ರೈತರನ್ನು ವಿನಾಕಾರಣ ಅಲೆಸಿದರೆ ಹುಷಾರ್
ಹೊಳೆನರಸೀಪುರ: ಶಾಸಕ ಎಚ್.ಡಿ.ರೇವಣ್ಣ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಹಾಗು ರಾಜಸ್ವ ನಿರೀಕ್ಷಕರು ಸಭೆ ಕರೆದಿದ್ದರು.
ಈ ಸಂದರ್ಭದಲ್ಲಿ ಅವರು, ಕಂದಾಯ ಇಲಾಖೆ ಕೆಲವು ಸಿಬ್ಬಂದಿ ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು ತಿದ್ದುತ್ತಿರುವ ಕುರಿತು ದೂರುಗಳು ಬಂದಿದ್ದು, ಸದರಿ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ನಾಗರಿಕರ ಕುಂದು ಕೊರತೆ ಆಲಿಸುವುದನ್ನು ಜಾರಿಗೆ ತಂದಿರುವ ಕುರಿತಂತೆ ಪರಿಶೀಲನೆ ನಡೆಸಿದರಲ್ಲದೆ, ವಿನಾಕಾರಣ ಸಾರ್ವಜನಿಕರನ್ನು ಅಲೆಸುವ ಕಾರ್ಯವೈಖರಿ ಕುರಿತಂತೆ ಕಂದಾಯ ಇಲಾಖೆಯಲ್ಲಿನ ಸಿಬ್ಬಂದಿಗೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ಯನ್ನು ಈ ಸಂದರ್ಭದಲ್ಲಿ ಶಾಸಕ ರೇವಣ್ಣ ನೀಡಿದರು.
ರಾಜಸ್ವ ನಿರೀಕ್ಷಕರು ತರಾಟೆಗೆ: ವೃದ್ಧಾಪ್ಯ ವೇತನ, ಸಂಧ್ಯಾ, ಸುರಕ್ಷಾ ಹಾಗು ವಿವಿಧ ವೇತನ ನೀಡಿಕೆ ಸಂದರ್ಭದಲ್ಲಿ ಅರ್ಹರನ್ನು ವಿನಾಕಾರಣ ಅಲೆಸುವುದಲ್ಲದೇ, ವಿಳಂಬ ನೀತಿ ಅನುಸರಿಸುತ್ತಿರುವ ಕುರಿತಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಯಾವುದೇ ಕಾರಣಕ್ಕೂ ಈ ರೀತಿಯ ದೂರುಗಳು ಮರುಕಳಿಸಿದಲ್ಲಿ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಅಧಿಕಾರಿಗಳ ವಿರುದ್ಧ ಅಸಮಾಧಾನ: ವಿದ್ಯಾಭ್ಯಾಸ ಸಲುವಾಗಿ ಆದಾಯ ದೃಢೀಕರಣ ಪತ್ರ ನೀಡುವ ಸಂದರ್ಭದಲ್ಲಿ ನೆಮ್ಮದಿ ಕೇಂದ್ರದಲ್ಲಿನ ವಿಳಂಬದಿಂದಾಗಿ ವಿದ್ಯಾರ್ಥಿಗಳು, ಪೋಷಕರಲ್ಲದೆ, ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ದಾಖಲಾತಿಗಳನ್ನು ಪಡೆಯುವ ಸಂದರ್ಭದಲ್ಲೂ ಉಂಟಾಗುತ್ತಿರುವ ಅನಗತ್ಯ ವಿಳಂಬದ ಕುರಿತಂತೆ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾಭ್ಯಾಸದ ಸಲುವಾಗಿ ನೀಡುವ ಆದಾಯ ಹಾಗೂ ಇನ್ನಿತರ ದಾಖಲಾತಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರ ಹಂತದಲ್ಲಿಯೇ ವಿತರಿಸಿ, ಈ ಸಂದರ್ಭದಲ್ಲಿ ಸುಳ್ಳು ಪ್ರಮಾಣ ಪತ್ರ ಹಾಗೂ ದಾಖಲಾತಿ ನೀಡಿದ್ದಲ್ಲಿ, ಅಂತಹ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಕಂದಾಯ ಸಚಿವರಿಗೆ ಶಾಸಕರ ಹೆಸರಿನಲ್ಲಿಯೇ ಪತ್ರ ಬರೆಯುವಂತೆ ಸೂಚಿಸಿದರು.
ಸಿಬ್ಬಂದಿ ತಮ್ಮ ಲೋಪ ತಿದ್ದುಕೊಳ್ಳಲಿ: ಇಲ್ಲಿನ ಭೂಮಾಪನಾ ಕಚೇರಿಯಲ್ಲಿನ ಸಿಬ್ಬಂದಿ ನಿರ್ಲಕ್ಷ್ಯತೆಯಿಂದಾಗಿ ನಾಗರಿಕರಿಗೆ ತೊಂದರೆ ಉಂಟಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಸದರಿ ಇಲಾಖೆಯಲ್ಲಿನ ಸಿಬ್ಬಂದಿ ತಮ್ಮ ಲೋಪಗಳನ್ನು ತಿದ್ದಿಕೊಂಡು ಕರ್ತವ್ಯ ನಿರ್ವಹಿಸದಿದಲ್ಲಿ, ಮುಂದಿನ ದಿನಗಳಲ್ಲಿ ಉಂಟಾಗುವ ಪರಿಣಾಮವನ್ನು ಎದುರಿಸುವಂತೆ ಹೇಳಿದರು. ಖಾತೆ, ಪೋಡುಗಳ ನಿರ್ವಹಣೆಯ ಸಂದರ್ಭದಲ್ಲೂ ಉಂಟಾಗುತ್ತಿರುವ ಅನಗತ್ಯ ಗೊಂದಲಗಳನ್ನು ಸರಿಪಡಿಸಿಕೊಂಡು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಕಂದಾಯ ಇಲಾಖಾ ಸಿಬ್ಬಂದಿಗೆ ಶಾಸಕ ಎಚ್.ಡಿ.ರೇವಣ್ಣ ಸೂಚಿಸಿದರು. ತಾಲೂಕು ವ್ಯಾಪ್ತಿಯಲ್ಲಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರಗಳನ್ನು ಶೀಘ್ರದಲ್ಲಿಯೇ ಪಟ್ಟಿ ಮಾಡಿ ತಮಗೆ ನೀಡುವಂತೆ ಇದೇ ಸಂದರ್ಭದಲ್ಲಿ ಶಾಸಕ ಎಚ್.ಡಿ.ರೇವಣ್ಣ ಕಂದಾಯ ಇಲಾಖೆಯ ಸಿಬ್ಬಂದಿಗೆ ಸೂಚಿಸಿದರು.
ತಹಸೀಲ್ದಾರ್ ಮಂಜುಳಾ, ಉಪ-ತಹಸೀಲ್ದಾರ್ ಪ್ರಸನ್ನಮೂರ್ತಿ, ಶಿರಸ್ತೇದಾರ್ ಉಲಿವಾಲ ಮೋಹನ್‌ಕುಮಾರ್, ತಾಪಂ ಇಒ ತಮ್ಮಣ್ಣಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

