ಹಾಸನ

ವಿರೋಧಿಗಳ ಕೆಸರೆರಚಾಟ ತಾರಕಕ್ಕೆ

Published On :

ಕಿರು ಕದನ ಎಂದೇ ಕರೆಯಬಹುದಾದ ಸ್ಥಳೀಯ ಸಂಸ್ಥೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಶನಿವಾರ ಸುದ್ದಿಗೋಷ್ಠಿ ನಡೆಸಿ ಆರೋಪ-ಪ್ರತ್ಯಾರೋಪ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿದರು.

ಜೆಡಿಎಸ್‌ಗೆ ಮತ್ತೆ ಅಧಿಕಾರ
ಹಾಸನ:
ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಕೆ.ಜವರೇಗೌಡ ಮಾತನಾಡಿ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ಚುನಾವಣೆಗೆ ಜೆಡಿಎಸ್ ಪಕ್ಷ ಸಂಪೂರ್ಣವಾಗಿ ಸಿದ್ದವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಉತ್ತಮ ಆಡಳಿತ ನಡೆಸಿದೆ. ಅದೇ ರೀತಿ ಈ ಬಾರಿಯೂ ಪೌರ ಚುನಾವಣೆಯಲ್ಲಿ ಜಯಗಳಿಸಿ ಮತ್ತೆ ಅಧಿಕಾರ ಹಿಡಿಯಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ವಿರೋಧ ಪಕ್ಷ ಕಾಂಗ್ರೆಸ್ ನವರು ಇಲ್ಲದ ಅಪಪ್ರಚಾರ ಉಂಟು ಮಾಡಿದ್ದು, ಒಂದು ವೇಳೆ ಈ ಅಪಪ್ರಚಾರ ನಿಜವಾದಲ್ಲಿ ಇದನ್ನು ಕಾಂಗ್ರೆಸ್ ಸಾಬೀತು ಪಡಿಸಲಿ ಅದಕ್ಕೆ ನಾವು ತಲೆ ಬಾಗುತ್ತೇವೆ ಎಂದರು. ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ಶಾಸಕರಾದ ಬಿ.ವಿ.ಕರೀಗೌಡ, ಕೆ.ಎಂ.ರಾಜೇಗೌಡ, ಎಸ್.ದ್ಯಾವೇಗೌಡ ಮತ್ತಿತರರು ಉಪಸ್ಥಿತರಿದ್ದರು.

'ಕೈ'ಗೆ ಅವಕಾಶ ಕೊಟ್ಟು ನೋಡಿ
ಹಾಸನ: 
ಕಳೆದ ಬಾರಿ ನಗರಸಭೆ ಅಧಿಕಾರಕ್ಕೆ ಬಂದ ಜೆಡಿಎಸ್ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಅಧಿಕಾರ ಹಿಡಿಯುವಂತೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ.ಮಹೇಶ್ ಮನವಿ ಮಾಡಿದರು. ಜೆಡಿಎಸ್ ನಗರಸಭೆ ಅಧಿಕಾರ ನಡೆಸಿದಾಗ ಪ್ರತಿ ವರ್ಷ ಕುಡಿಯುವ ನೀರಿಗೆ ರು. 2 ಕೋಟಿ ವೆಚ್ಚ ಮಾಡುತ್ತಿದ್ದರು. ಆದರೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದೆ ಉಲ್ಬಣಗೊಂಡಿದೆ ಎಂದು ಆರೋಪಿಸಿದರು. ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ಮಾಡದೆ ನಗರಸಭೆ ಹಿಂಭಾಗದಲ್ಲಿ ಕಸದ ರಾಶಿಯನ್ನೇ ನಿರ್ಮಾಣ ಮಾಡಿದ್ದಾರೆ. ರಸ್ತೆ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ನಿಧಿಯಿಂದ 24 ಕೋಟಿ ರು., 13ನೇ ಹಣಕಾಸು ಆಯೋಗದಿಂದ 2 ಕೋಟಿ ರು.ಗಳು ಹಾಗೂ ಪ್ರತಿವರ್ಷ ಬರುವಂತಹ ತೆರಿಗೆ ಹಣವನ್ನು ಸರಿಯಾಗಿ ಸದುಪಯೋಗ ಮಾಡದೆ ಜೆಡಿಎಸ್ ದುರುಪಯೋಗ ಪಡಿಸಿಕೊಂಡಿದೆ ಎಂದು ದೂರಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ವೆಂಕಟೇಗೌಡ ಹಾಗೂ ಇತರರು ಇದ್ದರು.

'ಈ ಬಾರಿ ಕಾಂಗ್ರೆಸ್ ಪರ ಅಲೆ'
ಚನ್ನರಾಯಪಟ್ಟಣ:
ಕೆಪಿಸಿಸಿ ಉಪಾಧ್ಯಕ್ಷ, ಹಿರಿಯ ಚಿತ್ರನಟ ಡಾ.ಅಂಬರೀಷ್ ಪಟ್ಟಣದಲ್ಲಿ ಶನಿವಾರ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಿದರು.
ಪಟ್ಟಣಕ್ಕೆ ಮಧ್ಯಾಹ್ನ ಆಗಮಿಸಿದ ಡಾ.ಅಂಬರೀಷ್ ಹಾಗೂ ಮೋಟಮ್ಮ ಅವರು ಪಟ್ಟಣದ 23ವಾರ್ಡ್‌ಗಳಿಗೆ ವಾಹನ ಮೂಲಕ ಮೆರವಣಿಗೆಯಲ್ಲಿ ತೆರಳಿ ಕಾಂಗ್ರೆಸ್ ಪರ ಮತ ಯಾಚಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅಂಬರೀಷ್, ರಾಜ್ಯದ ಜನತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಮತನೀಡಿ ಅವರಿಂದ ಪ್ರತಿಫಲ ಕಾಣದೆ ಬರೀ ಅವ್ಯವಹಾರ ನೋಡಿ ಬೇಸತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದೆ. ಪುರಸಭೆ ಹಾಗೂ ನಗರಸಭೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ ಎಂದರು.
ಬಿಜೆಪಿ ಬಗ್ಗೆ ಆಕ್ರೋಶ: ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಮತ ನೀಡಿದ ಜನತೆ ಬೇಸತ್ತಿದ್ದಾರೆ. ವಸ್ತುಗಳ ಬೆಲೆಯೇರಿಕೆ, ಪ್ರತಿದಿನ ಭ್ರಷ್ಟಾಚಾರದ ಸುದ್ದಿ ಕೇಳಿದ್ದಲ್ಲದೆ, ಮಂತ್ರಿಗಳ ಜೈಲು ಕಾಣುತ್ತಿರುವುದು ಬೇಸರ ತಂದಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕಿ ಮೋಟಮ್ಮ ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ರಾಜ್ಯದ ಮರ್ಯಾದೆ ತೆಗೆದಿವೆ. ರಾಜ್ಯವನ್ನಾಳಿದ ಮುಖ್ಯಮಂತ್ರಿಯೇ ಭ್ರಷ್ಟಾಚಾರದಲ್ಲಿ ತೊಡಗಿ ಜೈಲಿಗೆ ಹೋಗಿದ್ದಾರೆ ಎಂದು ಕಿಟಕಿಯಾಡಿದರು.
ಮಾಜಿ ಶಾಸಕ ಸಿ.ಎಸ್ ಪುಟ್ಟೇಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲಿತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಸ್ವಾಮಿ, ಚಂದ್ರೇಗೌಡ, ಕೆಪಿಸಿಸಿ ಸದಸ್ಯ ಕಬ್ಬಳಿ ರಂಗೇಗೌಡ, ವಿಜಯ್‌ಕುಮಾರ್, ಜಿಪಂ ಸದಸ್ಯ ನಂಜುಂಡೇಗೌಡ, ಬಿ.ಕೆ. ನಾಗರಾಜ್, ಎಂ ಶಂಕರ್, ಎಚ್.ಎಸ್. ಶ್ರೀಕಂಠಯ್ಯ ಮತ್ತಿತರರು ಉಪಸ್ಥಿರಿದ್ದರು.

ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ತರಬೇತಿ
ಹಾಸನ:
ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಕಾರ್ಯ ಪ್ರಾರಂಭವಾಗಿದೆ.
ಹಾಸನ ನಗರಸಭೆಯ 35 ವಾರ್ಡ್‌ಗಳ ಚುನಾವಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ನಗರದ ಹಾಸನಾಂಬ ಕಲಾಭವನದಲ್ಲಿ ತರಬೇತಿ ನೀಡಲಾಯಿತು. ಚುನಾವಣಾ ವೀಕ್ಷಕ ಡಾ.ನರಸಿಂಹಮೂರ್ತಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ, ಚುನಾವಣೆ ಸಂದರ್ಭದ ಸವಾಲುಗಳು, ಮತಗಟ್ಟೆ ಅಧಿಕಾರಿಗಳು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.
ಮತದಾನ ಕೇಂದ್ರದಲ್ಲಿ ಮತಗಟ್ಟೆಗಳ ಸ್ಥಾಪನೆ, ಮತಗಟ್ಟೆಗಳಲ್ಲಿ ಭದ್ರತಾ ವ್ಯವಸ್ಥೆ, ಪೋಲಿಂಗ್ ಆಫೀಸರ್‌ಗಳಿಗೆ ಕರ್ತವ್ಯಗಳ ಹಂಚಿಕೆ, ಮತಗಟ್ಟೆ ಒಳಗಡೆ ಪ್ರವೇಶದ ನಿಯಂತ್ರಣ ಮತ್ತು ಕುಳಿತುಕೊಳ್ಳುವ ವ್ಯವಸ್ಥೆ, ವಿದ್ಯುನ್ಮಾನ ಮತಯಂತ್ರ ಸಿದ್ಧಪಡಿಸುವುದು, ಮತದಾನ ಪ್ರಾರಂಭದ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು. ಮತಗಟ್ಟೆಯಲ್ಲಿ ಮತ್ತು ಸುತ್ತಮುತ್ತ ಚುನಾವಣಾ ಕಾನೂನಿನ ಜಾರಿ, ಮತದಾರರ ಗುರುತಿನ ಪರಿಶೀಲನೆ ಹಾಗೂ ಆಕ್ಷೇಪಿಸಿದ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ, ಮತದಾರರು ಮತದಾನ ರಹಸ್ಯ ಕಾಪಾಡುವ ಬಗ್ಗೆ ತಿಳಿಸಿಕ್ಙೊಲಾಯಿತು.  
 ಮತಗಟ್ಟೆಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು ಮುಂತಾದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು, ಮತದಾನವನ್ನು ಮುಂದೂಡುವುದು ನಿಲ್ಲಿಸುವುದು ಇಂತಹ ಸನ್ನಿವೇಶ ಹೇಗೆ ನಿಭಾಯಿಸಬೇಕು ಎಂದು ಚುನಾವಣಾಧಿಕಾರಿ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.