ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿಗದಿ: ಡಿಸಿ
ಹಾಸನ: ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ಪ್ರಚಾರ, ವೆಚ್ಚವನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ
ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು 2 ಲಕ್ಷ ರು. ವೆಚ್ಚ, ಪುರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 1.50 ಲಕ್ಷ ರು. ಮತ್ತು ಪಟ್ಟಣ ಪಂಚಾಯ್ತಿಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಲಕ್ಷ ರು. ಗರಿಷ್ಠ ವೆಚ್ಚವನ್ನು ನಿಗದಿಪಡಿಸಲಾಗಿದೆ ಮತ್ತು ಅಭ್ಯರ್ಥಿಗಳು ಮಾಡುವ ದೈನಂದಿನ ವೆಚ್ಚಗಳನ್ನು ಪರಿಶೀಲಿಸಲು ಲೆಕ್ಕ ಪರಿಶೋಧಕರು ಮತ್ತು ಲೆಕ್ಕಿಗರನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ನೇಮಕ ಮಾಡಲಾಗಿದೆ.
ಅಭ್ಯರ್ಥಿಗಳು ಚುನಾವಣಾ ನಿಯಮಗಳಲ್ಲಿ ನಿಗದಿ ಪಡಿಸಿರುವಂತೆ ನಿಗದಿತ ವಹಿಯಲ್ಲಿ ದಿನ ನಿತ್ಯದ ವೆಚ್ಚದ ವಿವರಗಳನ್ನು ವೀಕ್ಷಕರು ಹಾಗೂ ಲೆಕ್ಕ ಅಧೀಕ್ಷಕರು ಕೇಳಿದಾಗ ವೋಚರ್ನೊಂದಿಗೆ ತಪ್ಪದೇ ತೋರಿಸಬೇಕಾಗುತ್ತದೆ. ಫಲಿತಾಂಶ ಘೋಷಿಸಿದ ದಿನಾಂಕದಿಂದ 30 ದಿನಗಳಲ್ಲಿ ವೆಚ್ಚ ಮಾಡಲಾದ ಪೂರ್ಣ ವಿವರಗಳನ್ನು ಚುನಾವಣಾಧಿಕಾರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ತಿಳಿಸಿದ್ದಾರೆ.
ಸೂಚಕ ಸಂಖ್ಯೆ ಎಷ್ಟು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ದಂತೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಅಗತ್ಯವಿರುವ ಸೂಚಕರ ಸಂಖ್ಯೆ ಇಂತಿದೆ. ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವವರು ನಗರಸಭೆ, ಪುರಸಭೆ ಪಟ್ಟಣ ಪಂಚಾಯ್ತಿಗಳಿಗೆ ಒಬ್ಬೊಬ್ಬ ಸೂಚಕರಿರತಕ್ಕದ್ದು. ಇದೇ ರೀತಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವವರಿಗೆ ನಗರಸಭೆಗೆ-5, ಪುರಸಭೆಗೆ-4, ಪಟ್ಟಣ ಪಂಚಾಯತಿಗೆ-3 ಸೂಚಕರು ಇರಬೇಕು.
ಠೇವಣೆ ಎಷ್ಟು: ನಗರಸಭೆಗೆ ಸ್ಪರ್ಧಿಸುವ ಸಾಮಾನ್ಯ ಅಭ್ಯರ್ಥಿ 2000 ರು, ಮತ್ತು ಹಿಂದುಳಿದ ವರ್ಗ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮಹಿಳಾ ಅಭ್ಯರ್ಥಿಗಳಿಗೆ 1000 ರು. ಠೇವಣಿ ಸಲ್ಲಿಸಬೇಕು. ಹಾಗೆಯೇ ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಿಗೆ ಸ್ಪರ್ಧಿಸುವ ಸಾಮಾನ್ಯ ಅಭ್ಯರ್ಥಿಗಳು ರು.1000, ಮತ್ತು ಹಿಂದುಳಿದ ವರ್ಗ ಅನುಸೂಚಿತ ಜಾತಿ ಅನುಸೂಚಿತ ವರ್ಗ ಮಹಿಳಾ ಅಭ್ಯರ್ಥಿಗಳು ರು. 500 ಠೇವಣಿ ಇಡಬೇಕು. ಈ ಬಗ್ಗೆ ನಾಮಪತ್ರಗಳ ನಮೂನೆ ಹಾಗೂ ಘೋಷಣಾ ಪತ್ರಗಳನ್ನು ಆಯಾ ತಾಲೂಕು ಕಚೇರಿ ಮುಖಾಂತರ ಚುನಾವಣಾಧಿಕಾರಿಗೆ ತಲುಪಿಸಲಾಗಿದೆ. ನಾಮಪತ್ರ ಸಲ್ಲಿಸುವ ಸಮಯದಲ್ಲಿ ನಾಮಪತ್ರ ಹಾಗೂ ಘೋಷಣಾ ಪತ್ರಗಳಲ್ಲಿ ಎಲ್ಲಾ ಅಂಕಣಗಳಲ್ಲಿ ಸೂಕ್ತವಾದ ಅಂಶಗಳನ್ನು ಭರ್ತಿ ಮಾಡಿ, ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ ಫೆ.23 ರ ಮಧ್ಯಾಹ್ನ 3 ರೊಳಗೆ ಸ್ವಯಂ ಅಥವಾ ಸೂಚಕರ ಮೂಲಕ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಸುವ ಪ್ರತಿ ಅಭ್ಯರ್ಥಿಯು ಆ ಕ್ಷೇತ್ರದಲ್ಲಿನ ಮತದಾರರ ಸೂಚಕರ ಸಂಖ್ಯೆ ಇರತಕ್ಕದ್ದು.
ಚುನಾವಣಾ ಸಿದ್ದತೆಗಳು: ಜಿಲ್ಲಾಡಳಿತ ಫೆ.16 ರಂದು ಆಯಾ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಅಧಿಸೂಚನೆಯನ್ನು ಮೀಸಲಾತಿ ವಿವರಗಳೊಂದಿಗೆ ಹೊರಡಿಸಲು ಕ್ರಮಗಳನ್ನು ಕೈಗೊಂಡಿದೆ. ಚುನಾವಣೆ ಸುಸೂತ್ರವಾಗಿ ನಡೆಸಲು 24 ಚುನಾವಣಾಧಿಕಾರಿ ಮತ್ತು 24 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತರಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಂಡಗಳ ರಚನೆ ಮಾಡಲಾಗಿದೆ. ಅವಶ್ಯಕವಿರುವಷ್ಟು ಸೆಕ್ಟೋರಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮತಗಟ್ಟೆ ಸ್ಫಾಪನೆ: ಮಾರ್ಚ್ 7 ರಂದು ಮತದಾನದ ಸಂಬಂಧವಾಗಿ ಈ ಕೆಳಕಂಡಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಾಸನ ನಗರ ಸಭೆ-126, ಅರಸೀಕೆರೆ ಪುರಸಭೆ-45, ಚನ್ನರಾಯಪಟ್ಟಣ ಪುರಸಭೆ-39, ಹೊಳೆನರಸೀಪುರ ಪುರಸಭೆ-27, ಸಕಲೇಶಪುರ ಪುರಸಭೆ-23, ಬೇಲೂರು ಪುರಸಭೆ-23, ಅರಕಲಗೂಡು ಪಟ್ಟಣಪಂಚಾಯ್ತಿ-15, ಆಲೂರು ಪಟ್ಟಣ ಪಂಚಾಯ್ತಿ-11. ಒಟ್ಟು 309 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚುನಾವಣೆ ನಡೆಸಲು ಅಗತ್ಯವಿರುವ ವಿದ್ಯುನ್ಮಾನ ಮತಯಂತ್ರಗಳ ಪ್ರಥಮ ಹಂತದ ಪರಿಶೀಲನೆ ಮುಗಿದಿದ್ದು, ಇವುಗಳನ್ನು ಉಪಯೋಗಿಸಲು ತರಬೇತಿ ನೀಡಲು ಮಾಸ್ಟರ್ ಟ್ರೈನರ್ ನೇಮಕ ಮಾಡಲಾಗುವುದು. ಮತದಾನದ ನಂತರ ಎಣಿಕೆ ಕಾರ್ಯ 11-3-2013 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯುವುದು. ಪೊಲೀಸ್ ಇಲಾಖೆ ಸಹಮತದ ಮೇರೆಗೆ ಎಣಿಕೆ ಏರ್ಪಾಡುಗಳನ್ನು ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

