ಒಣಗಿದ ಕೆರೆ ಕಟ್ಟೆ: ರೈತರ ಆತಂಕ
ಬೇಲೂರು: ಹಳೆಬೀಡು, ಮಾದೀಹಳ್ಳಿ ಹೋಬಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಈಗಲೇ ಹಿಂಗೆ. ಮುಂದಿನ ದಿನಗಳಲ್ಲಿ ಏನಪ್ಪಾ ಮಾಡುವುದು ಎಂಬ ಆತಂಕದಲ್ಲಿ ಜನತೆ ಜೀವನ ದೂಡುತ್ತಿದ್ದು ಬರಗಾಲದ ಬೇಗೆಗೆ ಬಯಲು ಸೀಮೆ ಜನ ನಲುಗುತ್ತಿದ್ದಾರೆ.
ಬೇಲೂರು ತಾಲೂಕು ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆಯಿಂದ ಕೂಡಿದ್ದು ವಿಭಿನ್ನ ಭೌಗೋಳಿಕ ಹಿನ್ನೆಲೆ ಹೊಂದಿದೆ. ಸಕಲೇಶಪುರ, ಮೂಡಿಗೆರೆ ಮಾರ್ಗದಿಂದ ಬಂದರೆ ಮಲೆನಾಡು ಭಾಗ, ಅರಸೀಕೆರೆಯಿಂದ ಬಂದರೆ ಬಯಲುಸೀಮೆ, ಚಿಕ್ಕಮಗಳೂರು ಕಡೆಯಿಂದ ಬಂದರೆ ಅರೆ ಮಲೆನಾಡು ಪ್ರಾಂತ್ಯಗಳು ಕಾಣಸಿಗುತ್ತವೆ. ಬಯಲು ಸೀಮೆಯಲ್ಲಿ ಮಳೆ ಬಾರದೆ ರೈತರು ಪರದಾಡಿದರೆ, ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ಕಾಫಿ ಬೆಳೆಗಾರರು ತೊಂದರೆಗೆ ಒಳಗಾಗುವ ಪರಿಸ್ಥಿತಿ ಇತ್ತು. ವಾಡಿಕೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಹಳೆಬೀಡು, ರಾಜನಸಿರಿಯೂರು, ಚಟಚಟಹಳ್ಳಿ, ಗಂಗೂರು, ಸಾಣೇನಹಳ್ಳಿ, ಮಾದೀಹಳ್ಳಿ, ಸವಾಸಿಹಳ್ಳಿ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ.
ಫ್ಲೋರೈಡ್ ಅಂಶ ಹೆಚ್ಚು: ಹಳೆಬೀಡು ಸುತ್ತಮುತ್ತಲಿನ ಗ್ರಾಮಗಳಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು ಜನತೆಯು ವಿವಿಧ ಗೋರ ರುಜಿನಗಳಿಂದ ಬಳಲುತ್ತಿದ್ದಾರೆ. ದಿನ ಬೆಳೆಗಾದರೆ ಕಾಲುನೋವು, ಸೊಂಟ ನೋವು ಕಾಣಿಸಿಕೊಳ್ಳತೊಡಗಿದೆ. ಫ್ಲೋರೈಡ್ ಅಂಶ ಹೆಚ್ಚಾಗಿ ಹಲ್ಲುಗಳು ಹಳದಿ ರೂಪಕ್ಕೆ ತಿರುಗಿದ್ದು ಚಿಕ್ಕಮಕ್ಕಳಲ್ಲಿ ಬೆಳವಣಿಗೆ ಕಡಿಮೆಯಾಗಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವ ಬಗ್ಗೆ ಜಿಲ್ಲಾ ಆರೋಗ್ಯ ಕೇಂದ ತಂಡದವರು ಆಗಮಿಸಿ ನೀರು ಪರೀಕ್ಷೆ ನಡೆಸಿದಾಗ ಫ್ಲೋರೈಡ್ ಇರುವುದು ರುಜುವಾತಾಗಿದೆ.
ಇದರ ಜೊತೆಗೆ ಹಳೆಬೀಡು ಹೋಬಳಿಯ ಸುತ್ತ ಮುತ್ತಲಿನ ಗ್ರಾಮಗಳಲ್ಲಿ 500 ರಿಂದ 600 ಅಡಿ ಕೊರೆದರೂ ನೀರು ಬಾರದಿರುವುದು ಆತಂಕಕ್ಕೆ ಕಾರಣವಾಗಿದೆ. ಅಂತರ್ಜಲ ಸಂಪೂರ್ಣ ಬತ್ತಿದ್ದು ನೀರಿನ ಸೆಲೆ ಸಂಪೂರ್ಣವಾಗಿ ಬತ್ತತೊಡಗಿದೆ. ಒಂದೆಡೆ ಕುಡಿಯುವ ನೀರಿಗೆ ಪರದಾಟ, ಇನ್ನೊಂದೆಡೆ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ವಾಣಿಜ್ಯ, ಆಹಾರ ಬೆಳೆಗಳು ಸುಟ್ಟುಕರಲಾಗುತ್ತಿದ್ದು ರೈತರ ಸ್ಥಿತಿ ಮುರಾಬಟ್ಟೆಯಾಗಿದೆ.
ಬಂದ ಬೆಲೆಗೆ ಜಾನುವಾರು ಮಾರಾಟ: ಕೃಷಿಗೆ ಅಗತ್ಯವಾದ ಎತ್ತುಗಳನ್ನು ಸಾಕಲಾರದೆ ರೈತರು ಜಾನುವಾರುಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮುಂಗಾರು ಮಳೆ ಕೈಕೊಟ್ಟ ನಂತರ, ಹಿಂಗಾರು ಮಳೆ ಬರುವ ಆತ್ಮ ವಿಶ್ವಾಸ ರೈತರಿಗೆ ಇತ್ತು. ಆದರೆ ಅದೂ ಕೈ ಕೊಟ್ಟಿತು. ಸ್ವಾತಿ ಮಳೆ ಬರಬಹುದು ಎಂದು ಮನೆಯಲ್ಲಿದ್ದ ಬೀಜ-ಗೊಬ್ಬರ ಭೂಮಿಗೆ ಬಿತ್ತಿದ್ದು ಈಗ ಅದೂ ಕೂಡ ನಾಶದ ದಾರಿ ಹಿಡಿದಿದೆ. ರೈತರಿಗೆ ಕಾಡುತ್ತಿರುವ ದೊಡ್ಡ ಚಿಂತೆ ಎಂದರೆ ತಮ್ಮ ಕುಟುಂಬದ ಸದಸ್ಯರಂತೆ ಸಾಕಿದ ನೆಚ್ಚಿನ ಜಾನುವಾರುಗಳಿಗೆ ಮೇವು ಇಲ್ಲದೆ ಇವುಗಳನ್ನು ಹೇಗಪ್ಪಾ ಮಾರಾಟ ಮಾಡುವುದು ಎಂಬ ಚಿಂತೆಯ ಜೊತೆಗೆ ದನಕರುಗಳಿಗೆ ನೀರು ಹಾಗೂ ಮೇವು ಹೊಂದಿಸುವುದು ಕಷ್ಟವಾಗಿ ಬೇರೆಡೆಯಾದರೂ ಅವು ಬದುಕಲಿ ಎಂದು ಬಂದ ಬೆಲೆಗೆ ಮಾರಾಟ ಮಾಡಿ ಸಾಗಹಾಕುತ್ತಿದ್ದಾರೆ.
ಊಟ ಬೇಕಾದ್ರೆ ಹಾಕ್ತಿವೀ, ನೀರು ಕೇಳಬೇಡ: ಊಟ ಬೇಕಾದ್ರೆ ಹಾಕ್ತಿವೀ ಬಾ, ಆದರೆ ಕುಡಿಯಲು ನೀರು ಮಾತ್ರ ಕೇಳಬೇಡ. ಇದು ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳಿಗೆ ಅಡುಗೆ ಮಾಡಲು ಗ್ರಾಮಸ್ಥರ ಮನೆಗೆ ನೀರು ಕೇಳಲು ಹೋದರೆ ಸಿಗುವ ಉತ್ತರ. ರಾಜನಸಿರಿಯೂರು, ಗಂಗೂರು, ಸಾಣೇನಹಳ್ಳಿಯಂತಹ ಗ್ರಾಮಗಳಲ್ಲಿ ಲೋಟ ನೀರು ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಬಿಸಊಿಟ ಮಾಡಲು ನೀರು ಇಲ್ಲದೆ ಎಲ್ಲರ ಮನೆಗಳಲ್ಲಿ ಅಲ್ಪಸ್ವಲ್ಪ ನೀರನ್ನು ಸಂಗ್ರಹಿಸಿ ಹೇಗೋ ಊಟ ಮಾಡಿ ಬಡಿಸಿದರೂ ಪಾತ್ರ ತೊಳೆಯಲು ಮತ್ತೆ ನೀರಿಗೆ ಪರದಾಟ ತಪ್ಪಿದ್ದಲ್ಲ ಎಂಬುದಾಗಿ ಅಂಗನವಾಡಿ ಸಹಾಯಕಿಯರ ನೋವಿನ ನುಡಿಯಾಗಿದೆ.
ಪಂಪ್ಸೆಟ್ನಿಂದ ನೀರು: ಕುಡಿಯುವ ನೀರಿಗಾಗಿ ಈ ಗ್ರಾಮಗಳಲ್ಲಿನ ಜನತೆ 2 - 3 ಕಿಮೀ ದೂರದ ಹೊಲಗದ್ದೆಯಲ್ಲಿರುವ ಪಂಪ್ನಿಂದ ಎತ್ತಿನ ಗಾಡಿ, ಸೈಕಲ್, ತಳ್ಳುಗಾಡಿಯಲ್ಲಿ ನೀರು ತರುತ್ತಾರೆ. ಇತ್ತೀಚೆಗೆ ಹೊಲದ ಮಾಲೀಕರು ನೀರು ನಮಗೂ ಸಾಕಾಗುತ್ತಿಲ್ಲ ಎಂದು ನೀರು ಕೊಡುವದನ್ನು ನಿಲ್ಲಿಸುತ್ತಿದ್ದು ಮುಂದೇನು ಗತಿ ಎನ್ನುವಂತಾಗಿದೆ.
ವಾರಕ್ಕೆ ಒಮ್ಮೆ ಗ್ರಾಮ ಪಂಚಾಯಿತಿವರು ಕೊಳಾಯಿಲ್ಲಿ ನೀರು ಬಿಡುತ್ತಿದ್ದು ಅದೂ 7 - 8 ಕೊಡ ಹಿಡಿಯುವುದರೊಳಗೆ ನಿಲ್ಲಿಸುತ್ತಾರೆ. ಸ್ನಾನ ಮಾಡುವುದೇ ಎಂದು ಸಾಹಸ ಎನ್ನುವಂತಾಗಿದ್ದು ಜೊತೆಗೆ ಅಡುಗೆಗೂ ನೀರು ಇಲ್ಲದಂತಾಗಿದೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ರಾಜನಸಿರಿಯೂರು, ಸಾಣೇನಹಳ್ಳಿ ಮುಂತಾದ ಕಡೆ ಕೆರೆ ಕಟ್ಟೆಗಳು ಒಣಗಿ ಬತ್ತಿಹೋಗಿದೆ. ಅಂತರ್ಜಲ ಕೊರತೆಯಿಂದಾಗಿ ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ಸಾಲ ಮಾಡಿ ಬೆಳೆಸಿದ ಬೆಳೆಗಳು ಸುಟ್ಟುಕರಕಲಾಗುತ್ತಿದೆ. ಬ್ಯಾಂಕ್ ಸಾಲ ಕಟ್ಟಲಾಗದೆ ರೈತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.
ಸಹಕಾರಿ ಬ್ಯಾಂಕುಗಳಲ್ಲಿ 25 ಸಾವಿರ ರು. ಮನ್ನಾ ಮಾಡಲಾಗುತ್ತಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ಸಾಲ ಮನ್ನಾ ಮಾಡಿಲ್ಲ. ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡಿದ ಮೇಲೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಕೆಜೆಪಿ ಮುಖಂಡ ಕಡಿದಾಳ್ ಮಂಜಪ್ಪ, ವಿಎಸ್ ಎಸ್ ಎನ್ ಅಧ್ಯಕ್ಷ ಓಂಕಾರಪ್ಪ ಆಗ್ರಹಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

