ಮೋದಿ ಪ್ರಧಾನಿಯಾಗಲು ಬಿಜೆಪಿ ಬೆಂಬಲಿಸಿ
ಮೈಸೂರು: ಅಪ್ರತಿಮ ದೇಶಪ್ರೇಮಿ ಮುಂದಿನ ಪ್ರಧಾನಿ ಆಗಬೇಕಿದ್ದರೆ ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ಕುಮಾರ್ ಹೇಳಿದರು.
ಮೈಸೂರಿನ ಗೋವಿಂದರಾವ್ ಸ್ಮಾರಕ ಭವನದಲ್ಲಿ ಗುರುವಾರ ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಏರ್ಪಡಿಸಿದ್ದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಸಚಿವ ಸುರೇಶ್ಕುಮಾರ್ ಅವರ ಪ್ರಶ್ನೆಗೆ ಕಾರ್ಯಕರ್ತರು ಮೋದಿ ಎಂದು ಕೂಗಿದರು. ಈ ದೇಶದಲ್ಲಿ ಕೆಲವು ವರ್ಷಗಳಿಂದ ನಾಯಕತ್ವ ಇಲ್ಲದವರು ಪ್ರಧಾನಿ ಆಗುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಷ್ಟ್ರದ ಅಪ್ರತಿಮ ದೇಶಪ್ರೇಮಿ ಪ್ರಧಾನಿ ಆಗಬೇಕಿದ್ದರೆ ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಅಧಿಕಾರ ಹಿಡಿಯಬೇಕು ಎಂದು ಸಚಿವರು ಮನವಿ ಮಾಡಿದರು.
ಈ ಚುನಾವಣೆ ನಮಗೆ ಕ್ವಾರ್ಟರ್ ಫೈನಲ್. ರಾಜ್ಯ ವಿಧಾನಸಭಾ ಚುನಾವಣೆ ಸೆಮಿಫೈನಲ್ ಮತ್ತು 2014 ಅಥವಾ ಅದಕ್ಕೂ ಮುನ್ನ ಎದುರಾಗುವ ಲೋಕಸಭಾ ಚುನಾವಣೆ ಫೈನಲ್ ಇದ್ದಂತೆ. ಆದ್ದರಿಂದ ನಾವು ಕ್ವಾರ್ಟರ್ ಫೈನಲ್ನಲ್ಲಿ ಉತ್ತಮ ಮೊತ್ತ ಕಲೆ ಹಾಕಬೇಕು ಎಂದರು.
ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಬಂದು ಮತ ಚಲಾಯಿಸುತ್ತಾರೆ. ಆದರೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದಿಲ್ಲ. ವರ್ಷವಿಡಿ ರಾಜ್ಯ ರಾಜಕೀಯದ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆಸುತ್ತಾರೆ. ಆದರೆ, ಚುನಾವಣೆ ದಿನ ಮನೆಯಿಂದ ಹೊರಗೆ ಬರುವುದಿಲ್ಲ. ಆದ್ದರಿಂದ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಅರಿವು ಮೂಡಿಸಬೇಕು. ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಶೇ. 60 ರಿಂದ 65ರಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅಭ್ಯರ್ಥಿಗಳಿಗೆ ಗೆಲ್ಲುವ ವಿಶ್ವಾಸ ಇರಬೇಕು. ಆದರೆ, ಅತಿಯಾದ ವಿಶ್ವಾಸ ಒಳ್ಳೆಯದಲ್ಲ. ಆದ್ದರಿಂದ ಪ್ರತಿಯೊಬ್ಬ ಮತದಾರರನ್ನೂ ಭೇಟಿ ಮಾಡಬೇಕು. ಪ್ರತಿಯೊಬ್ಬ ಅಭ್ಯರ್ಥಿಯೂ ದಿ. ವಿ.ಎಸ್. ಆಚಾರ್ಯ ಅವರನ್ನು ಆದರ್ಶವಾಗಿ ಪರಿಗಣಿಸಬೇಕು. 1968ರಲ್ಲಿಯೇ ಉಡುಪಿ ಪುರಸಭೆ ಅಧ್ಯಕ್ಷರಾಗಿ ಮಲ ಹೊರುವ ಪದ್ಧತಿ ರದ್ದುಪಡಿಸಿ ರಾಷ್ಟ್ರದ ಗಮನ ಸೆಳೆದರು. ಆ ಬಳಿಕ ಬಸವಲಿಂಗಪ್ಪ ಅವರು ರಾಜ್ಯದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿದ್ದಾಗಿ ಅವರು ವಿವರಿಸಿದರು.
ಕಳೆದ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ 1400 ಮಂದಿ ಆಯ್ಕೆಯಾಗಿದ್ದರು. ಆದರೆ, ಈ ಬಾರಿ 2800 ಮಂದಿ ಆಯ್ಕೆಯಾಗುವ ವಿಶ್ವಾಸ ಪಕ್ಷದ ಅಧ್ಯಕ್ಷರಲ್ಲಿದೆ. ರಾಜ್ಯ ಸರ್ಕಾರದ ಕೊಡುಗೆಗಳು ಮತ್ತು ಮೈಸೂರು ಪಾಲಿಕೆಗೆ ನೀಡಿದ ಅನುದಾನ ಮತ್ತು ಯೋಜನೆಗಳನ್ನು ಜನರಿಗೆ ತಿಳಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಇದು ಸರಿಯಾದ ಸಮಯ. ಪಾಲಿಕೆ 150ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹೊಸ ಬದಲಾವಣೆ ಕಾಣಬೇಕಿದೆ. ಅಧಿಕಾರ ಹಿಡಿದ ಮೇಲೆ ಅದು ಮುಳ್ಳಿನ ಹಾಸಿಗೆ ಆಗಲಿದೆ ಎಂಬುದನ್ನು ಸಹ ಅಭ್ಯರ್ಥಿಗಳು ಮರೆಯಬಾರದು. ಏಕೆಂದರೆ ಇದುವರೆಗೆ ಆಡಳಿತ ನಡೆಸಿದವರಿಗೆ ಎಡಿಬಿ ಸಾಲ ತೀರಿಸಲು ಆಗಿಲ್ಲ. ಆದ್ದರಿಂದ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ, ಬಿಜೆಪಿ ದೇವಾಂಗ, ಉಪ್ಪಾರ, ದೈವಜ್ಞ ಬ್ರಾಹ್ಮಣ, ರಾಜು ಕ್ಷತ್ರೀಯ, ಅರಸು ಮುಂತಾದ ಸಣ್ಣ ಜನಾಂಗಕ್ಕೆ ಅವಕಾಶ ನೀಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್, ಮಾಜಿ ಸದಸ್ಯ ತೋಂಟದಾರ್ಯ ಮಾತನಾಡಿದರು. ಮತ್ತೋರ್ವ ಸದಸ್ಯ ಗೋ. ಮಧುಸೂದನ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಎಸ್.ಡಿ. ಮಹೇಂದ್ರ, ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ಎಂಡಿಎ ಅಧ್ಯಕ್ಷ ಎಲ್. ನಾಗೇಂದ್ರ ರಾಜ್ಯ ಕಾರ್ಯದರ್ಶಿ ಗೋಪಿನಾಥ ರೆಡ್ಡಿ, ಪಕ್ಷದ ನಗರ ಅಧ್ಯಕ್ಷ ಶಿವಕುಮಾರ್, ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

