ಹಾಸನ

ಸುಳ್ಳಾದ ಕಾಡಾನೆ ಸ್ಥಳಾಂತರ ವಾಗ್ದಾನ

Published On :

ಹಾಸನ: ಕಾಡಾನೆಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿ ಬೆಳೆ ಪ್ರಾಣ ರಕ್ಷಿಸಿ ಎಂಬ ಘೋಷಣೆಗಳು ಅಪ್ಪಟ್ಟ ಮಲೆನಾಡು ತಾಲೂಕುಗಳಾದ ಆಲೂರು, ಸಕಲೇಶಪುರಗಳಲ್ಲಿ ಐದಾರು ವರ್ಷಗಳಿಂದ ನಿರಂತರವಾಗಿ ಮೊಳಗುತ್ತಿವೆ. ಆದರೆ ಅದಕ್ಕೆ ತಕ್ಕ ಪ್ರತಿಫಲ ಈ ಭಾಗದ ಜನರಿಗೆ ಸಿಕ್ಕಿಲ್ಲ.
 ಕಾಡಾನೆಗಳ ದಾಳಿಯಿಂದ ಬೆಳೆ ಹಾನಿಯಾದ ಹಾಗೂ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದ ಮಂತ್ರಿಗಳಿಗೆ, ಅರಣ್ಯಾಧಿಕಾರಿಗಳಿಗೆ ಲಿಖಿತವಾಗಿ, ಮೌಖಿಕವಾಗಿ ಸಲ್ಲಿಸಿದ ಮನವಿಗಳಂತೂ ಲೆಕ್ಕಕ್ಕೆ ಸಿಗುವುದಿಲ್ಲ. ಆ ಪ್ರಮಾಣದಲ್ಲಿ ಮನವಿಗಳನ್ನು ನೀಡಿ ಆಳುವವರ ಮೇಲೆ ಒತ್ತಡ ಹೇರಿದ್ದಾರೆ.
ಆನೆ ಹಾವಳಿಯಿಂದಾಗಿ ಕೈಗೆ ಬಂದ ಬೆಳೆ ಹಟ್ಟಿಗೆ ಸೇರದಂತಾಗಿದೆ ಎಂದು ಅನ್ನದಾತ ಕಣ್ಣೀರಿಡುತ್ತಿದ್ದರೆ, ಸಾಮಾನ್ಯ ಜನಕ್ಕೆ ಜೀವಭಯ ಎದುರಾಗಿದೆ. ಕೂಡಲೇ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಗಜಗಳಿಂದಾಗುತ್ತಿರುವುದಕ್ಕೆ ಪರಿಹಾರ ಕಂಡುಹಿಡಿಯುವಂತೆ ಈ ಭಾಗದ ಜನ ಆಗ್ರಹಿಸಿದ್ದಾರೆ.
ಕಾಡಾನೆಗಳ ನಿತ್ಯ ಉಪಟಳ:   ತೀವ್ರ ಒತ್ತಡ ಮತ್ತು ನಿರಂತರ ಹೋರಾಟದ ನಂತರ ಮಲೆನಾಡು ಭಾಗದಲ್ಲಿ ನಿತ್ಯ ಉಪಟಳ ನೀಡುತ್ತಿರುವ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳನ್ನು ಸಾಮೂಹಿಕವಾಗಿ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿತ್ತು.  
 ಆದರೆ, ಪರಿಸರವಾದಿಗಳ ಕೊಕ್ಕೆಯಿಂದಾಗಿ ಕಾಡಾನೆಗಳನ್ನು ಒಂದೇ ಬಾರಿಗೆ ಹಿಡಿದು ಬೇರೆಡೆಗೆ ಸಾಗಿಸುವ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿತು. ಈ ಬೆಳವಣಿಗೆ ನಡೆದು ಹೆಚ್ಚು ಕಡಿಮೆ ಒಂದು ವರ್ಷ ಕಳೆದಿದೆ. ಆದರೂ ತಡೆ ತೆರವುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಒತ್ತಡ ಹೇರಿಲ್ಲ, ಹೈಕೋರ್ಟ್ ಸಹ ಶೀಘ್ರ ವಿಲೇವಾರಿಗೆ ಮುಂದಾಗಿಲ್ಲ. ಯಾವುದೇ ಅಂಕುಷ ಇಲ್ಲದ ಕಾರಣ ಗಜಪಡೆ ಗಲಾಟೆ ಮುಂದುವರಿದಿದೆ. ಪರಿಣಾಮ ಭತ್ತ, ಕಾಫಿ, ಬಾಳೆ, ತೆಂಗು ಮೊದಲಾದ ಬೆಳೆಗಳು ದಿನನಿತ್ಯ ಮಣ್ಣುಪಾಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.