ಅರಸೀಕೆರೆ ಪುರಸಭೆ ಅಧ್ಯಕ್ಷ ಸ್ಥಾನ 'ತೆನೆ' ತೆಕ್ಕೆಗೆ?
ಕನ್ನಡಪ್ರಭ ವಾರ್ತ್ಣೆ ಅರಸೀಕೆರೆ ಆ. 25
ಪುರಸಭೆ ಆಡಳಿತದ ಚುಕ್ಕಾಣಿ ಯಾವ ಪಕ್ಷ ಹಿಡಿಯಲಿದೆ ಎಂಬುದು ಚರ್ಚೆಗೆ ಗ್ರಾಸವಾಗಿ ನಾಗರಿಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇದೀಗ ಮೀಸಲಾತಿ ಪ್ರಕಟಗೊಂಡಿದ್ದು ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಇದು ಜೆಡಿಎಸ್ ವಲಯದಲ್ಲಿ ಉಲ್ಲಾಸದಾಯಕ ವಾತಾವರಣ ಸೃಷ್ಟಿ ಮಾಡಿದೆ.
ರಾಜ್ಯದ ಅಧಿಕಾರ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿದಿರುವುದರಿಂದ ಪುರಸಭೆಯ ಆಡಳಿತ ಹಿಡಿಯಲು ಕಾಂಗ್ರೆಸ್ಗೆ ಅನುಕೂಲವಾಗುವಂತಹ ಮೀಸಲಾತಿ ಪ್ರಕಟಗೊಳ್ಳಲಿದೆ ಎಂಬ ವದಂತಿ ಹಬ್ಬಿತ್ತಲ್ಲದೆ ಇದಕ್ಕಾಗಿ ಕಾಂಗ್ರೆಸ್ ನಾಯಕರು ತಮಗೆ ಅನುಕೂಲವಾಗುವಂತಹ ಮೀಸಲಾತಿಯನ್ನು ಮಾಡಿಸಲು ಸಾಕಷ್ಟು ಕಸರತ್ತು ನಡೆಸಿದ್ದರು. ಆದರೂ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಇದರಲ್ಲಿ ಯಶಸ್ಸು ಕಾಣುವ ಮೂಲಕ ಕಾಂಗ್ರೆಸ್ ನಡೆಸಿದ ಪ್ರಯತ್ನ ನೀರಿನಲ್ಲಿ ಹೋಮವಾದಂತಾಗಿದೆ.
ಪಟ್ಟಣದ ಪುರಸಭೆಯಲ್ಲಿ 27 ಸದಸ್ಯರ ಬಲ ಹೊಂದಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ 11 ಸ್ಥಾನ ಗಳಿಸುವ ಮೂಲಕ ಸಮಬಲ ಸ್ಥಾಪಿಸಿದ್ದರೆ ನಾಲ್ವರು ಪಕ್ಷೇತರರು ಹಾಗೂ ಒಬ್ಬ ಕೆಜೆಪಿ ಸದಸ್ಯ ಆಯ್ಕೆಯಾಗುವ ಮೂಲಕ ಅತಂತ್ರ ಪುರಸಭೆ ನಿರ್ಮಾಣವಾಗಿತ್ತು. ಆದರೂ ಛಲಬಿಡದ ತ್ರಿವಿಕ್ರಮನಂತೆ ಶಾಸಕ ಕೆ.ಎಂ ಶಿವಲಿಂಗೇಗೌಡರು ನಡೆಸಿದ ಪ್ರಯತ್ನದ ಫಲವಾಗಿ ಮೂವರು ಪಕ್ಷೇತರರು ಜೆಡಿಎಸ್ಗೆ ಸೇರ್ಪಡೆಗೊಳ್ಳುವ ಮೂಲಕ ಜೆಡಿಎಸ್ ಸದಸ್ಯ ಬಲವನ್ನು 14ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಅಧಿಕಾರ ಹಿಡಿಯಲು ದಾಪುಗಾಲು ಹಾಕಿದೆ.
ಮನು, ಪಂಚಾಕ್ಷರಿ, ಖುಷಿಬಾಬು ನಡುವೆ ಪೈಪೋಟಿ: ಕಡೆಗಳಿಗೆಯಲ್ಲಿ ಜೆಡಿಎಸ್ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿ ಜೆಡಿಎಸ್ಗೆ ಸೇರ್ಪಡೆಗೊಂಡಿರುವ ಮೋಹನ್ ಕುಮಾರ್(ಮನು), 1ನೇ ವಾರ್ಡ್ನಿಂದ ಆಯ್ಕೆಯಾಗಿರುವ ಪಂಚಾಕ್ಷರಿ ಹಾಗೂ 11ನೇ ವಾರ್ಡ್ನ ಖುಷಿಬಾಬು ಜೆಡಿಎಸ್ ಅಭ್ಯರ್ಥಿಗಳಾಗಿ ಚುನಾಯಿತರಾಗಿದ್ದು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರು ಈಗಾಗಲೇ ಶಾಸಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ತೆರಮರೆಯ ಕಸರತ್ತು ನಡೆಸಿದ್ದು ಶಾಸಕರ ಆಪ್ತ ವಲಯದಲ್ಲಿ ಕಂಡುಬರುತ್ತಿರುವ ಹಾಗೂ ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಅವರ ಆಶೀರ್ವಾದ ಪಡೆದಿರುವ ಪಂಚಾಕ್ಷರಿ ಅವರಿಗೆ ಹೆಚ್ಚಿನ ಅವಕಾಶವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ 8ನೇ ವಾರ್ಡ್ನಿಂದ ಭಾರಿ ಬಹುಮತಗಳಿಂದ ಆಯ್ಕೆಯಾದ ಭಾಗ್ಯಲಕ್ಷ್ಮೀ ಮಂಜುನಾಥ್ ಹಾಗೂ 6ನೇ ವಾರ್ಡ್ನ ಅನ್ನಪೂರ್ಣ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಆದರೆ ಶಾಸಕರ ತೀರ್ಮಾನ ಏನೆಂಬುದು ಗೊತ್ತಾಗಲಿದೆ.
ಕಳೆದ ಬಾರಿಯಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಅಧಿಕಾರ ಸಮಾನವಾಗಿ ಹಂಚುವ ಮೂಲಕ ಎಲ್ಲರಿಗೂ ಅಧಿಕಾರ ಹಂಚಿಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿವೆ.
ಮುಗ್ಗರಿಸಿದ ಕಾಂಗ್ರೆಸ್: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಜೆಡಿಎಸ್ನಿಂದ ಆಯ್ಕೆಯಾಗದಿರುವ ಎಸ್.ಸಿ. ಮತ್ತು ಎಸ್.ಟಿ. ಮಹಿಳೆ ಹಾಗೂ ಬಿ.ಸಿ.ಎಂ.ಬಿ ಮಹಿಳೆ ಮೀಸಲಾತಿಯಾದರೆ ಕಾಂಗ್ರೆಸ್ ನಿರಾಯಾಸವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದೆಂಬ ಕಾಂಗ್ರೆಸ್ ಮುಖಂಡರ ಕನಸು ಭಗ್ನಗೊಂಡಿದೆ.
ಅಲ್ಲದೇ ಜಿಲ್ಲಾ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪೌರಾಡಳಿತ ಸಚಿವರ ಮೇಲೆ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ ಎಂಬುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಂತೂ ಪುರಸಭೆ ಗಾದಿಗೆ ಮೀಸಲು ಪ್ರಕಟಗೊಂಡಿದ್ದು ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪದವಿ ಅಲಂಕರಿಸುವ ಅದೃಷ್ಟ ಯಾರಿಗಿದೆ ಎಂಬುದಕ್ಕೆ ಶೀಘ್ರದಲ್ಲಿಯೇ ತೆರೆ ಬೀಳಲಿದೆ.
ನಿಕಟ ಪೈಪೋಟಿ
ಕಳೆದ ಬಾರಿ ಸ್ವಂತ ಬಲದ ವ ುಲೆ ಅಧಿಕಾರ ನಡೆಸಿದ ಜೆ.ಡಿ.ಎಸ್.ಗೆ ಈ ಬಾರಿ ಪಕ್ಷೇತರರ ನೆರವು ಅನಿವಾರ್ಯ ಹಾಗೂ ಪಕ್ಷೇತರರ ನಿರ್ಧಾರವೇ ಅಂತಿಮವಾಗಿದೆ. ಜೆಡಿಎಸ್ನಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ಬಿ.ಎನ್.ವಿದ್ಯಾಧರ್ ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಇದೀಗ ಕಾಂಗ್ರೇಸ್ ಸೇರ್ಪಡೆಗೊಂಡಿದ್ದು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹುರಿಯಾಳಾಗುವ ಸಾಧ್ಯತೆಯಿದೆ. ಹೀಗಾಗಿ ಜೆಡಿಎಸ್ಗೆ ಕಳೆದ ಬಾರಿಯಂತೆ ಅಧ್ಯಕ್ಷಗಾದಿ ಸುಲಭದ ಮಾತಲ್ಲ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಈ ನಡುವೆ ಪಕ್ಷೇತರರಿಗೂ ಕೆ.ಜೆ.ಪಿ. ಅಭ್ಯರ್ಥಿಗೂ ಬಾರಿ ಬೇಡಿಕೆ ಹೆಚ್ಚಿದೆ. ಶೀಘ್ರದಲ್ಲಿಯೇ ದಿನಾಂಕ ಪ್ರಕಟಗೊಳ್ಳಲಿದ್ದು ಆಕಾಂಕ್ಷಿಗಳ ಹೃದಯ ಬಡಿತ ಹೆಚ್ಚಿಸಿದೆ.
-ಪಿ.ಶಾಂತಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

