'ಆಶ್ರಯ'ದಲ್ಲೇ ಅಂಗನವಾಡಿ
-ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ, ಡಿ.15
ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿಯೇ ಇರುವ ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ಇಲ್ಲಿನ ಅಂಗನವಾಡಿ ಕೇಂದ್ರವೊಂದಕ್ಕೆ ಕಳೆದ ಏಳು ವರ್ಷಗಳಿಂದಲೂ ಸ್ವಂತ ಕಟ್ಟಡವಿಲ್ಲ. ಹಾಗಾಗಿ ಆಶ್ರಯ ಮನೆಯೊಂದರಲ್ಲಿ ಆಶ್ರಯ ಪಡೆದು ಬಾಡಿಗೆ ನೀಡಿ ಅಂಗನವಾಡಿ ಕೇಂದ್ರ ನಡೆಸುವ ದುಸ್ಥಿತಿ ಇದೆ.
ಉತ್ತರವಿಲ್ಲ: ಕಳೆದ ಏಳು ವರ್ಷಗಳ ಹಿಂದೆ ಆಶ್ರಯ ಬಡಾವಣೆಯಲ್ಲಿ ಆರಂಭಗೊಂಡ ಅಂಗನವಾಡಿ ಕೇಂದ್ರಕ್ಕಾಗಿ ನಿವೇಶನ ನೀಡುವಂತೆ ಇಲ್ಲಿನ ಅಂಗನವಾಡಿ ಕೇಂದ್ರದ ಶಿಕ್ಷಕಿ ಸರ್ವಮಂಗಳ ಅವರು ಇಲಾಖೆಯ ಅಧಿಕಾರಿಗಳ ಮೂಲಕ ಇಲ್ಲಿನ ಪುರಸಭೆಗೆ ಹಲವಾರು ಬಾರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪುರಸಭೆ ಮಾತ್ರ ಈ ಕುರಿತಂತೆ ನಿವೇಶನ ನೀಡುವ ಮಾತು ಒತ್ತಟ್ಟಿಗಿರಲಿ, ಈ ಮನವಿ ಪತ್ರಕ್ಕೆ ಯಾವುದೇ ಪ್ರತ್ಯುತ್ತರವನ್ನು ನೀಡುವ ಗೋಜಿಗೆ ಹೋಗಿಲ್ಲ.
ನಿರ್ಲಕ್ಷ್ಯ: ಪುರಸಭೆ ಮಟ್ಟಿಗೆ, ಬರಿ ಆದಾಯವಷ್ಟೇ ಮುಖ್ಯವೆನಿಸಿದೆ. ಇದು ಬಿಟ್ಟರೆ, ಊರ ತುಂಬ ಸಿಕ್ಕ ಸಿಕ್ಕಲ್ಲೆಲ್ಲಾ, ಖಾಲಿ ಜಾಗ ಕಂಡಲ್ಲೆಲ್ಲಾ ಮಳಿಗೆಗಳನ್ನು ನಿರ್ಮಿಸಿ ಅನುದಾನ ಖರ್ಚು ಮಾಡುವುದು, ಬೇಕಿಲ್ಲದ ಜಾಗಕ್ಕೆ ಬೇಡದ ಕಾಮಗಾರಿಯನ್ನು ಸೃಷ್ಟಿಸುವುದು, ಪಟ್ಟಣದಲ್ಲಿ ಅವ್ಯವಸ್ಥೆಗಳು ತುಂಬಿದ್ದರೂ ಕಂಡೂ ಕಾಣದಂತೆ ಇರುವುದೇ ಅದರ ನಿತ್ಯ ಕಾಯಕ.
ಇಂಥ ಪುರಸಭೆಗೆ ಅಂಗನವಾಡಿಗೆ ನಿವೇಶನ ನೀಡುವಂಥ ಸಾಮಾಜಿಕ ಕಾರ್ಯ ಹಾಗೂ ಸರ್ಕಾರದ ಮತ್ತೊಂದು ಇಲಾಖೆಯಾದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತನ್ನದೇ ಆದ ಕೊಡುಗೆ ನೀಡುವ ದೂರದೃಷ್ಟಿತ್ವ ದೂರದ ಮಾತು.
ಶಿಕ್ಷಕರ ಮೇಲೆ ಹೊರೆ: ಪಟ್ಟಣದಲ್ಲಿನ ಆಶ್ರಯ ಬಡಾವಣೆಯಲ್ಲಿರುವ ಆಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದಿರುವ ಕಾರಣದಿಂದಾಗಿ, ಕಳೆದ ಏಳು ವರ್ಷದಿಂದಲೂ ಬಾಡಿಗೆ ಮನೆಗಳಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸಬೇಕಾದ ಅನಿವಾರ್ಯತೆ ಇದೆ. ಇನ್ನೂ ದುರಾದೃಷ್ಟವೆಂದರೆ ಈ ರೀತಿ ಆಶ್ರಯ ಮನೆಯೊಂದಕ್ಕೆ ಬಾಡಿಗೆ ನೀಡಿ ನಡೆಸಲಾಗುತ್ತಿರುವ ಕೇಂದ್ರಕ್ಕಾಗಿ ಇಲಾಖೆಯು ಕೇವಲ ರು. 200ಗಳನ್ನು ಬಾಡಿಗೆ ರೂಪದಲ್ಲಿ ನೀಡುತ್ತಿದೆ. ಆದರೆ ಕೇಂದ್ರ ನಡೆಯುತ್ತಿರುವ ಆಶ್ರಯ ಮನೆಗೆ ಪ್ರತಿ ತಿಂಗಳು ರು. 500 ಬಾಡಿಗೆ ನೀಡಬೇಕಿದೆ. ಇಲಾಖೆ ನೀಡುವ ರು. 200ಗಳ ಜೊತೆಗೆ, ಇನ್ನುಳಿದ ರು. 300ಗಳನ್ನು ಅಂಗನವಾಡಿ ಶಿಕ್ಷಕಿಯೇ ಭರಿಸಬೇಕಾಗಿದೆ.
ಮೂಲಭೂತ ಸೌಕರ್ಯಗಳಿಲ್ಲ: ಅಷ್ಟೇ ಅಲ್ಲದೇ ಈ ಬಾಡಿಗೆ ಮನೆಯಲ್ಲಿ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ, ಇಲ್ಲಿ ನಡೆಯುವ ಕೇಂದ್ರದ ವಿದ್ಯುತ್ ಬಿಲ್ ಹಾಗೂ ನೀರಿನ ಬಾಡಿಗೆಯನ್ನೂ ಕೂಡ ಅಂಗನವಾಡಿ ಶಿಕ್ಷಕಿಯೇ ಭರಿಸಬೇಕಾದ ಅನಿವಾರ್ಯತೆಯನ್ನು ಇಲಾಖೆ ನೀಡಿ ಕೈತೊಳೆದುಕೊಂಡಿದೆ. ಬರುವ ಅಲ್ಪ ವೇತನದಲ್ಲೇ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರಿಗೆ ಇಲಾಖೆಯು ತನ್ನ ಪಾಲಿನ ಕರ್ತವ್ಯವನ್ನು ಪಾಲಿಸುವ ಜವಾಬ್ದಾರಿಯನ್ನು ನಿರ್ಲಕ್ಷಿಸಿರುವ ಪರಿಣಾಮವಾಗಿ ಪ್ರತಿ ತಿಂಗಳು ಅಂಗನವಾಡಿ ಶಿಕ್ಷಕಿಯರೇ ಅನಿವಾರ್ಯ ಹೊರೆಗಳನ್ನು ಭರಿಸಬೇಕಾದ ದುಸ್ಥಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಡುತ್ತಿದೆ.
ಎಲ್ಲೆಡೆಯೂ ಇದೇ ಸಮಸ್ಯೆ
ಪುರಸಭೆಯ ನಿರ್ಲಕ್ಷ್ಯ ಈ ರೀತಿಯದ್ದಾದರೆ, ಅವಶ್ಯಕವಿರಲಿ ಬಿಡಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಕೂಡ, ತಾನೇ ಆರಂಭಿಸಿದ ಅಂಗನವಾಡಿ ಕೇಂದ್ರಗಳಿಗೆ ಸೂಕ್ತವಾದ ಸೌಲಭ್ಯಗಳುಳ್ಳ ಕಟ್ಟಡವನ್ನು ನಿರ್ಮಿಸಿಕೊಡುವ ಜವಾಬ್ದಾರಿಯನ್ನು ಕಡೆಗಣಿಸಿದೆ. ಇದರಿಂದಾಗಿ ತಾಲೂಕಿನಲ್ಲಿರುವ ಎಷ್ಟೋ ಅಂಗನವಾಡಿ ಕೇಂದ್ರಗಳಿಗೆ ಇಂದಿಗೂ ಸ್ವಂತ ಕಟ್ಟಡಗಳೇ ಇಲ್ಲದಿರುವ ಸ್ಥಿತಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

