ಹಾಸನಾಂಬೆ ದರ್ಶನಕ್ಕೆ ಗಣ್ಯರ ದಂಡು
ಕ.ಪ್ರ.ವಾರ್ತೆ ಹಾಸನ ನ.1
ಹಾಸನದ ಅದಿ ದೇವತೆ ಹಾಸನಾಂಬೆಯ ದರ್ಶನ ಪಡೆಯಲು ಶುಕ್ರವಾರ ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜಕಾರಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಹೈಕೋರ್ಟ್ ನ್ಯಾಯಾಧೀಶ ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತ ಆದಿ, ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಬಿ. ಶಿವರಾಂ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಹಾಗೂ ನಾನಾ ಇಲಾಖೆಗಳ ಉನ್ನತಾಧಿಕಾರಿಗಳು ದೇವಿಯ ದರ್ಶನ ಪಡೆದರು. ದೇವಿಯ ದರ್ಶನಕ್ಕೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ತೆರಳಿದ್ದರು. ತುಮಕೂರಿನ ಸಿದ್ದಗಂಗಾ ಮಠದ ಸ್ವಾಮೀಜಿ ಕೂಡಾ ಆಗಮಿಸಿದ್ದರು.
ಭಕ್ತರಿಗೆ ಕಿರಿಕಿರಿ: ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕವಾಗಿ ದೇವಿ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದರಿಂದ ಮೈಲಿಗಟ್ಟಲೆ ಕ್ಯೂನಲ್ಲಿ ನಿಂತಿದ್ದ ಭಕ್ತರು ಕಿರಿಕಿರಿ ಅನುಭವಿಸಬೇಕಾಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಗಣ್ಯರ ಭೇಟಿಯಿಂದ ಕ್ಯೂನಲ್ಲಿ ನಿಂತಿರುವ ಭಕ್ತರಿಗೆ ತೊಂದರೆಯಾಗುತ್ತಿದೆ. ಇದರಿಂದ ಸಹಜವಾಗಿ ಬೇಸತ್ತು ಗಣ್ಯ ವ್ಯಕ್ತಿಗಳೆನಿಸಿಕೊಂಡವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಎಚ್.ಎಸ್. ಪ್ರಕಾಶ್ ಅವರಿಗೆ ಸಲಹೆ ನೀಡಿದರು.
ಶಾಸಕ ಪ್ರಕಾಶ್ ಮಾತನಾಡಿ, ದೇವಾಲಯ ವಸತಿದಟ್ಟಣೆ ಪ್ರದೇಶದಲ್ಲಿ ಇದೆ. ಇದರಿಂದ ಪ್ರತಿದಿನ ಆಗಮಿಸುವ ಸಾವಿರಾರು ಭಕ್ತರು ಯಾವುದೇ ತೊಂದರೆಯಿಲ್ಲದಂತೆ ದೇವಿ ದರ್ಶನ ಮಾಡಲು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವೇಳೆ ನಿಗದಿ ಮಾಡಲಾಗುವುದು ಎಂದರು.
ನೂಕು ನುಗ್ಗಲಿನಲ್ಲಿ ದೇವಿಯ ದರ್ಶನ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿ ದರ್ಶನ ಭಾಗ್ಯ ಈ ಬಾರಿ 13 ದಿನಗಳ ಕಾಲ ಲಭ್ಯ ವಾಗಿರುವುದರಿಂದ ದರ್ಶನಕ್ಕೆ ಜನರು ಮುಗಿ ಬಿದ್ದಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಆಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ನೂಕು ನುಗ್ಗಲು ಹೆಚ್ಚಾಗಿದೆ.
ಹಾಸನಾಂಬ ದೇವಿ ದರ್ಶನ ಆಶ್ವಿಜ ಮಾಸದ ಮೊದಲ ಗುರುವಾರ 12.30ರಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರತಿವರ್ಷದಂತೆ ಅರಸು ವಂಶಸ್ಥ ನರಸಿಂಹರಾಜ ಅರಸ್ ಅವರು ಹಾಸನಾಂಬ ದೇವರ ಗರ್ಭಗುಡಿಯ ಮುಂಭಾಗದಲ್ಲಿ ಬನ್ನಿ ಮರಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಹಾಸನಾಂಬೆಯ ದೇವಾಲಯದ ಬಾಗಿಲು ತೆರೆಯಲಾಯಿತು. ದೇವಾಲಯ ಬಾಗಿಲು ತೆರೆದ ಮೊದಲ ದಿನ ಭಕ್ತರು ದೇವಿಯ ದರ್ಶನ ಮಾಡಲು ಜಮಾಯಿಸಿದ್ದರು.
9ನೇ ದಿನವಾದ ಶುಕ್ರವಾರ ದೇವಿ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ನೂಕು ನುಗ್ಗಲಿನಲ್ಲಿ ದೇವಿಯ ದರ್ಶನ ಪಡೆದರು. ಸಮಯ ಕಳೆಯುತ್ತಿದ್ದಂತೆ ದೇವಾಲಯ ಆವರಣಕ್ಕೆ ಭಕ್ತರು ಜಮಾಯಿಸಿ ದೇವಿಯ ದರ್ಶನ ಪಡೆದರು.
ದೇವರಿಗೆ ಅಲಂಕಾರ ಮತ್ತು ಜಿಲ್ಲಾ ಖಜಾನೆಯಿಂದ ತಂದಿದ್ದ ಆಭರಣಗಳಿಂದ ದೇವಿಗೆ ಅಲಂಕಾರ ಮಾಡಲಾಯಿತು. ಗುರುವಾರದಿಂದಲೇ ಭಕ್ತರು ದೇವಿಯ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಆದರೆ ಎರಡನೇ ದಿನ ಸರದಿ ಸಾಲಿನಲ್ಲಿ ದೇವರ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ದೇವಾಲಯದಲ್ಲಿ ಸೂಕ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

