ಹಾಸನ: ನಗರದ ಹೈಟೆಕ್ ಬಸ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಮೇಲೆ ಬಸ್ ನುಗ್ಗಿದ ದುಷ್ಪರಿಣಾಮ ಶಾಲಾ ಬಾಲಕನೊಬ್ಬ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬುಧವಾರ ನಡೆದಿದೆ.
ಅಪಘಾತ ನಡೆಸಿದ ಬಸ್ ಚಾಲಕ ಪುನೀತ್ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದು, ಈ ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು, ವಿದ್ಯಾರ್ಥಿಗಳು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಉದ್ರಿಕ್ತ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಆಲೂರು ತಾಲೂಕಿನ ದೊಡ್ಡಕಣಗಾಲ್ ಗ್ರಾಮದ ರವಿ ಎಂಬುವರ ಪುತ್ರ ರಾಜೇಶ್ (13) ಎಂಬ ಬಾಲಕ ತನ್ನದಲ್ಲದ ತಪ್ಪಿಗೆ ಪ್ರಾಣತೆತ್ತ ದುರ್ದೈವಿ. ಘಟನೆಯಲ್ಲಿ ಇತರೆ ಮೂವರಿಗೆ ತೀವ್ರಗಾಯವಾಗಿದ್ದು, ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಸಾವನ್ನಪ್ಪಿದ ರಾಜೇಶ್ ಕೆಎಸ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ಶಾಲೆ ಮುಗಿಸಿಕೊಂಡು ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಇತರರು ತಮ್ಮ ತಮ್ಮ ಸ್ಥಳಕ್ಕೆ ತೆರಳಲು ಬಸ್‌ಗಾಗಿ ಕಾದು ಕುಳಿತಿದ್ದರು. ಆಗ ಕಂದಲಿ-ಭೈಯಲಹಳ್ಳಿ-ಅಗರೆ ಮಾರ್ಗವಾಗಿ ಸಂಚರಿಸುವ ಬಸ್ ಚಾಲಕ ಪುನೀತ್ ಅತೀ ವೇಗವಾಗಿ ಬಸ್‌ನ್ನು ನಿಲ್ದಾಣದ ಒಳಗೆ ಚಲಾಯಿಸಿಕೊಂಡು ಬಂದಿದ್ದಾನೆ. ನಿಲ್ದಾಣದ ಒಳಗೆ ಅತೀ ವೇಗವಾಗಿ ಬಸ್ ಚಾಲನೆ ಮಾಡಿ ಪ್ಲಾಟ್‌ಫಾರ್ಮನಲ್ಲಿ ನಿಲ್ಲಿಸಲು ಹೋಗಿದ್ದಾನೆ.
ಗಾಜಿನ ಕೊಠಡಿಗೆ ಡಿಕ್ಕಿ: ಚಾಲಕನ ನಿರ್ಲಕ್ಷ್ಯ ಹಾಗೂ ನಿಯಂತ್ರಣ ತಪ್ಪಿ ಪ್ಲಾಟ್‌ಫಾರ್ಮ ಮೇಲೆ ಬಸ್ ಚಲಿಸಿ, ಅಲ್ಲಿ ಕುಳಿತಿದ್ದ ಬಾಲಕ ರಾಜೇಶ್‌ನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮತ್ತೆ ಕೆಲವರಿಗೆ ತೀವ್ರವಾಗಿ ಗಾಯಗಳಾಗಿವೆ. ಪಕ್ಕದಲ್ಲೇ ಇದ್ದ ಗಾಜಿನ ಕೊಠಡಿಗೆ ಬಸ್ ಡಿಕ್ಕಿ ಹೊಡೆದು ಹೆಚ್ಚಿನ ಅನಾಹುತ ಸಂಭವಿಸಿದೆ. ಅಪಘಾತವಾಗಿ ಸುಮಾರು ಒಂದು ತಾಸುಗಳ ಕಾಲ ಬಾಲಕನ್ನು ಬದುಕಿಸಲು ಸಾರಿಗೆ ಸಂಸ್ಥೆಯವರು ಮುಂದಾಗದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಬಾಲಕನಿಗೆ ಅತಿಯಾದ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾನೆ. ಇದಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹುಡುಗಿಯರ ಮೆಚ್ಚಿಸಲು ಮನಸೋಇಚ್ಛೆ ಚಾಲನೆ: ಬಸ್ ಚಾಲಕ ಪುನೀತ್ ಹುಡುಗಿಯರನ್ನು ಕಂಡು ಬಸ್‌ನ್ನು ಮನಸೋಇಚ್ಛೆ ಚಲಾಯಿಸುತ್ತಿದ್ದ. ಆತ ಹುಡುಗಿಯರನ್ನು ಮೆಚ್ಚಿಸುವ ಸಲುವಾಗಿಯೇ ಬಸ್‌ನ್ನು ಅತೀ ವೇಗವಾಗಿ ಚಲಾಯಿಸುವುದನ್ನು ರೂಢಿಸಿಕೊಂಡಿದ್ದ. ಹಲವು ಬಾರಿ ಬಸ್‌ನ್ನು ನಿಧಾನವಾಗಿ ಚಾಲನೆ ಮಾಡುವಂತೆ ಸೂಚಿಸಲಾಗಿತ್ತು. ಆತ ಸಾರ್ವಜನಿಕರ ಮಾತು ಕೇಳದೆ ಅಧಿಕ ಪ್ರಸಂಗತನದಿಂದ ಮಾತನಾಡುತ್ತಿದ್ದ. ಈ ಹಿಂದೆ ಎರಡು ಮೂರು ಬಾರಿ ಈ ರೀತಿಯ ಅಪಘಾತ ಹಾಗೂ ಇತರೆ ಪ್ರಕರಣಗಳಿಗೆ ಒಳಗಾಗಿದ್ದ ಎಂದು ಆರೋಪಿಸಿದರು. ಸಾರಿಗೆ ಸಂಸ್ಥೆಯವರು ಚಾಲಕನ ಮೇಲೆ ಹಲವು ದೂರುಗಳಿದ್ದರೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಕರ್ತವ್ಯದಲ್ಲಿ ಮುಂದುವರೆಸಿದ್ದರು. ಹುಡುಗಿಯರನ್ನು ಮೆಚ್ಚಿಸುವುದಕ್ಕಾಗಿ ಬಸ್‌ನ್ನು ಯದ್ವಾತದ್ವವಾಗಿ ಚಲಾಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ. ಈಗ ಮುಗ್ಧ ಬಾಲಕನ ಪ್ರಾಣ ತೆಗೆದಿದ್ದಾನೆ. ಆದ್ದರಿಂದ ಆತನನ್ನು ಕೂಡಲೇ ಕೆಲಸದಿಂದ ಅಮಾನತು ಪಡಿಸಿ ಬಂಧಿಸಬೇಕು ಎಂದು ಜನತೆ ಆಗ್ರಹಿಸಿದರು.
ಇದೇ ವೇಳೆ ಆಕ್ರೋಶಗೊಂಡ ಸಾರ್ವಜನಿಕರು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಬಸ್ ಗ್ಲಾಸ್‌ನ್ನು ಪುಡಿ ಪುಡಿ ಮಾಡಿದರು. ಅಲ್ಲದೆ ನಿಲ್ದಾಣದಲ್ಲಿ ನಿಂತಿದ್ದ ಇತರೆ ಬಸ್‌ಗಳ ಮೇಲೂ ಕಲ್ಲು ತೂರಾಟ ನಡೆಸಿ ಗ್ಲಾಸ್ ಪುಡಿ ಪುಡಿಗೊಳಿಸಿದರು. ಬಿಗುವಿನ ವಾತಾವರಣ ಶಮನ ಮಾಡಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.