ಶಿಕ್ಷಣದ ಮೂಲಕ ಬಾಲಾಪರಾಧ ತಡೆಗಟ್ಟಬೇಕು
ಹಾಸನ: ಶಿಕ್ಷಣದಿಂದ ವಂಚಿತರಾಗಿರುವ ಶೇ. 30ರಷ್ಟು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಬಾಲಪರಾಧವನ್ನು ತಡೆಗಟ್ಟಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಹಾಗೂ ಬಾಲನ್ಯಾಯ ಮಡಳಿ ಸಮಿತಿ ಅಧ್ಯಕ್ಷ ಹುಲುವಾಡಿ ಜಿ. ರಮೇಶ್ ಹೇಳಿದರು.
ಶಿಕ್ಷಿತರನ್ನಾಗಿ ಮಾಡಬೇಕು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಮಗ್ರ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಜಿಲ್ಲಾ ಪತ್ರಕರ್ತರ ಸಂಘಗಳ ಆಶ್ರಯದಲ್ಲಿ ಎಚ್ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಮಕ್ಕಳ ರಕ್ಷಣೆ - ನಮ್ಮ ಹೊಳೆ ಬಾಲ ನ್ಯಾಯ ಕಾಯ್ದೆ ಬಗ್ಗೆ ಏರ್ಪಡಿಸಿದ್ದ ಒಂದು ದಿನದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಶೇ.70ರಷ್ಟು ಮಕ್ಕಳು ವಿದ್ಯಾವಂತರನ್ನಾಗಿ ಮಾಡುವುದರ ಜತೆಗೆ ಶಿಕ್ಷಣ ವಂಚಿತ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಮೂಲಕ ಅವರನ್ನು ಶಿಕ್ಷಿತರನ್ನಾಗಿ ಮಾಡಬೇಕು ಎಂದರು.
ಪರಿವರ್ತಿಸಬೇಕು: ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯ ಚಟುವಟಿಕೆಗಳ ಜತೆಗೆ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ, ನೈತಿಕತೆಯನ್ನು ಬಿತ್ತುವ, ತಪ್ಪು ಒಪ್ಪುಗಳ ಬಗ್ಗೆ ಮನವರಿಕೆ ಮಾಡಿ ಆ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಬಾರದು, ಬಾಲ್ಯದಲ್ಲೇ ಅವರ ಅವಕಾಶಗಳನ್ನು ಕಿತ್ತುಕೊಳ್ಳಬಾರದು. ಅವರಿಗೆ ಸಿಗಬೇಕಾದ ರಕ್ಷಣೆ, ಪಾಲನೆ ,ಪೂಷಣೆ ,ಶೈಕ್ಷಣಿಕ, ಮಾನಸಿಕ ಪ್ರಗತಿಗೆ ಪೂರಕ ವಾತಾವರಣವನ್ನು ಸೃಷ್ಟಿಮಾಡಿ ಸಮಾಜದ ಸಂಪನ್ಮೂಲಗಳನ್ನಾಗಿ ಪರಿವರ್ತಿಸಬೇಕು ಎಂದು ಹೇಳಿದರು.
ಎಲ್ಲರೂ ಪ್ರಯತ್ನಿಸಬೇಕು: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಒದಗಿಸುವ ಹಣದಲ್ಲಿ ದುರುಪಯೋಗ ಆಗದಂತೆ ಸದ್ಬಳಕೆಯಾಗಬೇಕು. ಅದನ್ನು ಮುಲಭೂತ ನಿರ್ದೇಶನಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಅಪರಾಧ ಮಾಡುವ ಮನೋಭಾವನೆಯನ್ನು ಆರಂಭದಲ್ಲೇ ಹತ್ತಿಕ್ಕಬೇಕು. ಅತಂಹ ಪ್ರಕರಣಗಳಲ್ಲಿ ತೊಡಗಿದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನದ ಮೂಲಕ ಮನ ಪರಿವರ್ತನೆಗೆ ಎಲ್ಲರೂ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಎಲ್ಲರ ಶ್ರಮ ಅಗತ್ಯ: ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣನವರ್ ಮಾತನಾಡಿ, ಎಲ್ಲರೂ ಸಮಾನ ಅವಕಾಶಗಳನ್ನು ಪಡೆದು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಬೇಕು ಎಂಬುದು ಸಂವಿಧಾನದ ಆಶಯ.
ಬಾಲನ್ಯಾಯ ಕಾನೂನು ಮಕ್ಕಳ ಸಮಗ್ರ ಹಕ್ಕುಗಳ ರಕ್ಷಣೆಗಾಗಿ ರೂಪುಗೊಂಡಿದೆ. ಅದರ ಉದ್ದೇಶ ಸಾಧನೆಗೆ ಎಲ್ಲರ ಶ್ರಮ ಅಗತ್ಯ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಜಿ.ಎಸ್. ಸೋಮಶೇಖರ್ ಮಾತನಾಡಿ, ಶಿಕ್ಷಕರ ಸಾಮಾಜಿಕ ಹೊಣೆಗಾರಿಕೆ, ಬಾಲಪರಾಧಗಳ ತಡೆಗೆ ಮಾಡ ಬಹುದಾದ ಕರ್ತವ್ಯಗಳನ್ನು ಮನವರಿಕೆ ಮಾಡಿಕೊಟ್ಟರು. ವಿಶ್ವ ಸಂಸ್ಥೆಯ ಕಾನೂನುಗಳು, ದೇಶದಲ್ಲಿ ಮಕ್ಕಳ ರಕ್ಷಣೆಗೆ ಇರುವ ವ್ಯವಸ್ಥೆಗಳ ಬಗ್ಗೆ ಅವರು ಸ್ವವಿವರವಾಗಿ ಮಾಹಿತಿ ಎಂದು ನೀಡಿದರು.
ಹೊಣೆಗಾರಿಕೆಯಿದೆ: ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, ಜಿಲ್ಲಾ ಬಂಧಿಖಾನೆಗೆ ತಾವು ಬೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿ ಇದ್ದವರಲ್ಲಿ ಪೈಕಿ ಶೇ. 60ರಷ್ಟು ಮಂದಿ 18ರಿಂದ 25ರ ವಯೋ ಮಿತಿಯೂಳಗಿನವರಾಗಿದ್ದಾರೆ. ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವ ಹೊಣೆಗಾರಿಕೆ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದರು.
ಪ್ರಯತ್ನಗಳು ಶ್ಲಾಘನೀಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮಾತನಾಡಿ, ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ನಾನಾ ರೀತಿಯ ಶೋಷಣೆಗಳು ನಿಲ್ಲಬೇಕಾದರೆ ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳು ಅರಿಯುವಂತಾಗಬೇಕು. ಜತೆಗೆ ಎಲ್ಲರಲ್ಲೂ ಅರಿವು ಅಂತಕರಣ ಇರಬೇಕು.
ಜಿಲ್ಲಾ ಕಾನೂನು ಸೇವಾಪ್ರಾಧಿಕಾರ ನಿರಂತರವಾಗಿ ಜಾಗೃತಿ ಮೂಡಿಸಲು ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದರು.
ಸಕ್ರಿಯ ಪಾಲ್ಗೊಳ್ಳುವಿಕೆ ಬೇಕು: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಸಮಾಜದ ಏಳಿಗೆಗೆ, ತಪ್ಪುಗಳ ನಿಯಂತ್ರಣಕ್ಕೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯೂ ಮುಖ್ಯ ಎಂದರು.
ಗೊಂದಲ ಪರಿಹಾರವಾಗಬೇಕು: ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಗೆ ಮಾಧ್ಯಮಗಳು ಸಹ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಇದು ಇನ್ನಷ್ಟು ಚುರುಕಾಗಬೇಕು. ನಿಯಮಗಳಲ್ಲಿ ಇರುವ ಗೊಂದಲಗಳು ಪರಿಹಾರವಾಗಬೇಕು ಎಂದರು.
ಸಹಕರಿಸಬೇಕು: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಸುಶಿಕ್ಷತರು ಮ್ಕಕ್ಕಳ ಮೇಲಿನ ದೌರ್ಜನ್ಯದಲ್ಲಿ ತೊಡಕಾಗುತ್ತಿರುವುದು ವಿಷಾದನೀಯ. ಅನಾಗರಿಕ ಬದುಕು ನಮ್ಮದಾಗಬಾರದು ವಿದ್ಯಾವಂತರು ಸಮಾಜದ ಏಳಿಗೆಗೆ, ಅಪರಾಧಗಳ ಕಡಿವಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಎ. ಮುಸ್ತಫ ಹುಸೇನ್, ಮಹಿಳಾ ಮಕ್ಕು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಸಿ. ಚಿದಾನಂದ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

