ಹಾಸನ

ಸಮಾಜಮುಖಿ ಹೋರಾಟಕ್ಕೆ ಜೈ

Published On :

ಹಾಸನ: ಸಮಾಜಮುಖಿ ಹೋರಾಟ ಸ್ತಬ್ಧವಾಗಿರದೆ ಚಲನಶೀಲವಾಗಿರಬೇಕು ಎಂದು ಅಂತಾರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್ ಹೇಳಿದರು.
ದಲಿತ ಸಾಹಿತ್ಯ ಪರಿಷತ್, ಕರ್ನಾಟಕ ಯುವ ದಲಿತ ಸಂಘರ್ಷ ಸಮಿತಿ, ಪೌರಕಾರ್ಮಿಕರ ಒಕ್ಕೂಟ ಮತ್ತು ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದೇವನೂರು ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ ಮತ್ತು ಸಮಾನತೆಯ ಕನಸು ಮತ್ತೆ ಕಾಣುತ್ತಾ' ಎಂಬ ಪುಸ್ತಕ ಬಿಡುಗಡೆ ಮತ್ತು ದೇವನೂರು ಮಹಾದೇವ ಮತ್ತು ಕೆ.ಟಿ.ಶಿವಪ್ರಸಾದ್ ಅವರ ಜೀವನ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಡಾ.ಅಂಬೇಡ್ಕರ್, ಅಬ್ರಹಾಂ ಲಿಂಕನ್ ಅವರ ಹೋರಾಟಗಳು ಚಲನಾಶೀಲವಾದವು. ಅಂತೆಯೇ ನಮ್ಮ ಹೋರಾಟಗಳು ಎಂದೂ ಸ್ತಬ್ಧವಾಗಬಾರದು ಎಂದರು. ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಒಟ್ಟಾಗಿ ಹೋರಾಟ ಮಾಡಬೇಕು. ಜಾತಿ ಜಾತಿಗಳೇ ಹರಿದು ಹಂಚಿ ಹೋಗಿರುವುದರಿಂದ ಹೋರಾಟಗಳಿಗೆ ಹಿನ್ನೆಡೆಯಾಗುತ್ತಿದೆ. ಈ ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಎಲ್ಲರು ಒಗ್ಗೂಡಿ ಹೋರಾಟ ಮಾಡುವಂತಹ ಅನಿವಾರ್ಯತೆ ಇದೆ ಎಂದ ಅವರು, ದೇವನೂರು ಮಹಾದೇವ ಬುದ್ಧಿಜೀವಿ ಹಾಗೂ ಮೌಲ್ಯವುಳ್ಳ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಎಂದು ಹೇಳಿದರು.
ಉತ್ಪ್ರೇಕ್ಷೆಯ  ಅಂಶ ಅಡಕವಾಗಿಲ್ಲ:  ಮಂಡ್ಯದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಎಂ.ಎಸ್.ಶೇಖರ್ ಮಾತನಾಡಿ, ದೇವನೂರು ಮಹಾದೇವರ ಎದೆಗೆ ಬಿದ್ದ ಅಕ್ಷರ ಪುಸ್ತಕದಲ್ಲಿ 98 ಪುಟ್ಟ ಪುಟ್ಟ ಲೇಖನಗಳಿವೆ. 208 ಪುಟಗಳ ಈ ಪುಸ್ತಕ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಮಾಜದಲ್ಲಿ ಜಾಗೃತಿ, ವೈವಿಧ್ಯ ಲೋಕ, ಚಿಂತನೆ ಸೇರಿದಂತೆ ಇತರೆ ಅಂಶಗಳು ಪುಸ್ತಕದಲ್ಲಿದ್ದು, ಇಲ್ಲಿ ಯಾವುದೇ ಉತ್ಪ್ರೇಕ್ಷೆಯ ಅಂಶಗಳು ಅಡಕವಾಗಿಲ್ಲ ಎಂದು ವಿವರಿಸಿದರು. ಮಹಾದೇವ ಅವರು ಏನನ್ನಾದರೂ ಬರೆದರೆ ಅದರಲ್ಲಿ ಸಮಾಜಮುಖಿ ಅಂಶಗಳು, ಆಳವಾದ ಚಿಂತನೆಗಳಿಂದ ಕೂಡಿದ ವಿಚಾರಗಳು ಇರುತ್ತವೆ. ಇದನ್ನು ಇಡೀ ನಾಡೇ ಎದೆಗೆ ಅರ್ಪಿಸಿಕೊಂಡು, ಬಹಳ ಉತ್ಸುಕತೆಯಿಂದ ಓದುತ್ತಾರೆ ಎಂದ ಅವರು, ಇವರಿಗೆ ನೃಪತುಂಗ ಪ್ರಶಸ್ತಿ ಬಂದಾಗ ಅದನ್ನು ತಿರಸ್ಕರಿಸಿ 1ರಿಂದ 10ನೇ ತರಗತಿವರೆಗೆ ಸಮಾನತೆಯ ಶಿಕ್ಷಣ ನೀಡುವವರೆಗೂ ತಾನು ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಸಮಾಜದ ಒಳಿತಿಗಾಗಿ ತಿರಸ್ಕರಿಸಿದರು. ಸಮಾನತೆಯ ಶಿಕ್ಷಣ ನೀಡಿದ ಮೇಲೆ ತಾನೇ ಬಂದು ನೃಪತುಂಗ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ ಎಂದು ಘೋಷಿಸಿದ ಮಹಾನ್ ವ್ಯಕ್ತಿ ಎಂದು ಶ್ಲಾಘಿಸಿದರು.
ದಲಿತರಿಗೆ ಮಾತ್ರ ಸೀಮಿತವಲ್ಲ: ದೇವನೂರರ ಚಿಂತನೆ, ಆಲೋಚನೆಗಳು ಕೇವಲ ದಲಿತರಿಗೆ ಮಾತ್ರ ಸಿಮೀತವಲ್ಲ. ಅವರ ಕೊಡುಗೆಗಳು ಇಡೀ ನಾಡಿಗೆ, ದೇಶಕ್ಕೆ ಮತ್ತು ಮನುಷ್ಯತ್ವದ ಸಮಾಜಕ್ಕೆ ಮೀಸಲಾಗಿದೆ. ಅವರು ಸಮಾಜನವನ್ನು ಸದಾ ಕಾಲ ಎಚ್ಚರಿಸುವಂತಹ ಕಾರ್ಯ ಮಾಡುತ್ತಿದ್ದಾರೆ. ಅವರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅನಂತಮೂರ್ತಿಯೋಪಾದಿಯಲ್ಲಿ ಸಾಕಷ್ಟು ಮಂದಿ ಮಾರುಹೋಗಿದ್ದಾರೆ ಎಂದು ಹೇಳಿದರು.
ದೇವನೂರು ಮಹದೇವರ 'ಎದೆಗೆ ಬಿದ್ದ ಅಕ್ಷರ ಮತ್ತು ಸಮಾನತೆಯ ಕನಸು ಮತ್ತೆ ಕಾಣುತ್ತಾ' ಪುಸ್ತಕವನ್ನು ಪೌರಕಾರ್ಮಿಕರಾದ ಅಮ್ಮಯಮ್ಮ, ಗೋಪಾಲ, ನಲ್ಲಪ್ಪ, ಲೋಕಿ, ಮೇಲಯ್ಯ, ಶೀತಲ್‌ಜೈನ್ ಅನಾವರಣಗೊಳಿಸಿದರು. ನಂತರ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಬಾನು ಮುಷ್ತಾಕ್, ದಲಿತ ಮುಖಂಡ ಬಿ.ಪಿ.ಜಯರಾಂ, ಕ್ರಾಂತಿ ಪ್ರಸಾದ್ ತ್ಯಾಗಿ, ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಕೃಷ್ಣದಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.