ಹಾಸನ

ನಗರಕ್ಕೆ ಬಂದಿರುವ ದೇಶ ವಿದೇಶಿ ಬಾನಾಡಿಗಳು...

Published On :

ಹಾಸನ: ನಗರದ ಸಮೀಪ ಇರುವ ಕುದುರೆಗುಂಡಿ ಮತ್ತು ಹುಣಸಿನಕೆರೆಗಳು ಈಗ ಸೌಂದರ್ಯದಿಂದ  ಮೈದಳೆದಿವೆ. ಇದಕ್ಕೆ ಕಾರಣ ಆ ಕೆರೆಗಳಿಗೆ ದೇಶ, ವಿದೇಶಗಳ ಬಣ್ಣ, ಬಣ್ಣದ ಹಕ್ಕಿಪಕ್ಷಿಗಳು ಆಗಮಿಸಿರುವುದು. ಕೆರೆಯೊಳಗೆ ಮತ್ತು ಕೆರೆಯಂಚಿನಲ್ಲಿ ಪಕ್ಷಿಗಳೇ ತುಂಬಿವೆ. ಇದರಿಂದ ಉಂಟಾಗಿರುವ ಸೌಂದರ್ಯ ತುಂಬಿಕೊಳ್ಳಲು ಎರಡೂ ಕಣ್ಣುಗಳು ಸಾಲದು.  ಅರೆ ಮಲೆನಾಡು ಎಂದೇ ಖ್ಯಾತಿಯಾದ ಹಾಸನ ಜಿಲ್ಲೆಯಲ್ಲಿ ದಿನೇ ದಿನೇ ಚಳಿ.. ಚಳಿ ತಾಳೇನು ಎಂಬಂತೆ ಆಗಿದೆ.
 ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿಗಾಲ ಹೆಚ್ಚಾಗಿದೆ. ಎರಡು ಕೆರೆಗಳಿಗೆ ದೇಶ-ವಿದೇಶಗಳ ನೂರಾರು ಪ್ರಭೇದದ ಸಾವಿರಾರು ಹಕ್ಕಿಗಳು ವಲಸೆ ಬಂದಿವೆ. ಹೀಗಾಗಿ ತರೇಹೇವಾರಿ ಹಕ್ಕಿಗಳ ಆಗಮನದಿಂದಾಗಿ ಕೆರೆಗಳು ಅಕ್ಷರಶಃ ಪಕ್ಷಿಕಾಶಿಯಾಗಿ ಮಾರ್ಪಟ್ಟಿವೆ.
ದೃಶ್ಯ ನಿಜಕ್ಕೂ ಮನಮೋಹಕ:    ಕೆರೆಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಬಗೆ ಬಗೆಯ ಬಾನಾಡಿಗಳು ವಾತಾವರಣದ ವೈಪರೀತ್ಯದಿಂದಾಗಿ ವಿದೇಶಗಳಿಂದ ಸಾವಿರಾರು ಮೈಲು ದೂರ ಕ್ರಮಿಸಿ ಬಂದು ಕೆರೆಗಳಲ್ಲಿ ಕಾಲ ಕಳೆಯುತ್ತಿವೆ. ನೀರ ಮಧ್ಯೆ ನಿಂತ ಬಾನಾಡಿಗಳು ಕೊಕ್ಕುಗಳಿಂದ ಕಚಕುಳಿಯಾಡುವ ದೃಶ್ಯ ನಿಜಕ್ಕೂ ಮನಮೋಹಕ.
 ಈ ಹಿಂದೆ ತಾವಿದ್ದ ತಾಣಗಳಲ್ಲಿ ವಿಪರೀತ ಚಳಿ ಜೊತೆಗೆ ಆಹಾರದ ಅಲಭ್ಯತೆಯಿಂದಾಗಿ ನಾನಾ ತಳಿಯ ಹಕ್ಕಿಗಳು ಇಲ್ಲಿಗೆ ದಾಂಗುಡಿ ಇಟ್ಟಿದ್ದು, ಇನ್ನೂ ಕೆಲ ದಿನ ಹಾಸನದಲ್ಲೇ ಉಳಿಯಲಿವೆ.
  ಬೇಸಿಗೆ ಬಿಸಿಲ ತಾಪ ಹೆಚ್ಚಾಗುವ ಹೊತ್ತಿಗೆ ಇಲ್ಲಿಂದ ಮೊದಲು ತಾವಿದ್ದ ಪ್ರದೇಶಕ್ಕೆ ಹಕ್ಕಿಗಳು ಹಾರಲಿವೆ ಎನ್ನುತ್ತಾರೆ ಸ್ಥಳೀಯ ಮಹೇಶ್‌ಕುಮಾರ್ ಅವರು.
ಹತ್ತಾರು ಬಗೆಯ ಪಕ್ಷಿಗಳು:   ನೀರು ಕಾಗೆ, ಹೆಜ್ಜಾಲ, ಸ್ಯಾಂಡ್ ಪೈಪರ್, ಬ್ಲಾಕ್ವಿಂಗ್‌ಗಿಲ್ಟ್, ಎಗ್ರೆಟ್ ಹೆಸರಿನ ಹತ್ತಾರು ಬಗೆಯ ಪಕ್ಷಿಗಳು ಕೆರೆಗಳಲ್ಲಿ ಬೀಡುಬಿಟ್ಟಿವೆ.ಪಕ್ಷಿಗಳಲ್ಲಿ ಮಾತ್ರ ಅಪರೂಪದ ಹಕ್ಕಿಗಳನ್ನು ಕಂಡಿದ್ದ ಜನರು, ಕೆರೆಗಳಲ್ಲೇ ಅವುಗಳನ್ನು ಕಂಡು ಆನಂದ ತುಂದಿಲರಾಗುತ್ತಿದ್ದಾರೆ. ಕೆರೆಯ ಒಡಲಲ್ಲಿ ತಂಡೋಪ ತಂಡವಾಗಿ ಕುಳಿತು ನಂತರ ಒಮ್ಮೆಗೇ ನಭೋಮುಖಿಯಾಗುವ ಹಕ್ಕಿಗಳ ಹಾರಾಟ ನೋಡುವುದೇ ಒಂದು ಖುಷಿ ಸಮಯ.
 ಒಟ್ಟಿನಲ್ಲಿ ಮಳೆ ಇಲ್ಲದೆ ಬರಡಾಗಿರುವ ಕೆರೆಗಳಿಗೆ ಅಪರೂಪದ ಹಕ್ಕಿಗಳ ಆಗಮನ ಜೀವ ಕಳೆ ತಂದಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಐತಿಹಾಸಿಕ ತಾಣಗಳನ್ನು ನೋಡಲು ಬರುವ ಪ್ರವಾಸಿಗರು ಈ ಕೆರೆಗಳಿಗೂ ಒಮ್ಮೆ ಭೇಟಿ ಕೊಟ್ಟರೆ ಹಕ್ಕಿಗಳ ಅಂದ ಚಂದ ಕಣ್ತುಂಬಿ ಕೊಳ್ಳಬಹುದಾಗಿದೆ.          

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.