ಕುಡಿಯುವ ನೀರಿಗೆ ಅಗತ್ಯ ಹಣ: ಭರವಸೆ
ಹೊಳೆನರಸೀಪುರ: ಬಿಜೆಪಿ ಸರ್ಕಾರ ಹಾಸನ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದು, ಬರದಿಂದ ತತ್ತರಿಸುತ್ತಿರುವ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಹಣ ನೀಡುವುದು ಸೇರಿದಂತೆ ಎಲ್ಲಾ ಸೌಲಭ್ಯಕ್ಕಾಗಿ ಕೈಗೊಳ್ಳಬಹುದಾದ ಸಹಕಾರಗಳನ್ನು ನೀಡಲು ಸರ್ಕಾರ ಬದ್ಧ ಎಂದು ಉಪ ಮುಖ್ಯಮಂತ್ರಿ, ಗೃಹ ಸಚಿವ ಆರ್.ಆಶೋಕ ಭರವಸೆ ನೀಡಿದ್ದಾರೆ.
ಅವರು ಶುಕ್ರವಾರ ಪಟ್ಟಣದಲ್ಲಿ 2.50 ಕೋಟಿ ರು. ವೆಚ್ಚದಲ್ಲಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಮತ್ತು ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬರದಿಂದ ತತ್ತರಿಸುತ್ತಿರುವ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬರಪರಿಹಾರ ನಿಧಿಯಾಗಿ ತಲಾ 25ಕೋಟಿ ರೂಗಳ ಅನುದಾನವನ್ನು ಬಿಜೆಪಿ ಸರ್ಕಾರ ನೀಡಿದ್ದು, ಬರದ ಸಂದರ್ಭದಲ್ಲಿ ರಾಜ್ಯದ ಬಡಜನರನ್ನು ಬಿಜೆಪಿ ಸರ್ಕಾರ ಎಂದಿಗೂ ಕೈಬಿಡುವುದಿಲ್ಲ ಎಂದು ನುಡಿದರು.
ಪಟ್ಟಣದ ಬಸ್ ನಿಲ್ದಾಣವನ್ನು 2.50ಕೋಟಿ ರು. ವೆಚ್ಚದಲ್ಲಿ ರಾಜ್ಯದ ಯಾವುದೇ ತಾಲೂಕು ಕೇಂದ್ರದಲ್ಲೂ ಇಲ್ಲದಂತಹ ಹೈಟೆಕ್ ಬಸ್ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಹಾಸನದ ಸಮೀಪ ಸರ್ಕಾರದ ವತಿಯಿಂದಲೇ ವಾಹನ ಚಾಲನಾ ತರಬೇತಿ ಕೇಂದ್ರ ಹಾಗೂ ತಾಂತ್ರಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಒಟ್ಟು 54 ಕೋಟಿ ರು. ವೆಚ್ಚದಲ್ಲಿ ಕೂಡಲೇ ಕಾಮಗಾರಿ ಆರಂಭಿಸಲು ಚಾಲನೆ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಕೆಎಸ್ಆರ್ಪಿ ಬೆಟಾಲಿಯನ್ ಸ್ಥಾಪಿಸುವ ಉದ್ಧೇಶ ಸರ್ಕಾರಕ್ಕಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಸೂಕ್ತ ಸ್ಥಳ ನೀಡಿದಲ್ಲಿ 8ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ಸಿದ್ದ ಎಂದು ಹೇಳಿದ ಆಶೋಕ್ ಈ ಬೆಟಾಲಿಯನ್ ನಿರ್ಮಾಣದಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಚ್.ಡಿ.ರೇವಣ್ಣ ಮಾತನಾಡಿ, ಎಲ್ಲ ಅಭಿವೃದ್ಧಿಗಳಿಗಿಂತಲೂ ಮುಂಚೆ ಬರದಿಂದ ತತ್ತರಿಸುತ್ತಿರುವ ಜನ-ಜಾನುವಾರುಗಳಿಗೆ ಬರಪರಿಹಾರದಡಿಯಲ್ಲಿ ಮೊದಲು ಅಗತ್ಯ ಸಹಕಾರಗಳನ್ನು ನೀಡುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ ಅವರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಕಾಂಗ್ರೆಸ್ನವರು ಕಾಲ್ನಡಿಗೆ ಜಾಥಾದ ನಾಟಕ ಶುರುವಿಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ವಿದಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಬಿ.ವಿ.ಕರಿಗೌಡ, ಪುರಸಭಾಧ್ಯಕ್ಷೆ ವಿನೋದ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲೇಶ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ಸಿಂಗ್,ಸಾರಿಗೆ ನಿಗಮದ ನಿರ್ದೇಶಕ ಪದ್ಮನಾಭನ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಪ್ರಸಾದ್, ಪಿ.ರವಿಕುಮಾರ್, ಜಿಪಂ ಸದಸ್ಯ ಎಚ್.ಎನ್.ದೇವೇಗೌಡ(ಪಾಪಣ್ಣಿ) ಹಾಗೂ ತಾಪಂ ಮತ್ತು ಪುರಸಭೆಯ ಸದಸ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

