'ಜಾಗತಿಕ ಕಬಂಧ ಬಾಹುವಿಗೆ ಶೈಕ್ಷಣಿಕ ಜಗತ್ತು'
ಮೈಸೂರು: ಶೈಕ್ಷಣಿಕ ಜಗತ್ತು ಜಾಗತಿಕ ಕಬಂಧ ಬಾಹುವಿಗೆ ಒಳಗಾಗುತ್ತಿದೆ ಎಂದು ಹಿರಿಯ ವಿದ್ವಾಂಸ ಹಾಗೂ ಸಂಶೋಧಕ ಪ್ರೊ. ಹಂಪನಾ ವಿಷಾದಿಸಿದರು.
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಪ್ರೊ. ಕೆ.ಎಸ್. ರಂಗಪ್ಪ ಅಭಿನಂದನಾ ಸಮಿತಿಯು ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿತರನ್ನು ಅಭಿನಂದಿಸಿ ಅವರು ಮಾತನಾಡಿದರು.
ಜಾಗತಿಕ ಕಬಂಧಬಾಹು ಶೈಕ್ಷಣಿಕ ವ್ಯವಸ್ಥೆಯತ್ತ ಚಾಚಿರುವ ಈ ಸಂದರ್ಭದಲ್ಲಿ ಶಿಕ್ಷಣದ ಪರ್ವಕಾಲ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಕುಲಪತಿಗಳ ಪಾತ್ರ ಬಹುಮುಖ್ಯ. ಈಗಾಗಲೇ ಮುಕ್ತ ವಿವಿ ಪ್ರಗತಿಗೆ ಕೊಡುಗೆ ನೀಡಿರುವ ದಕ್ಷ ಆಡಳಿತಗಾರ, ಜ್ಞಾನಿ ಹಾಗೂ ವಿಜ್ಞಾನಿಯಾಗಿ ಪ್ರಸಿದ್ಧಿಯಾಗಿರುವ ಪ್ರೊ. ರಂಗಪ್ಪ ಅವರ ಬಗ್ಗೆ ಮೈಸೂರು ವಿವಿಯ ಅಭಿವೃದ್ಧಿಯ ಕುರಿತು ತುಂಬ ನೀರಿಕ್ಷೆಗಳಿವೆ ಎಂದು ಅವರು ಆಶಿಸಿದರು.
ಮಿತಿ ಇರಲಿ: ಸಾಮೂಹಿಕ ವಿವಾಹದಂತೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ಇದರಿಂದಾಗಿ ಡಿ.ಲಿಟ್ ಪದವಿಯ ಘನತೆ ಹಾಗೂ ಮೌಲ್ಯ ಕ್ಷೀಣಿಸುತ್ತಿದೆ. ಆದ್ದರಿಂದ ಯಾವುದೇ ರಾಜಕೀಯ ಒತ್ತಡಗಳು ಬಂದರೂ ಅದರ ಆಮಿಷಕ್ಕೆ ಒಳಗಾಗದೆ ಪ್ರೊ. ರಂಗಪ್ಪ ಅವರು ಇತಿಮಿತಿಯಲ್ಲಿ ಡಾಕ್ಟರೇಟ್ ಪದವಿ ನೀಡುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹಾಗೂ ಅವರ ಪತ್ನಿ ಪೂರ್ಣಿಮಾದೇವಿ ರಂಗಪ್ಪ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಬೆಳ್ಳಿಯ ಗಣೇಶ ವಿಗ್ರಹ ನೀಡಿ ಸನ್ಮಾನಿಸಲಾಯಿತು.
ಪ್ರೊ. ಕೆಎಸ್‌ಆರ್ ಅವರ ಬದುಕು- ಬರಹ ಕುರಿತು ಲೇಖಕ ಸುಧಾಕರ ಹೊಸಳ್ಳಿ ರಚಿಸಿರುವ ಹಾರ್ಡ್ ಆ್ಯಂಡ್ ಡಿಸಿಸಿವ್ ಜರ್ನಿ ಫ್ರಮ್ ಕಂಚುಗಾರಕೊಪ್ಪಲ್ ಟು ಕ್ರಾಫರ್ಡ್ ಹಾಲ್ ಹಾಗೂ ಸಂಪಾದಿತ ಅಭಿನಂದನಾ ಕೃತಿಯನ್ನು ಮಂಡ್ಯದ ಪಿಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಚ್.ಜಿ. ಚೌಡಯ್ಯ ಲೋಕಾರ್ಪಣೆಗೊಳಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಸಾನ್ನಿಧ್ಯ ವಹಿಸಿದ್ದರು. ಪ್ರೊ. ದೇಜಗೌ ಮುಖ್ಯ ಅತಿಥಿಯಾಗಿದ್ದರು. ಸಮಿತಿಯ ಗೌರವಾಧ್ಯಕ್ಷ ಆರ್. ವಾಸುದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ. ಸಿ. ನಾಗಣ್ಣ ನಿಪರೂಪಿಸಿದರು.
ಇದಕ್ಕೂ ಮುನ್ನ ಗಣ್ಯರನ್ನು ಕಲಾಮೇಳದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

