಕ್ರಮಕೈಗೊಳ್ಳಲಾಗುತ್ತದೆ. ಹೊಸ ಕಟ್ಟಡ ನಿರ್ಮಿಸಲು ಸದ್ಯ ಅವಕಾಶ ಇಲ್ಲ. ಸರ್ಕಾರದಿಂದ ಬಜೆಟ್ ಹಣ ಬರುವುದು ಸ್ವಲ್ಪ ತಡವಾಗಿರುವುದರಿಂದ  ವಿದ್ಯುತ್ ಬಿಲ್ ಇನ್ನೂ ಪಾವತಿಸಲು ಸಾಧ್ಯವಾಗಿಲ್ಲ. ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್   ವ್ಯವಸ್ಥೆ ಕಲ್ಪಿಸಲಾಗುವುದು
-ಮಂಜುನಾಥ್, ತಹಸೀಲ್ದಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.