ಜಿಲ್ಲೆಯಲ್ಲಿ 500 ಕೆರೆಗಳ ಪುನಶ್ಚೇತನ
ಕ.ಪ್ರ.ವಾರ್ತೆ ಹಾಸನ ಆ.28
ಜಿಲ್ಲೆಯ 258 ಗ್ರಾಮ ಪಂಚಾಯ್ತಿಗಳಲ್ಲಿ ಪ್ರಸಕ್ತ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 25 ಸಾವಿರ ಶೌಚಾಲಗಳ ನಿರ್ಮಾಣ, ಜಮೀನುಗಳ ಅಭಿವೃದ್ಧಿ 500 ಕೆರೆಗಳ ಪುನಶ್ಚೇತನ, ಒಕ್ಕಣೆ ಕಣ ಮತ್ತು ರಸ್ತೆಗಳನ್ನು ನಿರ್ಮಾಣ ಮಾಡಲು ಜಿಲ್ಲಾ ಪಂಚಾಯ್ತಿ ಮುಂದಾಗಿದೆ.
ಅದಕ್ಕಾಗಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅನುದಾನದ ಅಗತ್ಯತೆ ಕುರಿತ ಕ್ರಿಯಾ ಯೋಜನೆ ತ್ವರಿತವಾಗಿ ಕಳುಹಿಸಿಕೊಡಲು ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳಿಗೆ ಸೂಚಿಸಲಾಗಿದೆ.
ಈ 5 ಕಾರ್ಯಕ್ರಮಗಳಲ್ಲಿ ಅವ್ಯವಹಾರ ನಡೆಯುವುದನ್ನು ತಡೆಯಲು ಓಂಬಡ್ಸ್ಮನ್ ನೇಮಿಸಿದ್ದು, ಜಾಬ್ ಕಾರ್ಡ್ ಮತ್ತು ಕೂಲಿ ಹಣ ವಿತರಣೆ ಸಂದರ್ಭದಲ್ಲಿ ಹೊಸ ಬಗೆಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಬುಧವಾರ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ ಮತ್ತು ಸಿಇಓ ಯು.ಪಿ. ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ಗ್ರಾಪಂ ಸಭೆಯಲ್ಲಿ ಆಯ್ಕೆಯಾದ ಬಿಪಿಎಲ್ ವ್ಯಾಪ್ತಿಗೆ ಬರುವ 100 ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗುತ್ತಿದ್ದು, ಪ್ರತಿ ಶೌಚಾಲಯಕ್ಕೆ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ 4,700, ಖಾತ್ರಿ ಯೋಜನೆಯಡಿ 4,500 ಮತ್ತು ವೈಯಕ್ತಿಕವಾಗಿ 800 ರು. ಸೇರಿದಂತೆ ಒಟ್ಟು 10 ಸಾವಿರ ರು. ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳ ಹೊಲಗಳಲ್ಲಿ ನೀರಾವರಿ ಸೌಲಭ್ಯ, ತೋಟಗಾರಿಕೆ ಗಿಡಗಳನ್ನು ನೆಡುವುದು. ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಮತ್ತು ಭೂ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಮಳೆ ನೀರು ನಿರಂತರವಾಗಿ ಹರಿಯುವ 10 ಹೆಕ್ಟೇರ್ಗಿಂತ ಕಡಿಮೆ ವಿಸ್ತೀರ್ಣವುಳ್ಳ ಸಣ್ಣ ಕೆರೆಗಳು, ಗೋಕಟ್ಟೆಗಳು, ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗುವುದು. ಪ್ರತಿ ಗ್ರಾಪಂಗೆ 2 ಕೆರೆಗಳನ್ನು ಆಯ್ಕೆ ಮಾಡಿ ಸುಮಾರು 500 ಕೆರೆಗಳನ್ನು ಪುನಶ್ಚೇತನಗೊಳಿಸಲಾಗುವುದು. ಅಲ್ಲದೇ ಕೆರೆ ಏರಿಗಳನ್ನು ಸಹ ಅಭಿವೃದ್ಧಿ ಪಡಿಸಲಾಗುವುದು.
ಸರ್ವಋತು ಸಂಪರ್ಕ ರಸ್ತೆ: ನಮ್ಮ ಹೊಲ ನಮ್ಮ ದಾರಿ ಕಾರ್ಯಕ್ರಮದಲ್ಲಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸರ್ವಋತು ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗುವುದು. ಗ್ರಾಪಂಗಳಲ್ಲಿ ಲಭ್ಯವಿರುವ ಜಾಗದಲ್ಲಿ 150 ರಿಂದ 200 ಅಡಿ ವ್ಯಾಸವುಳ್ಳ ಒಕ್ಕಣ ಕಣಗಳನ್ನು ನಿರ್ಮಿಸಲಾಗುವುದು. ಈ ಎಲ್ಲಾ ಕಾಮಗಾರಿಗಳಿಗೆ ಹಣವನ್ನು ಗ್ರಾಪಂಗಳಿಗೆ ಕ್ರಿಯಾ ಯೋಜನೆ ಸಲ್ಲಿಸಿದ ನಂತರ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
2013- 14 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಖಾತ್ರಿ ಯೋಜನೆಯಡಿ 79 ಕೋಟಿ ರು. ವೆಚ್ಚವಾಗಿದ್ದು, 14- 15 ನೇ ಸಾಲಿನಲ್ಲಿ ಜುಲೈ ಅಂತ್ಯದವರೆಗೆ 14.41 ಕೋಟಿ ರು. ವೆಚ್ಚ ಮಾಡಲಾಗಿದೆ. ಗ್ರಾಪಂಗಳು ವಿದ್ಯುತ್ ಬಾಕಿ ಉಳಿಸಿಕೊಂಡಿಲ್ಲ. ಅಗತ್ಯದಷ್ಟು ಹಣ ನೀಡಲಾಗಿದೆ. ಮಾನವ ಕೆಲಸ ಮಾಡಲಾಗದ ಸಂದರ್ಭದಲ್ಲಿ ಯಂತ್ರಗಳನ್ನು ಬಳಸಬಹುದಾಗಿದೆ ಎಂದರು.
56 ಪಿಡಿಓಗಳಿಗೆ ದಂಡ: ಕರ್ತವ್ಯದಲ್ಲಿ ಅದಕ್ಷತೆ ಮತ್ತು ನಿರ್ಲಕ್ಷ್ಯ ತೋರಿದ ಜಿಲ್ಲೆಯ 56 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಲಾ 1000 ರು. ದಂಡ ವಿಧಿಸಲಾಗಿದೆ. ಹಿಂದೆ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆಸಿದ್ದ ಅಧಿಕಾರಿಗಳ ವಿರುದ್ಧ ಹೂಡಿದ್ದ ಕ್ರಿಮಿನಲ್ ಮೊಕದ್ದಮೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ಎಸ್ಪಿ ಜತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ನಂಬರ್ಗೆ ದೂರು ನೀಡಿ: ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳು ಕಳಪೆ ನಡೆದಲ್ಲಿ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಕೂಲಿ ನೀಡಲು ನೀಡಲು ಜಾಬ್ಕಾರ್ಡ್ ನೀಡುವಲ್ಲಿ ಅವ್ಯವಹಾರ ನಡೆದರೆ ಟೋಲ್ ಫ್ರೀ ನಂಬರ್ -18004258666 ಗೆ ಕರೆ ಮಾಡಿ ದೂರ ನೀಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಅವ್ಯವಹಾರ ತಡೆಯಲೆಂದೆ ಅಧಿಕಾರಿ ರಾಮಸ್ವಾಮಿ ಅವರನ್ನು ಓಂಬಡ್ಸ್ಮನ್ ಆಗಿ ಸರ್ಕಾರ ನೇಮಕ ಮಾಡಿದೆ ಎಂದು ತಿಳಿಸಿದರು.
ಕೂಲಿ ಹೆಚ್ಚಳ ಮಾಡಬೇಕು: ಈಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ವ್ಯಕ್ತಿಗೆ 174 ರು. ಕೂಲಿ ನೀಡಲಾಗುತ್ತಿದೆ. ಇದನ್ನು 300 ರು. ಗಳಿಗೆ ಏರಿಕೆ ಮಾಡಬೇಕಾಗಿದೆ. ಖಾತ್ರಿ ಯೋಜನೆಯಡಿ ಕೆಲಸ ನೀಡುವ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲಾಗುತ್ತಿದೆ ಎಂದರು. ಜಿಪಂ ಉಪ ಕಾರ್ಯದರ್ಶಿ ಕರಿಯಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

