ದಲಿತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಹಾಸನ: ದಲಿತರ ಮೇಲೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ನಿಡಿಗೆರೆ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾಕಾರರು ಕೆಲ ಸಮಯ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ನಿಡಿಗೆರೆ ಗ್ರಾಮದಲ್ಲಿ ಪರಿಶಿಷ್ಟ ವರ್ಗದ 35 ಬಡ ಕುಟುಂಬ ವಾಸವಾಗಿವೆ. ಗ್ರಾಮದ ಮೇಲ್ವರ್ಗಕ್ಕೆ ಸೇರಿದ ಹಾಗೂ ಆರ್ಥಿಕ ಹಾಗೂ ರಾಜಕೀಯವಾಗಿ ಬಲಿಷ್ಠರಾಗಿದ್ದು, ಹಿಂದಿನಿಂದಲೂ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಮಾನಸಿಕ, ದೈಹಿಕವಾಗಿ ಗ್ರಾಮದಲ್ಲಿ ದಲಿತರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅಲವತ್ತುಕೊಂಡರು.
ಕಳೆದ ಫೆ.23ರಂದು ರಾತ್ರಿ 8.30ರಲ್ಲಿ ಧರ್ಮಶೇಖರ್ ಎಂಬ ದಲಿತ ಯುವಕ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ಮೇಲ್ವರ್ಗದವರಾದ ರಾಮೇಗೌಡ, ನೀಲಕಂಠ, ಮಂಜುನಾಥ್, ಮಹೇಂದ್ರ, ಬೋಬಣ್ಣ, ಸುರೇಶ್, ಸತೀಶ್, ರಘು, ಶಿವಣ್ಣ, ಜಗದೀಶ್, ನಿಂಗರಾಜ್, ರವಿ, ಮಂಜುನಾಥ್ ಮತ್ತು ಕುಮಾರ ಎಂಬುವವರು, ಅಂಗಡಿಗೆ ಏಕೆ ಬಂದೆ ಎಂದು ಜಾತಿ ನಿಂದನೆ ಮಾಡಿ, ನಿಮ್ಮ ವರ್ಗಕ್ಕೆ ಸೇರಿದವರು ಊರಿನ ಒಳಗೆ ಬರಕೂಡದು ಎಂದು ಬೆದರಿಸಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಇತ್ತೀಚೆಗೆ ದಲಿತರು ಊರಿನ ಒಳಗೆ ಬರುವುದು ಹೆಚ್ಚಾಗಿ ಅಪವಿತ್ರತೆ ಮಾಡಿದ್ದೀರಿ ಎಂದು ಹಲ್ಲೆ ಮಾಡಿದ್ದಾರೆ. ಈ ವಿಚಾರ ಗ್ರಾಮದಲ್ಲಿ ಹರಡುತ್ತಿದ್ದಂತೆ ಜಗಳ ಬಿಡಿಸಲು ಬಂದಿದ್ದ ಅಜಯ್, ಗಿರೀಶ್, ಮಂಜುನಾಥ್ ಎಂಬುವರ ಹಲ್ಲೆ ಮಾಡಿದ್ದಾರೆ. ಮೇಲ್ವರ್ಗದ ಸುರೇಶ್ ಎಂಬಾತ ಈತನ ತಲೆಗೆ ಹಲ್ಲೆ ಮಾಡಿದ್ದು, ತೀವ್ರ ಪೆಟ್ಟು ಬಿದ್ದಿದೆ ಎಂದು ಆರೋಪಿಸಿದರು.
ಮೇಲ್ವರ್ಗದವರು ದಲಿತ ಯುವಕ ಧರ್ಮಶೇಖರ್‌ಗೆ ಹಲ್ಲೆ ಮಾಡಿದ್ದಲ್ಲದೆ, ಆತನ ಬಟ್ಟೆ ಬಿಚ್ಚಿಸಿ ಮೇಲ್ವರ್ಗದ ನೀಲಕಂಠನ ಕಾಲಿಗೆ ಬೀಳಿಸಿದ್ದಾರೆ. ಹಲ್ಲೆಗೊಳಗಾದ ದಲಿತ ಯುವಕರನ್ನು ಕೂಡಲೇ ಸಕಲೇಶಪುರ ಸರ್ಕಾರ ಆಸ್ಪತ್ರೆಗೆ ದಾಖಲಿಸಿ ಯಸಳೂರು ಪೊಲೀಸರಿಗೆ ಘಟನೆ ತಿಳಿಸಲಾಯಿತು. ಆದರೆ ಪೊಲೀಸರು ಸ್ಥಳಕ್ಕೆ ಅಂದು ಬರದೆ ಮರುದಿನ ಬಂದರು.
ಎಎಸ್‌ಐ ಸೋಮಶೇಖರಯ್ಯ ಮತ್ತು ಮುಖ್ಯ ಪೇದೆ ಕುಮಾರನಾಯಕ ಗ್ರಾಮಕ್ಕೆ ಬಂದು ಜೀಪಿನಲ್ಲಿ ಹಲ್ಲೆಗೆ ಒಳಗಾದ ಯುವಕರಿಂದ ಸರಿಯಾಗಿ ಮಾಹಿತಿ ಪಡೆಯದೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ತಿರಸ್ಕರಿಸಿ ಆಸ್ಪತ್ರೆಯಿಂದ ಹೋದರು. ತಾವು ಬಂದಿದ್ದಕ್ಕೆ ವೆಚ್ಚ ಬರಿಸುವಂತೆ ಪೀಡಿಸಿ 1 ಸಾವಿರ ರು.ಗಳನ್ನು ದೇವರಾಜ್ ಎಂಬುವರಿಂದ ಬಲವಂತವಾಗಿ ಪಡೆದು ಹೋಗಿದ್ದರು. ಘಟನೆ ನಡೆದ ದಿನ ರಾತ್ರಿ ದಲಿತ ಗೋವಿಂದರಾಜ್ ಊರಿನಲ್ಲಿ ಇಲ್ಲದ ಸಂದರ್ಭದಲ್ಲಿ ಇವರು ಹಾಗೂ ಹಲ್ಲೆಗೆ ಒಳಗಾದ ಯುವಕರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ಪೊಲೀಸರು ದಲಿತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಎಂದು ದೂರಿದರು.
ಹಾಗೆಯೇ ಊರಿನಿಂದ ದಲಿತರನ್ನು ಹೊರ ಹೋಗುವಂತೆ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಇರುವ ದಲಿತರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ನಮಗೆ ನ್ಯಾಯ ಕೊಡಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ದಲಿತ ಮುಖಂಡರಾದ ಗೋವಿಂದರಾಜು, ಧರ್ಮಶೇಖರ್, ದೇವರಾಜ್, ಅಜಯ್, ಗಿರೀಶ್, ಮಂಜುನಾಥ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

