ಕಾಮಗಾರಿ ಮಾಡದೇ ಹಣ ಗುಳುಂ
ಹೊಳೆನರಸೀಪುರ: ಕಾಮಗಾರಿಯನ್ನೇ ಮಾಡದೇ, ಬೇರೆ ಸರ್ವೇ ಸಂಖ್ಯೆಯಲ್ಲಿನ ಫಲಾನುಭವಿಗಳ ಕೃಷಿ ಹೊಂಡವನ್ನು ತೋರಿಸಿ, ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ, ಗ್ರಾ.ಪಂ ಕಾರ್ಯದರ್ಶಿ ಹಾಗೂ ಜಲಾನಯನ ಇಲಾಖೆಯ ಅಧಿಕಾರಿಯು ಶಾಮೀಲಾಗಿ ಕಾಮಗಾರಿಯ ಸಂಪೂರ್ಣ ಬಿಲ್ಲನ್ನು ಗುಳುಂ ಮಾಡಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಇಲ್ಲಿನ ಗ್ರಾಮಸ್ಥರು ದೂರಿದ್ದಾರೆ.
ಆರೋಪ: ಜಲಾನಯನ ಇಲಾಖೆಯ ವತಿಯಿಂದ ಕೃಷಿ ಹೊಂಡಗಳನ್ನು ತೆಗೆಯುವ ಕಾಮಗಾರಿಯನ್ನು ರೂಪಿಸಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಜಮೀನಿನಲ್ಲಿ ನಿರ್ವಹಿಸಬೇಕಿದ್ದ ಕಾಮಗಾರಿಯನ್ನೇ ಮಾಡದೇ, ಈ ಹಿಂದೆ ನಿರ್ಮಾಣ ಮಾಡಲಾಗಿದ್ದ ಬೇರೆ ಸರ್ವೇ ನಂಬರಿನ ಕೃಷಿ ಹೊಂಡಗಳ ಫೋಟೊ ದಾಖಲಾತಿಯನ್ನು ತಯಾರಿಸಿ ಇಡೀ ಕಾಮಗಾರಿಯ ಹಣವನ್ನು ಕೋಡಿಹಳ್ಳಿ ಗ್ರಾಪಂ ಸದಸ್ಯ ಅನಂತನಾಗ್, ಮಾಜಿ ಅಧ್ಯಕ್ಷ ರಾಘವೇಂದ್ರ, ಪ್ರಭಾರಿ ಕಾರ್ಯದರ್ಶಿ ಕುಮಾರಸ್ವಾಮಿ ಹಾಗೂ ಜಲಾನಯನ ಇಲಾಖೆಯ ಅಧಿಕಾರಿ ನಂಜೇಗೌಡ ಅವರು ಇಲ್ಲಿನ ಕೋಡಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ವಡ್ಡರಹಳ್ಳಿ ಗ್ರಾಮದಲ್ಲಿನ 5, ಹಡವನಹಳ್ಳಿಯ1 ಹಾಗೂ ಕುರುಬರಹಳ್ಳಿಯಲ್ಲಿನ 8 ಫಲಾನುಭವಿಗಳ ಹೆಸರಿನ ಕೃಷಿ ಹೊಂಡಗಳ ಕಾಮಗಾರಿಯ ಲಕ್ಷಕ್ಕೂ ಅಧಿಕ ಮೌಲ್ಯದ ಅನುದಾನವನ್ನು ನುಂಗಿರುವುದಾಗಿ ಕೋಡಿಹಳ್ಳಿ ಗ್ರಾಮದ ಯುವಕರಾದ ವರೇಷ ಹಾಗೂ ಆನಂದ ಎಂಬುವವರು ಆರೋಪಿಸಿದ್ದಾರೆ.
ಅಧಿಕಾರಿಗಳ ಗಮನಕ್ಕೆ: ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಕಾಮಗಾರಿಯನ್ನೇ ನಿರ್ವಹಿಸದೇ, ಹಲವರುಗಳು ಶಾಮೀಲಾಗಿ ಹಳೆಯ ಕಾಮಗಾರಿಯ ಫೋಟೋ ದಾಖಲೆಗಳನ್ನು ಹೊಸ ಕಾಮಗಾರಿಗಳೆಂದು ದಾಖಲೆ ಸೃಷ್ಟಿಸಿಕೊಂಡು ಲಕ್ಷಕ್ಕೂ ಹೆಚ್ಚಿನ ಹಣವನ್ನು ಗುಳುಂ ಮಾಡಿರುವುದಾಗಿ ಆರೋಪಿಸಿದ್ದಾರೆ. ಈ ಆಕ್ರಮಗಳ ಕುರಿತಂತೆ ಗ್ರಾ.ಪಂ ಅಧ್ಯಕ್ಷೆ ಸುಜಾತ ಅವರಲ್ಲದೇ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅಲ್ಲದೇ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.
ಆದರೆ ಕಾಮಗಾರಿಯನ್ನೇ ನಿರ್ವಹಿಸದೇ, 8 ಕೃಷಿ ಹೊಂಡಗಳ ಅನುದಾನವನ್ನು ಆಕ್ರಮವಾಗಿ ಡ್ರಾ ಮಾಡಿಕೊಳ್ಳಲಾಗಿದ್ದು, ಇದೇ ರೀತಿ ಇನ್ನೆರಡು ಕೃಷಿ ಹೊಂಡಗಳ ಹಣವನ್ನೂ ಗುಳುಂ ಮಾಡುವುದರಲ್ಲಿದ್ದದ್ದನ್ನು ಪತ್ತೆ ಹಚ್ಚಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಸದರಿ ಎರಡು ಕೃಷಿ ಹೊಂಡದ ಮೊತ್ತವನ್ನು ತಡೆಹಿಡಿಯಲಾಗಿದೆ ಎಂದು ವರೇಷ ಹಾಗೂ ಆನಂದ ತಿಳಿಸಿದ್ದಾರೆ.
ಭರವಸೆ: ಈ ಅಕ್ರಮಗಳ ಕುರಿತಂತೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯ್ತಿ ಸಿಇಓ ಅವರು ಇಲ್ಲಿನ ತಾಪಂ ಇಓ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿರುವ ಗ್ರಾಮದ ಯುವಕರುಗಳು, ಗ್ರಾಮ ಪಂಚಾಯ್ತಿಯಲ್ಲಿ ಈ ಎಲ್ಲಾ ಆಕ್ರಮಗಳನ್ನು ಶಾಸಕ ಎಚ್.ಡಿ. ರೇವಣ್ಣ ಅವರ ಗಮನಕ್ಕೂ ತಂದಿದ್ದೂ ಅವರು ದೂರು ನೀಡುವಂತೆ ಸೂಚಿಸಿದ್ದು, ಆಕ್ರಮಗಳು ಸಾಬೀತಾದಲ್ಲಿ ತಪ್ಪಿತಸ್ಥರು ಶಿಕ್ಷೆ ಅನುಭವಿಸಲಿ ಎಂದು ಭರವಸೆ ನೀಡಿರುವುದಾಗಿ ಯುವಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

