ಹಾಸನ

ಅಭ್ಯರ್ಥಿ ಆಯ್ಕೆ: ಮುಖಂಡರಿಗೆ ತಲೆನೋವು

Published On :

-ಪಿ.ಶಾಂತಕುಮಾರ್
ಅರಸೀಕೆರೆ: ಪುರಸಭೆ ಚುನಾವಣೆಯ ಕಾವು ದಿನದಿನಕ್ಕೆ ಏರುತ್ತಿದ್ದು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದರೆ, ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳು ಹಾಗೂ ಮುಖಂಡರ ಪಾಲಿಗೆ ಅಭ್ಯರ್ಥಿಗಳ ಆಯ್ಕೆಯಂತೂ ತಲೆನೋವಾಗಿ ಪರಿಣಮಿಸಿದೆ.
ಪಟ್ಟಣ ಪುರಸಭೆಯಲ್ಲಿ 27 ವಾರ್ಡ್‌ಗಳಿದ್ದು  2007ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್  22 ಸ್ಥಾನ ಗಳಿಸಿ ಅಧಿಕಾರ ಚುಕ್ಕಾಣಿ ಹಿಡಿದು 5 ವರ್ಷಗಳಲ್ಲಿ 7 ಮಂದಿ ಅಧ್ಯಕ್ಷರನ್ನಾಗಿ ಮಾಡಿದ ಕೀರ್ತಿಗೆ ಪಾತ್ರವಾಗಿದೆ. ಜೆಡಿಎಸ್‌ನ ಅಂದಿನ ಗೆಲುವಿನ ಹಿಂದೆ ಶಾಸಕ ಕೆ.ಎಂ.ಶಿವಲಿಂಗೇಗೌಡರ ಅವಿರತ ಹೋರಾಟ ಮತ್ತು ಅಬಕಾರಿ ಉದ್ಯಮಿ, ದಾನಿ ಜೆ.ಪಿ.ಜಯಣ್ಣ ಹಾಗೂ ಪಟ್ಟಣದಲ್ಲಿ ಬಾರಿ ಜನಪ್ರಿಯತೆ ಹೊಂದಿದ್ದ ಬಿ.ಎನ್.ವಿದ್ಯಾಧರ ಅವರ ಶ್ರಮವಿತ್ತು. ಆದರೆ ಈಗ ಜೆ.ಪಿ.ಜಯಣ್ಣ  ಕಾಂಗ್ರೆಸ್ ಸೇರಿದ್ದಾರೆ ಹಾಗೂ ಬಿ.ಎನ್.ವಿದ್ಯಾಧರ  ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ.
ಮನವೊಲಿಸುವ ಪ್ರಯತ್ನ:  ಬಿ.ಎನ್.ವಿದ್ಯಾಧರ ಯಾವುದಾದರೂ ಪಕ್ಷ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಆ ಪಕ್ಷಕ್ಕೆ ಬಲ ಬರುತ್ತದೆ ಎಂದು ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿ ಸಫಲವಾಗಿದೆ. ಅವರೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ 11 ನೇ ವಾರ್ಡಿನಿಂದ ಸ್ಪರ್ಧೆಗಿಳಿಯುತ್ತಿದ್ದಾರೆ.
ಪ್ರಸ್ತುತ ಎಲ್ಲಾ ಪಕ್ಷಗಳಲ್ಲಿಯೂ ಪಕ್ಷಾಂತರ ಹಾವಳಿ ಮುಂದುವರೆದಿದ್ದು, ಜೆಡಿಎಸ್‌ಗೆ ಬಂಡಾಯದ ಆತಂಕದ ಕಾರ್ಮೋಡ ಕವಿದಿದೆ. ಇದನ್ನು ಸಮರ್ಥವಾಗಿ ನಿಭಾಯಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸುವ ರಾಜಕೀಯ ಚಾಣಾಕ್ಷತನ ಈ ಚುನಾವಣೆಯಲ್ಲಿ ನಡೆಯುವುದೇ ಎಂಬುದು ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾಧ್ಯಕ್ಷ ಬಿ.ಶಿವರಾಂ ಈಗಾಗಲೇ ಕ್ಷೇತ್ರಾದ್ಯಂತ ಪ್ರವಾಸ ನಡೆಸಿ ಚುನಾವಣಾ ಅಖಾಡಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ. ಇದು ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಪಟ್ಟಿ ಹೆಚ್ಚಾಗಲು ಕಾರಣವಾಗಲಿದೆ. ಅಲ್ಲದೆ ಜೆ.ಪಿ.ಜಯಣ್ಣನವರ ಕಾರ್ಯತಂತ್ರ ಕಾಂಗ್ರೆಸ್‌ಗೆ ವರದಾನವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ.
ಯಡಿಯೂರಪ್ಪನವರಿಲ್ಲದ ಬಿಜೆಪಿ ಸ್ಥಿತಿ ಚಿಂತಾಜನಕವಾಗಿದ್ದು, ಕೇವಲ ನಾಲ್ಕೈದು ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳು ಸ್ಪರ್ಧೆಗಿಳಿಯುವ ಉತ್ಸಾಹದಲ್ಲಿದ್ದರೆ, ಹಲವಾರು ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ್ದ ಕಾರ್ಯಕರ್ತರೇ ವಿವಿಧ ಪಕ್ಷಗಳಲ್ಲಿ ಹಂಚಿಹೋಗಿದ್ದು ಇತರೆ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಬಾಗಿಲು ಕಾಯುತ್ತಿರುವುದು ನೋವಿನ ಸಂಗತಿಯಾಗಿದೆ.

ಚಿತ್ರನಟ ದೊಡ್ಡಣ್ಣ ಸೇರಿದಂತೆ...
ಕೆಜೆಪಿಯಲ್ಲಿ ಅಭ್ಯರ್ಥಿಗಳ ಪೈಪೋಟಿ ಮತ್ತಷ್ಟು ಹೆಚ್ಚಿದ್ದು ಡಾ.ಲೋಕೇಶ್, ಜಿಪಂ ಮಾಜಿ ಅಧ್ಯಕ್ಷ ಜಿ.ಎಸ್.ಗುರುಸಿದ್ದಪ್ಪ, ಮಂಡಿವರ್ತಕ ಕೆ.ವಿ.ನಿರ್ವಾಣಸ್ವಾಮಿ, ಗೊಲ್ಲರಹಳ್ಳಿ ವಾಸು, ಹುಲ್ಲೇಕೆರೆ ಕುಮಾರ್, ಭೋಜನಾಯ್ಕ್, ಇದ್ರೀಸ್, ಸಲೀಂ ಹಾಗೂ ಚಿತ್ರನಟ ದೊಡ್ಡಣ್ಣ ಸೇರಿದಂತೆ ಇನ್ನಿತರ ಮುಖಂಡರು 27 ವಾರ್ಡ್‌ಗಳಲ್ಲಿಯೂ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕೆಂಬ ಸಂಕಲ್ಪದಿಂದ ಒಗ್ಗಟ್ಟಿನ ಮಂತ್ರ ಜಪಿಸತೊಡಗಿದ್ದಾರೆ. ಈ ಮೂರು ಪಕ್ಷಗಳ ಪೈಪೋಟಿಯಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬುದು ಅಭ್ಯರ್ಥಿ ಆಯ್ಕೆಯ ನಂತರವಷ್ಟೇ ಗೊತ್ತಾಗಲಿದೆ.

ನಗರಸಭೆ ಚುನಾವಣೆ: ನಾಮಪತ್ರಗಳ ಸುರಿಮಳೆ
ಹಾಸನ: ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಸಮೀಪಿಸುತ್ತಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಆಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ನಗರಸಭೆ ಚುನಾವಣೆಗೆ ಒಂದೊಂದು ವಾರ್ಡ್‌ಗಳಿಂದ ಮೂರ್ನಾಲ್ಕು ಆಕಾಂಕ್ಷಿಗಳು ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದಾರೆ. ಫೆ.23 ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುವುದರಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಲು ಮುಗಿ ಬಿದ್ದಿದ್ದರು. ನಗರ ಸಭೆ ಚುನಾವಣೆಗೆ 4ನೇ ವಾರ್ಡ್‌ನಿಂದ ಜೆಡಿಎಸ್‌ನ ನಾಲ್ವರು ಆಕಾಂಕ್ಷಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಗುರುವಾರ ಲೀಲಾವತಿ ವಾಸುದೇವ್, ಗೌರಮ್ಮ ಅಪ್ಪಣ್ಣ, ಚಂದ್ರಕಲಾ ಎನ್.ಆರ್.ದೊರೆಸ್ವಾಮಿ ಮತ್ತು ಉಷಾ ಶಾಂತಕುಮಾರ್ ಅವರು ಜೆಡಿಎಸ್ ಆಕಾಂಕ್ಷಿಗಳಾಗಿದ್ದು, ನಾಲ್ವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.  13ನೇ ವಾರ್ಡ್ ಗೆ ಸ್ವತಂತ್ರ ಅಭ್ಯರ್ಥಿಯಾಗಿ ಪಾರ್ವತಿ, ಆದೇ ರೀತಿ ಮಾಜಿ ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್ ನಾಮಪತ್ರ ಸಲ್ಲಿಸಿದ್ದಾರೆ.

ನಿಷ್ಠರಿಗೇ ಬಿಜೆಪಿ ಟಿಕೆಟ್: ತಾ. ಅಧ್ಯಕ್ಷ ಧರ್ಮರಾಜ್ ಸ್ಪಷ್ಟನೆ
ಸಕಲೇಶಪುರ: ಗೆಲ್ಲುವ ಸಾಧ್ಯತೆಯಿರುವ ಹಾಗೂ ನಿಷ್ಠಾವಂತ ವ್ಯಕ್ತಿಗಳಿಗೆ ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಾಗಿ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮರಾಜ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು 50 ಕೋಟಿ ರು. ರಸ್ತೆ ಕಾಮಗಾರಿಗೆ ಬಿಡುಗಡೆ ಗೊಳಿಸಿದ್ದಲ್ಲದೇ ಹಲವಾರು ಯೋಚನೆಗಳು ಶಾಸಕರ ಮೂಲಕ ಹಾಗೂ ಪಕ್ಷದ ಸಲಹೆ ಮೇರೆಗೆ ನೀಡಿದ್ದರಿಂದ ಈ ಬಾರಿ ಸಕಲೇಶಪುರ ಪುರಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ದೊರಕುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು. ಜಿಲ್ಲಾ ಕಾರ್ಯದರ್ಶಿ ದೇವರಾಜ್ ಮಾತನಾಡಿ, ಜಿಲ್ಲೆಯ ಸ್ಧಳಿಯ ಸಂಸ್ಧೆಗಳ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ. ಪಕ್ಷಕ್ಕೆ ಬದ್ಧರಾಗಿ ಯಾವುದೇ ಅವ್ಯವಹಾರ ನಡೆಸುವುದಿಲ್ಲ ಎಂದು ಪ್ರಮಾಣ ವಚನಕ್ಕೆ ಸಹಿ ಮಾಡಿಕೊಡಬೇಕೆಂದು ಷರತ್ತು ವಿಧಿಸಲಾಗಿದೆ ಎಂದರು.
ತಾ. ಪ್ರಧಾನ ಕಾರ್ಯದರ್ಶಿ ರಾಜಕುಮಾರ್, ನಗರ ಘಟಕ ಅಧ್ಯಕ್ಷ ದಯಾನಂದ್, ಮಾಸವಳ್ಳಿ ಚಂದ್ರು  ಇದ್ದರು.

ಸಕಲೇಶಪುರ: ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ
ಸಕಲೇಶಪುರ: ಇಲ್ಲಿನ ಪುರಸಭೆ ಚುನಾವಣಾ ಟೆಕೆಟ್‌ಗಾಗಿ ಆಕಾಂಕ್ಷಿಗಳು ಹೊಡೆದಾಡಿದ ಘಟನೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದಿದೆ.
ಪುರಸಭೆಯ 7 ನೇ ವಾರ್ಡ್‌ನಿಂದ ಸ್ಪರ್ಧಾಕಾಂಕ್ಷಿ ಸಣ್ಣಸ್ವಾಮಿ ಬೆಂಬಲಿಗ ಪೇಪರ್ ಮಂಜು ಹಾಗೂ ವೈ.ಪಿ.ರಾಜೇಗೌಡರ ಬೆಂಬಲಿಗ ಕಾಳಿಂಗಪ್ಪ ನಡುವೆ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸಿದ್ದರು. ಬಿ ಫಾರ್ಮ್ ಹಂಚಿಕೆಯ ವಿಚಾರವಾಗಿ ಕಚೇರಿಯಲ್ಲಿ ಆಕಾಂಕ್ಷಿಗಳ ದಂಡು ನೆರೆದಿತ್ತು.
 ಈ ಸಂದರ್ಭದಲ್ಲಿ ಏಳನೇ ವಾರ್ಡ್ ಬಿ.ಫಾರ್ಮ್ ಹಂಚಿಕೆ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾಳಿಂಗಪ್ಪನವರ ಪರವಾಗಿ ಒಲವು ತಳೆದಿದ್ದಾರೆ ಎಂಬ ವಿಚಾರ ಹರಡಿ, ಗದ್ದಲ ಏರ್ಪಟ್ಟು, ಬೆಂಬಲಿಗರು ಪರಸ್ಪರ ತಳ್ಳಾಟ ಹಾಗೂ ಹೊಡೆದಾಟ ನಡೆಸಿದರು.
ಇದರಿಂದ ಪರಸ್ಥಿತಿ ವಿಕೋಪಕ್ಕೆ ತಿರುಗಿತು.
ಈ ವೇಳೆಗೆ ಪೊಲೀಸರು ಮಧ್ಯ ಪ್ರವೇಶಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.
7 ನೇ ವಾರ್ಡ್‌ನ ಟಿಕೆಟ್ ಹಂಚಿಕೆ ವಿಚಾರವನ್ನು ಸದ್ಯ ಜಿಲ್ಲಾ ಸಮಿತಿಗೆ ವಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.