ಹಾಸನ

ನಿಶ್ಚಿತಾರ್ಥವಾಗಿದ್ದ ಯುವ ಜೋಡಿ ಆತ್ಮಹತ್ಯೆ

Published On :

ಹೊಳೆನರಸೀಪುರ: ಸಪ್ತಪದಿ ತುಳಿದು ಹೊಸಬಾಳಿಗೆ ಕಾಲಿಡಬೇಕಾಗಿದ್ದ ಯುವ ಜೋಡಿ, ಯುವಕನ ಮನೆಯವರ ದುಡುಕಿನ ನಿರ್ಧಾರ ಹಾಗೂ ಕೊಂಕು ಮಾತಿಗೆ ಮನನೊಂದು, ಒಟ್ಟಿಗೆ ಬಾಳಿ ಬದುಕುವ ಕನಸನ್ನು ತಾವೇ ಹೊಸಕಿ ಹಾಕಿ ಒಟ್ಟಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ವಾಸು (24) ಹಾಗೂ ಯುವತಿ ಸುಮ (20) ಎಂದು ಹೇಳಲಾಗಿದೆ.  
ಘಟನೆಯ ವಿವರ:  ತಾಲೂಕಿನ ಕಸಬಾ ಹೋಬಳಿಯ ಹರಳಹಳ್ಳಿ ಗ್ರಾಮದ ಜವರೇಗೌಡ ಎಂಬುವವರ ಮಗ ವಾಸುವಿಗೂ ಅದೇ ಗ್ರಾಮದ ಜಯಮ್ಮ ಎಂಬುವವರ ಮಗಳು ಸುಮಳೊಂದಿಗೆ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆ ನಿಶ್ಚಿತಾರ್ಥ ನಡೆದಿತ್ತು.
ಮಂಗಳೂರಿನಲ್ಲಿ ಜೆಸಿಬಿ ಆಪರೇಟರ್ ಅಗಿದ್ದ ವಾಸು ನಿಶ್ಚಿತಾರ್ಥದ ನಂತರ ಸಹಜವಾಗಿ ತನ್ನ ಭಾವಿ ಪತ್ನಿಗೆ ಮೊಬೈಲ್ ಕೊಡಿಸಿದ್ದ. ಇದನ್ನು ಕಂಡ ವಾಸುವಿನ ತಮ್ಮ ರಮೇಶ ತನ್ನ ಭಾವಿ ಅತ್ತಿಗೆಯನ್ನು ತನ್ನ ಅಣ್ಣ ಕೊಡಿಸಿರುವ ಮೊಬೈಲನ್ನು ತನಗೆ ನೀಡುವಂತೆ ಒತ್ತಾಯಿಸಿದ.
ಆದರೆ ತಾನು ಮದುವೆಯಾಗಲಿರುವ ಹುಡುಗ ಕೊಡಿಸಿದ ಮೊಬೈಲ್ ಕೊಡಲು ಸುಮ ಒಪ್ಪದ ಕಾರಣ  ರಮೇಶ ತನ್ನ ಭಾವಿ ಅತ್ತಿಗೆಯೊಂದಿಗೆ ಸುಖಾಸುಮ್ಮನೆ ಜಗಳವಾಡಿ ಆಕೆಯ ಮೇಲೆ ಹಲ್ಲೆ ನಡೆಸಿ, ಬಾಯಿಗೆ ಬಂದಂತೆ ಬೈದ.
ಈ ವಿಷಯ ತಿಳಿದ ವಾಸು ತನ್ನ ತಮ್ಮನನ್ನು ಜಗಳದ ಕುರಿತಂತೆ ಕೇಳಿದಾಗ ಮಾತಿಗೆ ಮಾತು ಬೆಳೆದು ಮದುವೆಗೂ ಮೊದಲೇ ನಿನ್ನ ಹೆಂಡತಿಯಾಗುವವಳು, ನಮ್ಮ ಮನೆಯ ಆಸ್ತಿಯನ್ನು ಒಂದೊಂದಾಗಿಯೇ ವಸೂಲಿ ಮಾಡಲು ಹೊರಟಿದ್ದಾಳೆ ಎಂದು ದೂರಿದ್ದಲ್ಲದೇ ಆಕೆಯ ಕುರಿತಂತೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಇಷ್ಟು ಸಣ್ಣ ವಿಷಯಕ್ಕೆ ತಮ್ಮ ಮೇಲೆ ಇಲ್ಲದ ಆರೋಪ ಮಾಡುತ್ತಿರುವ ಇವರು ಮುಂದೆ ತಮ್ಮನ್ನು ನೆಮ್ಮದಿಯಿಂದ ಬಾಳಲು ಬಿಡುವುದಿಲ್ಲ ಎಂದು ಮನನೊಂದು ಗುರುವಾರ ಬೆಳಗಿನ ಜಾವ ವಾಸು - ಸುಮಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದ ವಾಸು ಹಾಗೂ ಸುಮ ಇಬ್ಬರೂ ತಮ್ಮ ಗ್ರಾಮದಿಂದ ಪಟ್ಟಣಕ್ಕೆ ಹೊರಟು ಪಟ್ಟಣಕ್ಕೆ ಬರುವಷ್ಟರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಇಲ್ಲಿನ ಖಾಸಗಿ ವೈದ್ಯರಲ್ಲಿ ಹೊಟ್ಟೆ ನೋವು ಎಂದು ಸುಳ್ಳು ಹೇಳಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ.
ಆದರೆ ವಿಷ ಸೇವಿಸಿ ಕೆಲವು ಗಂಟೆಗಳ ಬಳಿಕ ನೋವು ತಾಳಲಾರದ ಯುವ ಜೋಡಿಗಳು ಕೊನೆಗೆ ವಾಸು ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷ ಸೇವಿಸಿರುವ ವಿಷಯ ತಿಳಿಸಿ ಆಸ್ಪತೆಗೆ ಸೇರಿಸುವಂತೆ ಕೋರಿದ್ದ.
ವಿಷ ಕುಡಿದು ಬಹಳ ಕಾಲವಾದರೂ ಸೂಕ್ತ ಚಿಕಿತ್ಸೆ ಪಡೆಯದ ಕಾರಣದಿಂದಾಗಿ ಪಟ್ಟಣದ ಸಾರ್ವಜನಿಕ  ಆಸ್ಪತ್ರೆಗೆ ದಾಖಲಾಗಿದ್ದ ಸುಮ ಶುಕ್ರವಾರ ಬೆಳಿಗ್ಗೆ ಮೃತ ಪಟ್ಟಿದ್ದಾಳೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದ್ದ ಯುವಕ ವಾಸು ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಎರಡೂ ಕುಟುಂಬಕ್ಕೂ ಶವ ಒಪ್ಪಿಸಲಾಗಿದೆ.
ಮೇಲ್ನೋಟಕ್ಕೆ ಇದು ತೀರಾ ಸಾಮಾನ್ಯ ಸಂಗತಿಯಾಗಿ ಕಂಡರೂ, ತಾನು ಕೇಳಿದ್ದಕ್ಕೆ ತನ್ನ ಭಾವಿ ಅತ್ತಿಗೆ ಮೊಬೈಲ್ ನೀಡದ ಕಾರಣವನ್ನೇ ಮುಂದಿಟ್ಟುಕೊಂಡು ಆಕೆಯ ಮೇಲೆ ಹಲ್ಲೆ ನಡೆಸಿದ್ದ ರಮೇಶ, ಮನೆಗೆ ತೆರಳಿದ ನಂತರ ತನ್ನ ತಂದೆಯ ಬಳಿ ಇಲ್ಲ ಸಲ್ಲದ ಚಾಡಿ ಮಾತುಗಳನ್ನು ಹೇಳಿ ತನ್ನ ಮನೆಯವರ ತಲೆ ಕೆಡಿಸಿದ್ದ. ಹಾಗೂ ಈ ಮದುವೆಯನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂಬ ಉದ್ದೇಶದಿಂದ ತನ್ನ ಅಣ್ಣನಿಗೆ ಮೂರು ಲಕ್ಷ ರು. ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಡಲು ಬೇರೆಯವರು ಮುಂದೆ ಬಂದಿರುವ ಕಾರಣದಿಂದ ಈ ಮದುವೆ ನಡೆಯುವುದಿಲ್ಲ ಎನ್ನುವ ರೀತಿಯಲ್ಲಿ ವಾಸುವಿನ ತಂದೆ ಜವರೇಗೌಡ ಕೂಡಾ ಯುವತಿಯ ಮನೆಗೆ ಹೋಗಿ ಗಲಾಟೆ ಮಾಡಿ ಬಂದಿದ್ದರು ಎನ್ನಲಾಗಿದೆ.
ಸೂಕ್ಷ ಸ್ವಭಾವದವರಾಗಿದ್ದ ಯುವ ಜೋಡಿಗಳು ತಮ್ಮನ್ನು ಒಂದುಗೂಡಲು ಕುಟುಂಬದವರು ಬಿಡುವುದಿಲ್ಲ ಎಂಬ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕೆಲವು ಮೂಲಗಳು ತಿಳಿಸಿದೆ. ಈ ಘಟನೆಯ ನಂತರ ಯುವಕ ವಾಸುವಿನ ತಂದೆ ಜವರೇಗೌಡ ಹಾಗೂ ರಮೇಶ ಇಬ್ಬರೂ ತಲೆತಪ್ಪಿಸಿಕೊಂಡಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.