ಹಾಸನ: ವೈಯಕ್ತಿಕ ಹಿತ ಸಾಧನೆಗಾಗಿ ಕೆಲ ಮಂತ್ರಿಗಳು ರಾಜಿನಾಮೆ ನೀಡಿದಾಕ್ಷಣ ರಾಜ್ಯ ಸರ್ಕಾರಕ್ಕೆ ಏನೂ ಅಪಾಯವಾಗದು. ಸಿಎಂ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸುತ್ತಾರೆ ಎಂಬ ವಿಶ್ವಾಸವನ್ನು ಮೂಡಿಗೆರೆ ಬಿಜೆಪಿ ಶಾಸಕ ಎಂ. ಪಿ. ಕುಮಾರಸ್ವಾಮಿ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರಗಾಲ ಭೀಕರವಾಗಿದ್ದರೂ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದು, ಮತದಾರರ ಸಂಕಷ್ಟ ಆಲಿಸಬೇಕಾದ ಶಾಸಕರೆ ರಾಜಿನಾಮೆ ನೀಡುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ವಿಷಾದನೀಯ. ಓಟು ಕೊಟ್ಟ ಮತದಾರರ ಎಂದಿಗೂ ಒಪ್ಪಲಾರ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ತಾವು ಕೆಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ರಾಜ್ಯದಲ್ಲಿ ಬರಗಾಲ ಇರುವುದರಿಂದ ಮಳೆಗಾಲ ಬರುವವರೆಗೂ ಚುನಾವಣೆ ನಡೆಸಬಾರದು ಎಂದು ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಶಾಸಕರು ಮನವಿ ಮಾಡಿದರು.