ಹೇಮಾವತಿಗೆ 4043 ಕ್ಯುಸೆಕ್ ಒಳ ಹರಿವು
ಹಾಸನ: ಹೇಮಾವತಿ ಜಲಾಶಯಕ್ಕೆ ಗುರುವಾರ 4043 ಕ್ಯುಸೆಕ್ ನೀರು ಹರಿದು ಬಂದಿದೆ. ಜಲಾಶಯ ಗರಿಷ್ಠ ಮಟ್ಟ 2922 ಅಡಿ, ಪ್ರಸ್ತುತ 2921.72 ಅಡಿ ಇದೆ. ಜಲಾಶಯದಿಂದ ನದಿಗೆ 125 ಕ್ಯುಸೆಕ್ ಹಾಗೂ ನಾಲೆಗೆ 4250 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 36.832 ಟಿಎಂಸಿನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.562 ಅಡಿ, ಒಳ ಹರಿವು 100 ಕ್ಯುಸೆಕ್, ಹೊರ ಹರಿವು ನದಿಗೆ ಕ್ಯುಸೆಕ್, ನಾಲೆಗೆ175 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3165.48 ಅಡಿ, ಒಳ ಹರಿವು 20 ಕ್ಯುಸೆಕ್, ಹೊರ ಹರಿವು 105 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಟಿಎಂ.ಸಿಯಲ್ಲಿ 1.292 ಟಿ ಎಂಸಿ ನೀರು ಸಂಗ್ರಹವಾಗಿದೆ.
ಹೋಬಳಿವಾರು ಮಳೆ ವಿವರ: ಅರಸೀಕೆರೆ ತಾಲೂಕಿನ ಯಳವಾರೆ 14.8 ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ 10.8, ಶ್ರವಣಬೆಳಗೊಳ 0.8, ಹಾಸನ ತಾಲೂಕಿನ ದುದ್ದ 2, ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ 3, ಹೊಸುರು 2.4, ಹಾನುಬಾಳು 32, ಹೆತ್ತೂರಿನಲ್ಲಿ 5.2 ಮಿ.ಮೀ. ಮಳೆಯಾಗಿದೆ.
ಪ್ರತಿಭೆ ಅನಾವರಣಕ್ಕೆವೇದಿಕೆ ಉತ್ತಮ ಭೂಮಿಕೆ: ಗೊರೂರು
ಹಾಸನ: ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಜೂನಿಯರ್ ಕಾಲೇಜು ವತಿಯಿಂದ ಕಾಲೇಜಿನ ಪ್ರಸಕ್ತ ಸಾಲಿನ ಸಾಂಸ್ಕತಿಕ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಪುರಸ್ಕಾರ ಸಮಾರಂಭ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಕವಾಗಿರುವ ಪ್ರತಿಭೆ ಗುರುತಿಸುವಲ್ಲಿ ಸಾಂಸ್ಕೃತಿಕ ವೇದಿಕೆ ಉತ್ತಮ ಭೂಮಿಕೆಯಾಗುತ್ತದೆ. ವಿದ್ಯೆ ಯಾರೂ ಕದಿಯಲಾಗದ, ಕಿತ್ತುಕೊಳ್ಳಲಾಗದ ಆಸ್ತಿ, ಓದಿನಲ್ಲಿ ಹಿಂದೆ ಇರುವ ವಿದ್ಯಾರ್ಥಿಯಲ್ಲಿಯೂ ಮತ್ತೊಂದು ಬಗೆಯ ಪ್ರತಿಭೆ ಇದ್ದೇ ಇರುತ್ತದೆ ಎಂದು ಕಿವಿಮಾತು ಹೇಳಿದರು. ಕನ್ನಡ ಉಪನ್ಯಾಸಕ ಎಂ.ಕೃಷ್ಣ ಮಾತನಾಡಿ, ಹಸಿವು ಎಂಬುದು ಸಂಸ್ಕೃತಿ, ಈ ಸಂಸ್ಕೃತಿಯನ್ನು ಕಿತ್ತು ತಿನ್ನುವುದು ವಿಕೃತಿ, ನಾವು ನಮ್ಮ ಸಂಸ್ಕೃತಿ ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ನಮ್ಮ ಸಂಸ್ಕೃತಿ, ಜನಪದ ಕಲೆಗಾರಿಕೆ ವಿದೇಶಿ ಸಂಸ್ಕೃತಿಗೆ ಮಾರಾಟ ವಾಗುತ್ತಿದ್ದು, ಅವರಿಂದ ವಿಕೃತಗೊಂಡು ಮತ್ತೆ ನಮ್ಮ ದೇಶಕ್ಕೆ ಸರಕಾಗಿ ಬರುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಶ್ರೇಷ್ಠ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಉಳಿಸಿ, ಬೆಳೆಸಬೇಕಿದೆ ಎಂದು ಕಿವಿಮಾತು ಹೇಳಿದರು.ಪ್ರಾಂಶುಪಾಲ ವೀರಭದ್ರಯ್ಯ ಮಾತನಾಡಿದರು.
ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಹೊಳೆನರಸೀಪುರ: ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಸಾಂಸ್ಕತಿಕ ಸ್ಪರ್ಧೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಪದ ಗೀತೆ, ಭಾವಗೀತೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಭವಾನಿ ರೇವಣ್ಣ ಬಹುಮಾನ ನೀಡಿ ಗೌರವಿಸಿದರು. ಅಂತರ ಕಾಲೇಜುಗಳ ಈ ಸ್ಪರ್ಧೆಯಲ್ಲಿ ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸುವ ಸಂದರ್ಭದಲ್ಲಿ ಭವಾನಿರೇವಣ್ಣ ಅವರ ಕೋರಿಕೆ ಮೇರೆಗೆ ಬಹುಮಾನ ವಿಜೇತ ವಿದ್ಯಾರ್ಥಿಗಳು ಮತ್ತೊಮ್ಮೆ ತಮ್ಮ ಗಾಯನಸುಧೆ ಉಣಬಡಿಸಿದ ನಂತರ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಕಂಡ ಭವಾನಿ ಅವರು, ಮುಂದಿನ ವರ್ಷಕ್ಕೂ ಇದೇ ಸ್ಪರ್ಧೆಗಳನ್ನು ಇದೇ ಕಾಲೇಜಿನಲ್ಲಿಯೇ ನಡೆಸುವಂತೆ ಕೋರಿದರು.ಈ ಸ್ಪರ್ಧೆಯನ್ನು ಇನ್ನಷ್ಟು ಹೆಚ್ಚಿನ ರೀತಿಯ ಸಿದ್ದತೆಗಳೊಂದಿಗೆ ನಡೆಸುವುದಲ್ಲದೇ, ಇದಕ್ಕೆ ಹಾಗೂ ಬಹುಮಾನಗಳಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾಮಂಜುನಾಥ್, ಬಾ.ರಾ.ಸುಬ್ಬರಾಯ, ಎಂ.ಎನ್.ಜೈಪ್ರಕಾಶ್, ಶ್ರೀನಿವಾಸ್,ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.
'ರಾಜ್ಯಕ್ಕೆ ದೇವರಾಜ ಕೊಡುಗೆ ಅಪಾರ'
ಆಲೂರು: ಅಭಿವೃದ್ಧಿಯ ಹರಿಕಾರ ದೇವರಾಜ್ ಅರಸ್ ಅವರು ರಾಜ್ಯ ಕಂಡ ಮಹಾನ್ ವ್ಯಕ್ತಿಯೆಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಡಿ.ದೇವರಾಜ್ ಅರಸ್ 98 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ ಹಿಂದುಳಿದ ವರ್ಗಗಳಿಗೆ ಈಗಲೂ ಅನ್ಯಾಯವಾಗುತ್ತಿದೆ ಎಂದರು. ಸರ್ಕಾರಿ ಸೌಲತ್ತುಗಳಲ್ಲಿ ತಾರತಮ್ಯ ನೀತಿ ಮಾಡಲಾಗುತ್ತಿದ್ದು, ಇದರಿಂದ ಹಿಂದುಳಿದ ವರ್ಗದವರು ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿರುವುದು ದುರಂತವೇ ಸರಿ. ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಬೇಕಾಗಿದೆ ಎಂದು ಹೇಳಿದರು. ತಾಲೂಕು ಘಟಕ ಅಧ್ಯಕ್ಷ ಗೋಪಿಕೃಷ್ಣ ಮಾತನಾಡಿ, 107 ಹಿಂದುಳಿದ ಪಂಗಡಗಳಿದ್ದು ಎಲ್ಲಾ ಪಂಗಡಗಳು ಒಗ್ಗೂಡಬೇಕು. ಹಿಂದುಳಿದ ವರ್ಗಗಳ ಸಮಾನತೆಗಾಗಿ ಹೋರಾಡಿದ ದೇವರಾಜ್ ಅರಸ್ ಜನ್ಮದಿನಾಚರಣೆಯನ್ನು ಸರ್ಕಾರದ ಮಟ್ಟದಲ್ಲಿ ಅದ್ದೂರಿಯಾಗಿ ಆಚರಣೆ ಮಾಡದಿರುವುದು ಖಂಡನೀಯ ಎಂದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

