ಹಾಸನ

26ಕ್ಕೆ ಆಶಾ ಕಾರ್ಯಕರ್ತೆಯರ ಬೃಹತ್ ರಾಜ್ಯ ಸಮಾವೇಶ

Published On :

ಕನ್ನಡಪ್ರಭ ವಾರ್ತೆ ,  ಹಾಸನ ,  ಆ.23
ನಾನಾ  ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.26 ರಂದು  ಬೆಳಗ್ಗೆ 11ಕ್ಕೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ   ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು  ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಜಾನಕಿ ತಿಳಿಸಿದ್ದಾರೆ.
  ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪ್ರೋತ್ಸಾಹ ಧನ ಕೊಡುವುದಾಗಿ 2013-14ನೇ ಸಾಲಿನ ಬಜೆಟ್  ಘೋಷಣೆಯನ್ನು ಸ್ಪಷ್ಟ ರೂಪದಲ್ಲಿ ಶೀಘ್ರ ಜಾರಿಗೊಳಿಸಬೇಕು. ಪ್ರತಿ ತಿಂಗಳೂ ತಪ್ಪದೇ ಪ್ರೋತ್ಸಾಹಧನ ಪಾವತಿಸಬೇಕು, ಆರೋಗ್ಯ ಸೌಕರ್ಯ ಮತ್ತು ಭದ್ರತೆ ಖಾತ್ರಿಪಡಿಸಬೇಕು ಎನ್ನುವುದೂ ಸೇರಿದಂತೆ ಇತರ ಪ್ರಮುಖ ಬೇಡಿಕೆಗಳ ಈಡೇರಿಕೆ ಮತ್ತು ನೆರೆಯ ರಾಜ್ಯಗಳಂತೆ ರಾಜ್ಯದಲ್ಲಿಯೂ ಮಾಸಿಕ ಗೌರವಧನ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
  ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಬೃಹತ್ ಸಮಾವೇಶ ಸಂಘಟಿಸಲಾಗಿದೆ. ಸಮಾವೇಶದಲ್ಲಿ ನಾಡಿನ ಹಿರಿಯ ಸ್ವಾತಂತ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕವಿಯತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ, ಮಹಿಳಾ ಹೋರಾಟಗಾರ್ತಿ ಮೀರಾ ನಾಯಕ್, ಚಂದ್ರಕಲಾ ನಂದಾವರ ಆಲ್ ಇಂಡಿಯಾ ಯುಟಿಯುಸಿ ರಾಜ್ಯ ಅಧ್ಯಕ್ಷೆ ಕೆ. ರಾಧಾಕೃಷ್ಣ ಭಾಗವಹಿಸುವರು.
ರಾಜ್ಯದಲ್ಲಿ 33 ಸಾವಿರ ಕಾರ್ಯಕರ್ತೆಯರು:  ಪ್ರಪಂಚದ ಅತಿ ಹೆಚ್ಚು ಸಾಮೂಹಿಕ ಆರೋಗ್ಯ ಕಾರ್ಯಕರ್ತೆಯರಿರುವ ಯೋಜನೆ ಎಂಬ ಹೆಗ್ಗಳಿಕೆಯ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ರಾಜ್ಯದ 33 ಸಾವಿರ ಸೇರಿದಂತೆ ದೇಶದಲ್ಲಿ 8.50 ಲಕ್ಷ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲ ಗ್ರಾಮದ ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇಧಿತರು ಎರಡು ಮಕ್ಕಳ ತಾಯಂದಿರಾಗಿದ್ದಾರೆ. ಅಂತಹ ಮಹಿಳೆಯರನ್ನು ಗ್ರಾಮೀಣ ಭಾಗದ ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ತ ಶಿಶುವಿನ ಜನನ, ಆರೈಕೆಗಳ ಹಾಗೂ ಆರೋಗ್ಯದ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ, ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ ಇತ್ಯಾದಿ ರೋಗಗಳನ್ನು ತಡೆಗಟ್ಟಲು ಆಶಾ ಕಾರ್ಯಕರ್ತೆಯರನ್ನು ತೊಡಗಿಸಲಾಗಿದೆ.
  ಗ್ರಾಮೀಣ ಪ್ರದೇಶದ ಬಡತನದ ಅರಿವುಳ್ಳವರಾದ ಈ ಮಹಿಳಾ ಕಾರ್ಮಿಕರು ಕಳೆದ 5-6 ವರ್ಷದಿಂದ ಹಗಲು ರಾತ್ರಿ ಎನ್ನದೆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಎಂತಹ ಅನಾನುಕೂಲತೆ ಎದುರಾದರೂ, ಅದನ್ನು ಲೆಕ್ಕಿಸದೆ ಬಡವರಿಗೆ ಸಮರ್ಪಕ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ, ಜಿಲ್ಲಾ ಆಸ್ಪತ್ರೆವರೆಗೆ ರೋಗಿಗಳನ್ನು ಕರೆತಂದು ಚಿಕಿತ್ಸೆ ಕೊಡಿಸಲು ಅತ್ಯಂತ ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಭವಿಷ್ಯದ ಮೇಲೆ ಕಲ್ಲುಬಂಡೆ:  ಆಸ್ಪತ್ರೆಗಳಲ್ಲಿ ವಿವಿಧ ರೋಗಿಗಳನ್ನು ಜೊತೆಯಲ್ಲಿಟ್ಟುಕೊಂಡು ಉತ್ತಮ ಚಿಕಿತ್ಸೆಕೊಡಿಸಲು ಹೆಣಗಾಡುತ್ತಿರುವ ಆಶಾ ಕಾರ್ಯಕರ್ತೆಯರಿಲ್ಲದ ಆಸ್ಪತ್ರೆಗಳೇ ಇಲ್ಲವೇನೋ ಎನ್ನುವಷ್ಟು ಸೇವೆಯನ್ನು ಪಡೆಯುತ್ತಿರುವ ಸರ್ಕಾರ ಆಶಾ ಕಾರ್ಯಕರ್ತೆಯರು ಮಾಸಿಕ ವೇತನಕ್ಕೆ ಅರ್ಹರಲ್ಲ ಎಂದು ಒಂದು ಸಾಲಿನ ಷರಾ ಹೊರಡಿಸಿ ಕಾರ್ಯಕರ್ತೆಯರ ಭವಿಷ್ಯದ ಮೇಲೆ ಕಲ್ಲುಬಂಡೆ ಎಳೆದಿದೆ ಎಂದು ಜಾನಕಿ ತಿಳಿಸಿದ್ದಾರೆ.
   ಆ ಕೆಲಸ ಮಾಡಿದರೆ ಅಷ್ಟು, ಈ ಕೆಲಸ ಮಾಡಿದರೆ ಇಷ್ಟು ಹಣ ಸಿಗುತ್ತದೆ ಎಂದು ಬಿಸಿಲು ಕುದುರೆಯ ಬೆನ್ನು ಹತ್ತಿಸುತ್ತಿರುವ ಸರ್ಕಾರಗಳು ಸೂಕ್ತ ಮಾಸಿಕ ವೇತನ ನೀಡುವುದರಿಂದ ತಪ್ಪಿಸಿಕೊಳ್ಳಲು ಅನ್ಯ ಮಾರ್ಗ ಹಿಡಿದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುವ ಮಾಸಿಕ ಸಭೆಗೆ ಭಾಗವಹಿಸಿದರೆ 100 ರು. ಗರ್ಭಿಣಿಯನ್ನು ನೋಂದಾಯಿಸಿಕೊಂಡು ಹೆರಿಗೆ ಮುಂಚಿನ ಆರೋಗ್ಯ ಸೌಕರ್ಯ ಒದಗಿಸಿಕೊಡಲು ಪಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಯವರೆಗೆ ಗರ್ಭಿಣಿಗೆ ಚಿಕಿತ್ಸೆ ಕೊಡಿಸಿ ಸುರಕ್ಷಿತ ಹೆರಿಗೆ ಮಾಡಿಸಿದರೆ 9 ತಿಂಗಳುಗಳ ಶ್ರಮಕ್ಕೆ 200 ರು., ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ 100 ರು.ನಲ್ಲಿ  (ಭಾಗವಹಿಸಿದ ಎಲ್ಲ ಕಾರ್ಯಕತೆಯರು ಹಂಚಿಕೊಳ್ಳಬೇಕು.)
  ವರ್ಷದ ದಾಖಲೆ ಬರೆದಿಟ್ಟರೆ ವರ್ಷಕ್ಕೆ ಸಾವಿರ ರು. ಇಂತಹ 28 ಕೆಲಸಗಳನ್ನು ನಿರ್ವಹಿಸಬೇಕು. ತಿಂಗಳು ಪೂರ್ತಿ ದುಡಿದರೂ ಅವರಿಗೆ ಮಾಸಿಕ ಸಾವಿರ ರು. ದಾಟುತ್ತಿಲ್ಲ ಎಂದು ವಿಷಾದಿಸಿದ್ದಾರೆ.
 ಆರೋಗ್ಯ ಇಲಾಖೆಯಿಂದ ಸಂಪೂರ್ಣ ಉಚಿತವಾಗಿ ಮಾಡಿಸಿಕೊಳ್ಳುವ ಕೆಲಸಗಳೂ ಸಾಕಷ್ಟು ಇವೆ. ಅವುಗಳಲ್ಲಿ ಕಣ್ಣಿನ ಆಪರೇಷನ್ ಕ್ಯಾಂಪ್, ವಾಜಪೇಯಿ ಆರೋಗ್ಯಶ್ರೀ, ಅಪೌಷ್ಟಿಕ ಮಕ್ಕಳ ಸರ್ವೇ, ಗ್ರೇಡ್ ಮಕ್ಕಳ ಸರ್ವೇ, ಕುಷ್ಠ ರೋಗ ಸರ್ವೇ, ಅರ್ಹ ದಂಪತಿ ಸರ್ವೇ ಇತ್ಯಾದಿ ಮತ್ತು ವರ್ಷದಲ್ಲಿ ಹಲವಾರು ಬಾರಿ ವಿವಿಧ ಸಭೆಗಳಿಗೆ ಆಶಾ ಕಾರ್ಯಕರ್ತೆಯರನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಕರೆಯುತ್ತಿದ್ದು ಇದಕ್ಕೆ ಯಾವುದೇ ಭತ್ಯೆಯನ್ನು ನೀಡಲಾಗುತ್ತಿಲ್ಲ. ಆಶಾ ಕಾರ್ಯಕರ್ತೆಯರು ತಮ್ಮದೆ ವೆಚ್ಚದಲ್ಲಿ ಬಂದು ಹೋಗುತ್ತಾರೆ.
  ಪ್ರತಿ ಆಶಾ ಹೆರಿಗೆ, ಚುಚ್ಚುಮದ್ದು ಇನ್ನಿತರ ವಿವರಗಳನ್ನು ಈಗ ಎಂಸಿಟಿಎಸ್‌ಗೆ ಇಂಟರ್‌ನೆಟ್‌ನಲ್ಲಿ ದಾಖಲು ಮಾಡಬೇಕು. ದಾಖಲು ಇದ್ದಲ್ಲಿ ಮಾತ್ರ ಆಶಾಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಂದೇ ದಾಖಲು ಮಾಡಬೇಕು. ಇಲ್ಲವಾದಲ್ಲಿ ಪ್ರೋತ್ಸಾಹ ಧನವಿಲ್ಲ ಎಂದು ದೂರಿದ್ದಾರೆ.
  ರಾಜ್ಯದ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.