ಅರಸೀಕೆರೆ: ದೂರದರ್ಶನ ಮಾಧ್ಯಮಗಳ ಹಾವಳಿಯಿಂದಾಗಿ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ,ಜಾನಪದ ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟ ಉಂಟಾಗಿದ್ದು, ರಂಗಭೂಮಿ ಕಲಾವಿದರ ಬದುಕು ಅತಂತ್ರವಾಗಿದೆ ಎಂದು ಉದ್ಯಮಿ ಹಾಗೂ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಜೆ.ಪಿ.ಜಯಣ್ಣ ವಿಷಾದಿಸಿದರು.
ಪಟ್ಟಣದ ಬಾಲಕಿಯರ ಕಾಲೇಜು ಆವರಣದಲ್ಲಿ ಅರಸೀ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಟಿ.ವಿ.ಮಾಧ್ಯಮಗಳು ಸಾರ್ವಜನಿಕ ರಂಗವನ್ನು ಪ್ರವೇಶಿಸಿದ ನಂತರ ಗ್ರಾಮೀಣ ಜನರ ಬದುಕಿನ ಹಾಸು ಹೊಕ್ಕಾಗಿದ್ದ ಜಾನಪದ ಸಂಸ್ಕೃತಿ ಹಾಗೂ ನಾಟಕ ಕಲೆಗಳು ವಿನಾಶದ ಅಂಚಿಗೆ ತಲುಪಿವೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಟಕದಂತಹ ಪರಿಣಾಮಕಾರಿ ಮಾಧ್ಯಮಗಳು ಇಂದು ಅವನತಿಯ ಹಾದಿ ಹಿಡಿಯುತ್ತಿದ್ದು, ಇಂಥ ಸಂದರ್ಭದ ನಡುವೆಯೂ ಪಟ್ಟಣದಲ್ಲಿ ರಂಗರೂಪಕಗಳಂತಹ ಚಟುವಟಿಕೆಗಳನ್ನು ಏರ್ಪಡಿಸಿರುವುದು ಸಂತಸದ ಸಂಗತಿ. ಜನತೆ ಟಿ.ವಿ. ಸಂಸ್ಕೃತಿಯಿಂದ ಹೊರಬಂದು ಜಾನಪದ ರಂಗಕಲೆಗಳನ್ನು ಉಳಿಸಿ, ಬೆಳೆಸಿ, ಪೋಷಿಸುವ ಅಗತ್ಯವಿದೆ ಎಂದು ನುಡಿದರು. ಜಗತ್ತಿಗೆ ಭಾರತೀಯ ಸಂಸ್ಕೃತಿಯನ್ನು ಸಾರಿದ ಸ್ವಾಮಿ ವಿವೇಕಾನಂದರಂತಹ ಮಹಾಪುರುಷರ ಜೀವನ ಚರಿತ್ರೆಯನ್ನು ತಿಳಿಸುವ ನಾಟಕಗಳು ಕೇವಲ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಪ್ರದರ್ಶನಗೊಂಡರೆ ಸಾಲದು. ಮಕ್ಕಳಿಗೆ ಬಾಲ್ಯದಲ್ಲಿಯೇ ಮಹನೀಯರ ತತ್ವ, ಆದರ್ಶ, ಚಿಂತನೆಗಳನ್ನು ಪರಿಚಯಿಸುವ ಅಗತ್ಯವಿದ್ದು ಪೋಷಕರು ಈ ನಿಟ್ಟಿನಲ್ಲಿ ಜಾಗೃತಗೊಳ್ಳಬೇಕಿದೆ. ಭಾವಿ ಪ್ರಜೆಗಳನ್ನು ಸೃಷ್ಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದ್ದು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸ ಬೇಕಿದೆಯೆಂದು ಹೇಳಿದರು.
ರೋಟರಿ ಅಧ್ಯಕ್ಷ ಯೋಗೀಶಚಾರ್ ಮಾತನಾಡಿ, ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಚರಿತ್ರೆಯನ್ನು ಓದಿ ಅವರ ತತ್ವ, ಆದರ್ಶಗಳನ್ನು ಇಂದಿನ ಯುವಜನಾಂಗ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕರವೇ ತಾಲೂಕು ಅಧ್ಯಕ್ಷ ಹೇಮಂತ್‌ಕುಮಾರ್, ಡಾ.ಜಗದೀಶ್, ಉಪನ್ಯಾಸಕ ಬಿ.ಡಿ.ಕುಮಾರ್, ಅರಸೀ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ಇದ್ದರು.