ದೈಹಿಕ ಶಿಕ್ಷಕರು ಪ್ರೋತ್ಸಾಹಿಸಿದರೆ ಹೊಸ ಪ್ರತಿಭೆಗಳ ಉದಯ
ಹೊಳೆನರಸೀಪುರ: ದೈಹಿಕ ಶಿಕ್ಷಕರು ತಮ್ಮ ಸೇವೆಯ ಅವಧಿಯಲ್ಲಿ ನಿಜವಾದ ಕ್ರೀಡಾ ಪ್ರತಿಭೆಗಳನ್ನು ಪ್ರಾಮಾಣಿಕವಾಗಿ ಗುರುತಿಸುವ ಜೊತೆಗೆ ಪ್ರತಿಭೆಗಳನ್ನು ಪೋಷಿಸುವ ನಿಟ್ಟಿನಲ್ಲಿ ನಿರಂತರವಾಗಿ ಆಸಕ್ತಿ ತೋರಿದಲ್ಲಿ ಹೊಸ ಪ್ರತಿಭೆಗಳ ಉದಯಕ್ಕೆ ನಾಂದಿಯಾಗುತ್ತದೆ ಎಂದು ಮೈಸೂರು ವಿವಿ ಕ್ರೀಡಾ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಶೇಷಣ್ಣ ದೈಹಿಕ ಶಿಕ್ಷಕರಿಗೆ ಇಲ್ಲಿ ಕಿವಿಮಾತು ಹೇಳಿದರು.
ಅವರು ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಶಿಕ್ಷಕರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಾಸನ ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ನೇತಾಜಿ ಸುಭಾಷ್ ಚಂದ್ರಬೋಸ್ 116ನೇ ಜನ್ಮ ದಿನಾಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೈಹಿಕ ಶಿಕ್ಷಕರಿಗೆ ದಿನೇ ದಿನೇ ಹೊಸ ಹೊಸ ಜವಾಬ್ದಾರಿ, ಹಾಗೂ ಕರ್ತವ್ಯಗಳು ಹೆಚ್ಚುತ್ತಲೇ ಇದ್ದು, ತಮ್ಮ ವೃತ್ತಿ ಜೀವನದ ಜೊತೆಯಲ್ಲಿ ವೈಜ್ಞಾನಿಕ ಚಿಂತನೆಗಳನ್ನೂ ಅಳವಡಿಸಿಕೊಳ್ಳುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ತಮ್ಮನ್ನು ತೆರೆದಿಟ್ಟುಕೊಳ್ಳುವಂತೆ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ-ನಿರ್ದೇಶಕ ಬಸವರಾಜು ಮಾತನಾಡಿ, ಒಂದು ಶಾಲೆಯ ಹಾಗೂ ದೇಶದ ಉತ್ತಮ ಶೈಕ್ಷಣಿಕ ಹಾಗೂ ಭೌಗೋಳಿಕ ಪ್ರಗತಿ ದೈಹಿಕ ಶಿಕ್ಷಣ ವಿಭಾಗದಿಂದ ಸಾಧ್ಯವಾಗಬಲ್ಲದು ಎಂದರು.
ಸಮಯ ಪರಿಪಾಲನೆಯೊಂದಿಗೆ ಮಕ್ಕಳಲ್ಲಿ ಕ್ರೀಡಾ ಮನೋಭಾವದೊಂದಿಗೆ ಕ್ರೀಡೆಯನ್ನು ಸ್ಫೂರ್ತಿಯಾಗಿ ಪರಿಗಣಿಸಿ ಸಾಧನೆ ತೋರುವ ನಿಟ್ಟಿನಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ ಅವರು, ದೈಹಿಕ ಶಿಕ್ಷಕರು ತಮ್ಮ ವೃತ್ತಿಯ ಗೌರವ ಮನಗಂಡು, ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಣದಲ್ಲಿ ಸಾಧನೆಗೆ ಹಚ್ಚಿ, ಅವರನ್ನು ಮತ್ತಷ್ಟು ಆರೋಗ್ಯಕರವಾಗಿ ಸದೃಢಗೊಳಿಸುವಂತೆ ಕೋರಿದರು.
ಶಾಸಕ ಎಚ್.ಡಿ.ರೇವಣ್ಣ ಅನುಪಸ್ಥಿತಿಯಲ್ಲಿ ಸಮ್ಮೇಳನ ಉದ್ಘಾಟಿಸಿದ ಪುರಸಭಾಧ್ಯಕ್ಷೆ ವಿನೋದ ಅವರು ಸದೃಢ ದೇಹ ಮತ್ತು ಮನಸ್ಸು ಸದೃಢ ದೇಶದ ನಿರ್ಮಾಣಕ್ಕೆ ಸಹಕಾರಿ.
ಇಂದಿನ ಮಕ್ಕಳ ಉತ್ತಮ ಆರೋಗ್ಯ ಭವಿಷ್ಯದಲ್ಲಿ ಭವ್ಯ ಸಮಾಜ ಕಟ್ಟಬಹುದಾಗಿದೆ ಎಂದು ನುಡಿದರು.
ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪರವಾಗಿ ಅಧ್ಯಕ್ಷ ಎಸ್.ಎನ್.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ದೈಹಿಕ ಶಿಕ್ಷಣ ಕ್ಷೇತ್ರ ಒಂದು ರಾಷ್ಟ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ವಿಶೇಷ ಅತಿಥಿ ಪ್ರೊ. ಶೇಷಣ್ಣ ಅವರ ವ್ಯಕ್ತಿ ಪರಿಚಯವನ್ನು ತಾ.ಪ್ರೌ.ಶಾ.ದೈ.ಶಿ.ಸಂಘದ ಕಾರ್ಯದರ್ಶಿ ಸುಜಾತ್ ಆಲಿ ಮಾಡಿಕೊಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ಸ್ವಾಗತಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ಎನ್.ಆರ್.ಅನಂತಕುಮಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ಜಿ.ಈಶ್ವರಪ್ಪ, ದೈಹಿಕ ಶಿಕ್ಷಣ ಉಪನ್ಯಾಸಕ ವೆಂಕಟೇಶಮೂರ್ತಿ, ಆದರ್ಶ ವಿದ್ಯಾಶಾಲೆಯ ಪ್ರಾಂಶುಪಾಲ ಎಸ್.ಆರ್.ಲೋಕೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

