ಹಾಸನ

ಬಿಜೆಪಿ ಸಚಿವರೆಲ್ಲ ಭ್ರಷ್ಟರು: ಮಲ್ಲಿಗೆ ವೀರೇಶ್

Published On :

ಅರಕಲಗೂಡು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟವಾಗಿದ್ದು, ಈ ಸರ್ಕಾರದಲ್ಲಿರುವ ಸಚಿವರೆಲ್ಲರೂ ಭ್ರಷ್ಟರು ಎಂದು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ವೀರೇಶ್ ಆರೋಪಿಸಿದರು.
ಅವರು ತಾಲೂಕಿನ ರಾಮನಾಥಪುರದಲ್ಲಿ ಶ್ರೀ ಶಿವರುದ್ರಶೆಟ್ಟಿ ಕಲ್ಯಾಣ ಮಂಟಪದ ಅವರಣದಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ, ಕನ್ನಡಿಗರು ಹಣವನ್ನು ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ. ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ಆಶೋತ್ತರ ಈಡೇರಿಸುವಲ್ಲಿ ವಿಫಲವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕಕ್ಕೆ ಉಳಿಗಾಲವಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದರು.
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ. ಮುಂದೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಎಲ್ಲರೂ ಒಂದಾಗಿ ಕೆಲಸ ಮಾಡಿ. ತಾಲೂಕಿನಲ್ಲಿ ನಾನಾ ಕಾಮಗಾರಿಗಳನ್ನು ಉತ್ತಮ ರೀತಿ ಕೆಲಸ ಮಾಡಿರುವ ಶಾಸಕ ಎ.ಮಂಜು ಅವರನ್ನು ಮತ್ತೆ ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.  
ಕ್ಷೇತ್ರದ ಶಾಸಕ ಎ. ಮಂಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಕಲಗೂಡು ತಾಲೂಕಿನಲ್ಲಿ ವಿರೋಧ ಪಕ್ಷವಿದ್ದರೂ ನನ್ನ 5 ವರ್ಷದ ಅವಧಿಯಲ್ಲಿ 350 ಸಾವಿರ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಎತ್ತಿಕೊಂಡಿದ್ದೇವೆ. ಕಟ್ಟೇಪುರ ನಾಲೆ ಕಾಮಗಾರಿಗೆ 130 ಕೋಟಿ ಮಂಜೂರಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.
ಅಕ್ಷರದಾಸೋಹ, ಸ್ತ್ರೀ ಶಕ್ತಿ ಸಂಘಗಳನ್ನು ಪ್ರೋತ್ಸಾಹಿಸಿದ ಕಾಂಗ್ರೆಸ್ ಜನಾನುರಾಗಿ ಪಕ್ಷವಾಗಿದೆ. ಜೆಡಿಎಸ್ ಅಧಿಕಾರದ ಅವಧಿಯಲ್ಲಿ ಹಾಸನ ಜಿಲ್ಲೆಯ ರಸ್ತೆಗಳನ್ನು ಉದ್ಧಾರ ಮಾಡಲ್ಲಿಲ್ಲ. ಈಗ ಇವರಿಗೆ ಮತದಾರರು ತಕ್ಕ ಉತ್ತರ ನೀಡಬೇಕೆಂದು ಜನರಲ್ಲಿ ಮನವಿ ಮಾಡಿದರು.
ಒಗ್ಗಟ್ಟಿರಲಿ: ತಾಲೂಕು ಕುರುಬರ ಸಂಘದ ಅಧ್ಯಕ್ಷ ತಿಪ್ಪೇಗೌಡ ಮಾತನಾಡಿ, ಬರಲಿರುವ ಚುನಾವಣೆಗೆ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಶ್ರಮಿಸಿದಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂದೇಹ ಬೇಡ. ಬರಲಿರುವ ಚುನಾವಣೆಯಲ್ಲಿ ಪಕ್ಷ ಸಂಘಟಿತರಾಗಿ ತಮ್ಮ ಕ್ಷೇತ್ರದ ಶಾಸಕರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ನಾಯಕರು ಎನಿಸಿಕೊಂಡವರು ಪಕ್ಷದ ಎಳ್ಗೆಗೆ ಶ್ರಮಿಸಬೇಕಿದೆ. ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡಿ ಸತ್ಯಾಸತ್ಯತೆ ಪರಿಗಣಿಸಿ ಪಕ್ಷದ ಬಲವರ್ಧನೆಗೆ ಮುಂದಾದರೆ ಸೋಲು ಎಂಬುವುದಿರುವುದಿಲ್ಲ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಗೆರೆ ಭೈರೇಗೌಡ, ಮಾಜಿ ಜಿಪಂ ಸದಸ್ಯ ಪುನೀತ ಕೃಷ್ಣಮೂರ್ತಿ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ ಯೋಗಣ್ಣ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಜಿ.ಸಿ.ಮಂಜೇಗೌಡ ಹಾಗೂ ಹೋಬಳಿ ಅಧ್ಯಕ್ಷೆ ಲಕ್ಷ್ಮಿಭರತ್, ಗ್ರಾಪಂ ಅಧ್ಯಕ್ಷೆ ಸರಸ್ವತಿ, ಪಿ ಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಸ್.ಎಂ.ಮಲ್ಲೇಶ್, ಕಾವೇರಿ ನೀರು ನಿಗಮದ ಅಧ್ಯಕ್ಷ ಚೌಡೇಗೌಡ, ಸದಸ್ಯ ನಿಂಗೇಗೌಡ, ಪುಟ್ಟಮ್ಮ ಸೋಪುರ, ಶ್ರೀಶೈಲ ಹಾಗೂ ಮುಂತಾದವರು ಭಾಗವಹಿಸಿದ್ದರು.
ಕಾಂಗ್ರೆಸ್‌ಗೆ ಸೇರ್ಪಡೆ: ರಾಮನಾಥಪುರದ ಶ್ರೀ ಶಿವರುದ್ರಶೆಟ್ಟಿ ಕಲ್ಯಾಣ ಮಂಟಪದ ಅವರಣದಲ್ಲಿ ನಡೆದ ಹೋಬಳಿ ಕಾಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕ್ಷೇತ್ರದ ಶಾಸಕ ಎ. ಮಂಜು ಅವರ ಸಮ್ಮುಖದಲ್ಲಿ ಕುರುಬರ ಸಂಘದ ಮುಖಂಡ ಐಯ್ಯಣ್ಣಗೌಡ, ದಿವಾಕರ, ತಾಲೂಕು ಬಿಜೆಪಿಯ ಯುವ ಘಟಕದ ಮಾಜಿ ಅಧ್ಯಕ್ಷ ಮಲ್ಲಾಪುರ ಗುರುಮಲ್ಲೇಶ್ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.