ಹಾಸನ

ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ವಿರುದ್ಧ ಅಶೋಕ, ರೇವಣ್ಣ ಟೀಕಾ ಪ್ರಹಾರ

Published On :

ಹಾಸನ: ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹಾಗೂ ಎಚ್.ಡಿ.ರೇವಣ್ಣ ಟೀಕಾ ಪ್ರಹಾರ ನಡೆಸಿದ ಘಟನೆ ನಡೆಯಿತು.
ಹಾಸನ ತಾಲೂಕು ದುದ್ದ ಗ್ರಾಮದಲ್ಲಿ ಶುಕ್ರವಾರ ನಡೆದ 1 ಕೋಟಿ ರು. ವೆಚ್ಚದಲ್ಲಿ ರಸ್ತೆ ಸಾರಿಗೆ ಬಸ್ ನಿಲ್ದಾಣವನ್ನು ಆಧುನೀಕರಣಗೊಳಿಸುವ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈ ಇಬ್ಬರೂ ನಾಯಕರು ಮಾತನಾಡಿದರು.
ಡಿಸಿಎಂ ಅಶೋಕ್ ಮಾತನಾಡಿದ್ದು ಹೀಗೆ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಅಧಿಸೂಚನೆ ಹೊರಡಿಸಿದರೆ ಕರ್ನಾಟಕ ರೈತರ ಪಾಲಿಗೆ ಮರಣ ಶಾಸನ ಬರೆದಂತೆ. ಈ ಅಪಾಯ ಅರಿಯದೆ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ. ಅದೇ ತಮಿಳುನಾಡಿನ ಲೋಕಸಭಾ ಸದಸ್ಯರು ಕಾವೇರಿ ವಿಚಾರದಲ್ಲಿ ಪಕ್ಷಬೇಧ ಮರೆತು ಲಾಬಿ ಮಾಡುತ್ತಾರೆ. ಆದರೆ ಕೇಂದ್ರ ಸರ್ಕಾರದಲ್ಲಿ ನಮ್ಮ ರಾಜ್ಯದವರೇ ಆದ 6 ಮಂದಿ ಸಚಿವರಿದ್ದಾರೆ. ಕಾವೇರಿ ಬಗ್ಗೆ ತುಟಿಪಿಟಿಕ್ ಎನ್ನುತ್ತಿಲ್ಲ.  ಏಕೆ  ಎಂದು ಪ್ರಶ್ನಿಸುವ ಮೂಲಕ ತರಾಟೆ ತೆಗೆದುಕೊಂಡರು.
ಕನ್ನಡಿಗರ ಹಣದಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಲಾಗಿದೆ. ದುರದೃಷ್ಟವಶಾತ್ ಕನ್ನಡಿಗರೇ ಕಾವೇರಿ ನೀರು ಕುಡಿಯುವಂತಿಲ್ಲ ಎಂಬ ನಿಯಮ ಜಾರಿ ಮಾಡಿದರೇ ಹೇಗೆ.  ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ ಎಂದು ರಾಜ್ಯ ಕಾಂಗ್ರೆಸ್ಸಿಗರು ಕಾವೇರಿ ವಿಚಾರದಲ್ಲಿ ಜಾಣತನ ಪ್ರದರ್ಶಿಸುತ್ತಿದ್ದಾರೆ. ಜಯಲಲಿತಾ ಅಧಿಕಾರಕ್ಕೆ ಬಂದಾಗಲೆಲ್ಲಾ ಕರ್ನಾಟಕಕ್ಕೆ ತೊಂದರೆ. ಆಕೆ ಹಠಮಾರಿ, ವಿಘ್ನ ಸಂತೋಷಿ ಎಂದು ಅಶೋಕ್ ಟೀಕಿಸಿದರು.
ಕಾವೇರಿ ನದಿ ಪಾತ್ರದ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಮಾಜಿ ಪ್ರಧಾನಿ ದೇವೇಗೌಡರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಬೆಳಗ್ಗೆ ಗೌಡರೇ ಪೋನ್ ಮಾಡಿ, ಹಾಸನ ಕಾರ್ಯಕ್ರಮಕ್ಕೆ ಹೋಗಿ, ಜನರು ಬೇಸರ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ಅದರಿಂದ ಇಲ್ಲಿಗೆ ಬಂದೆ ಎಂದರು.
ರೇವಣ್ಣ ಭಾಷಣ ಮಾಡಿದ್ದು:  ರಾಜ್ಯದ 142 ತಾಲೂಕುಗಳಲ್ಲಿ ಮಳೆಯಿಲ್ಲದೇ ಬರ ಪರಿಸ್ಥಿತಿ ಇದೆ. ಇದಕ್ಕಾಗಿ 800 ಕೋಟಿ ರು. ಅನುದಾನ ನೀಡುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿ ಹಲವು ತಿಂಗಳಾಗಿವೆ. ಅಲ್ಲದೆ ದೇವೇಗೌಡರು ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಕುಡಿಯಲು ನೀರಿಲ್ಲದೆ ಜನ ಮತ್ತು ಜನವಾರುಗಳಿಗೆ ತೀವ್ರ ತೊಂದರೆಯಾಗಿದೆ. ವಿದ್ಯುತ್ ಕ್ಷಾಮ ತಲೆದೋರಿದೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಅಧಿಸೂಚನೆ ಹೊರಡಿಸಿದರೆ ಮರಣ ಶಾಸನ ಬರೆದಂತೆ. ಆಗ ಕುಡಿಯುವ ನೀರು ಮತ್ತು ಕೃಷಿಗೆ ತೊಂದರೆ ಆಗುತ್ತದೆ. ದುರಂತ ಅಂದ್ರೆ. ಕಾಂಗ್ರೆಸ್ ನಾಯಕರಿಗೆ ಇದ್ಯಾವುದು ತಿಳಿಯುತ್ತಿಲ್ಲ. ಬದಲಿಗೆ ಅಧಿಕಾರಕ್ಕಾಗಿ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ. ಇದೇ ವೇಳೆ ಉತ್ತಮ ಆರೋಗ್ಯಕ್ಕಾಗಿಯೂ ನಡಿಗೆ ಮಾಡುತ್ತಿದ್ದಾರೆ. ಇಂತಹ ಕಾಂಗ್ರೆಸ್ಸಿಗರಿಗೆ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.