'ದಾನ, ಧರ್ಮ, ಸದ್ಗುಣಗಳಿಂದ ಭಗವಂತನ ಒಲವು'
ಅರಸೀಕೆರೆ: ದೇವರು ಮತ್ತು ಧರ್ಮದಲ್ಲಿ ನಂಬಿಕೆಯನ್ನಿಟ್ಟು ದಾನ ಧರ್ಮ ಮಾಡುವ ಸದ್ಗುಣಗಳನ್ನು ನಾವುಗಳು ಬೆಳೆಸಿಕೊಂಡಾಗ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ದೊಡ್ಡಗುಣಿ ಮಠದ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊಯ್ಸಳನಗರದಲ್ಲಿ ಸವಿತಾ ಸಮಾಜ ನೂತನವಾಗಿ ನಿರ್ಮಿಸಿರುವ ರೇಣುಕಾ ಯಲ್ಲಮ್ಮ ಮತ್ತು ಪರಶುರಾಮ ದೇವಾಲಯ ಉದ್ಘಾಟನೆ ಹಾಗೂ ನಾಗದೇವತೆ ವಿಗ್ರಹ ಪ್ರತಿಷ್ಠಾಪನೆ, ಅಶ್ವತ್ಥವೃಕ್ಷ ಕಲ್ಯಾಣೋತ್ಸವ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಆಧುನಿಕತೆ ಬೆಳೆದಂತೆ ಮನುಷ್ಯನಲ್ಲಿ ದೇವರು ಧರ್ಮದ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿದ್ದು ದಾನ ಧರ್ಮ ಮಾಡುವ ಗುಣಗಳು ಕ್ಷೀಣಿಸುತ್ತಿವೆ. ಅನಾಚಾರ ಅತ್ಯಾಚಾರಗಳು ಸಮಾಜದಲ್ಲಿ ಹೆಚ್ಚುತ್ತಿದ್ದು ಅದರ ಪಾಪದ ಫಲದಿಂದ ಪ್ರಕೃತಿ ವಿಕೋಪಗಳು ಹೆಚ್ಚುತ್ತಿವೆ ಎಂದು ವಿಷಾದಿಸಿದರು.
ದೇಹವೆಂಬ ಮನೆಯೊಳಗೆ ಜೀವವೆಂಬ ಪರಮಾತ್ಮನು ವಾಸವಾಗಿದ್ದು ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಆತ ನೋಡುತ್ತಿರುತ್ತಾನೆ. ಆದ್ದರಿಂದ ಮನುಷ್ಯ ತನ್ನಲ್ಲಿರುವುದನ್ನು ಹಂಚಿಕೊಳ್ಳುವ ಮನೋಭಾವನೆ, ಎಲ್ಲರಲ್ಲಿಯೂ ಒಂದಾಗಿ ಬಾಳುವ ಮನೋಧರ್ಮ ಬೆಳೆಸಿಕೊಂಡು ಭಕ್ತಿ ಮಾರ್ಗದಲ್ಲಿ ಜೀವನ ನಡೆಸಿದರೆ ಭಗವಂತನ ಪ್ರೀತಿಗೆ ಪಾತ್ರರಾಗಬಹುದೆಂದು ತಿಳಿಸಿದರು.
ಮಾಜಿ ಶಾಸಕ ಎ.ಎಸ್.ಬಸವರಾಜು ಮಾತನಾಡಿ ದೇವಾಲಯಗಳು ಮನುಷ್ಯನಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಮಾರ್ಗ ತೋರಿಸುವ ಶ್ರದ್ಧಾಕೇಂದ್ರಗಳಾಗಿವೆ. ಯಾವುದೇ ಧರ್ಮ ಜಾತಿಯ ಮನುಷ್ಯನೇ ಆಗಿದ್ದರೂ ಆತನ ಜೀವನದಲ್ಲಿ ಏರು ಪೇರು ಉಂಟಾದಾಗ ಆತ ಮೊದಲು ಮಾಡುವುದು ತನ್ನ ಇಷ್ಟ ಆರಾಧ್ಯ ದೇವರ ದೇವಾಲಯ ಅಥವಾ ಮಠ ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿ ತನ್ನ ಸಮಸ್ಯೆಗೆ ಪರಿಹಾರ ಬೇಡಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಎಲ್ಲಾ ಧರ್ಮದ ದೇವಾಲಯಗಳು ಮನುಷ್ಯನ ಪರಿವರ್ತನೆಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್, ಬಾ.ಮಾ. ನಾಗರಾಜ್ ಮಾತನಾಡಿದರು. ಪುರಸಭೆ ಸದಸ್ಯ ಷಫಿವುಲ್ಲಾ ಖಾನ್, ಪ್ರಸನ್ನ ಗಣಪತಿ ಭಕ್ತಮಂಡಲಿ ಕಾರ್ಯದರ್ಶಿ ಶಾಂತವೀರಯ್ಯ, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ತಿಮ್ಮಯ್ಯ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

