ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಅಂತಿಮ ಪ್ರಯತ್ನ
ಕ.ಪ್ರ.ವಾರ್ತೆ, ಅರಸೀಕೆರೆ, ಮಾ. 5
ಪುರಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಅಭ್ಯರ್ಥಿಗಳ ನಾಡಿಮಿಡಿತ ಹೆಚ್ಚಾಗುತ್ತಿದ್ದು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕೊನೆಯ ಪ್ರಯತ್ನವಾಗಿ ಮನೆ ಮನೆಗೆ ತೆರಳಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿ ಮತದಾರರ ಕೈಕಾಲು ಹಿಡಿಯುತ್ತಿರುವುದು ಸಾಮಾನ್ಯವಾಗಿದೆ.
ಮಂಗಳವಾರ ಬೆಳಗ್ಗೆಯೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮತದಾರರ ಮನಮೊಲಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಹಣ, ಮಧ್ಯ, ಮಾಂಸದೂಟದ ಪಾರ್ಟಿಗಳು ಜೋರಾಗಿ ನಡೆದಿವೆ. ಬೇರೆ ಊರುಗಳಲ್ಲಿರುವ ಮತದಾರರನ್ನು ಕರೆಯಿಸಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ತಾಲೂಕು ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ವಕೀಲ ಎನ್.ಡಿ.ಪ್ರಸಾದ್, ಹಾರ್ನಳ್ಳಿ ಸಿದ್ದಪ್ಪ, ಮನೋಜ್ ಕುಮಾರ್ ಇನ್ನಿತರರು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಮತ ನೀಡುವಂತೆ ಮತದಾರರನ್ನು ಮನವೊಲಿಸುವ ತಂತ್ರದಲ್ಲಿ ನಿರತರಾಗಿದ್ದಾರೆ.
ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ತಾವು ಶಾಸಕರಾದ ನಂತರ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ತಾವೇನು ಕಮ್ಮಿಯಿಲ್ಲದಂತೆ ಮನೆಗಳಿಗೆ ತೆರಳಿ ಜೆಡಿಎಸ್ ಬೆಂಬಲಿಸುವಂತೆ ಮತದಾರರ ಮನಗೆಲ್ಲುವ ಯತ್ನ ನಡೆಸತೊಡಗಿದ್ದಾರೆ.
ಕಾಂಗ್ರೆಸ್ ಮಾಜಿ ಸಚಿವ ಬಿ ಶಿವರಾಂ, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಜೆ.ಪಿ.ಜಯಣ, ಮಾಜಿ ಶಾಸಕರಾದ ಜಿ.ಎಸ್.ಪರಮೇಶ್ವರಪ್ಪ, ಕೆ.ಪಿ.ಪ್ರಭುಕುಮಾರ್, ಕೆ.ಸಿ.ಯೋಗೀಶ್, ಪ್ರಸನ್ನಕುಮಾರ್ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಮನೆಗಳಿಗೆ ತೆರಳಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ.
ಕೆಜೆಪಿ ಮುಖಂಡ ಡಾ.ಲೋಕೇಶ್, ಲಾಳನಕೆರೆ ಮಹಾಲಿಂಗಪ್ಪ, ಗೀಜಿಹಳ್ಳಿ ಗುರುಸಿದ್ದಪ್ಪ ಹಾಗೂ ಇನ್ನಿತರ ಮುಖಂಡರು ಯಡಿಯೂರಪ್ಪನವರ ಸಾಧನೆ ಅವರ ಅವಧಿಯಲ್ಲಿ ಪಟ್ಟಣಕ್ಕೆ ಬಿಡುಗಡೆಗೊಂಡ ಅನುದಾನ ಇನ್ನಿತರ ವಿಷಯಗಳನ್ನು ಮತದಾರನ ಮನೆ ಮನೆಗೆ ತೆರಳಿ ಹೇಳುವ ಮೂಲಕ ಬಿ.ಎಸ್.ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಮನವಿ ಮಾಡತೊಡಗಿದ್ದಾರೆ.
ಸತತ 4 ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿರುವ ವಕೀಲ ಎನ್.ಡಿ.ಪ್ರಸಾದ್ ಬಿಜೆಪಿಯಿಂದ 22ನೇ ವಾರ್ಡಿನಿಂದ ಆಯ್ಕೆ ಬಯಸಿದ್ದಾರೆ. 3ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಪುರಸಭೆ ಪ್ರವೇಶಿಸಿದ್ದ ಬಿ.ಎನ್.ವಿದ್ಯಾಧರ್ ಈ ಬಾರಿ ಜೆಡಿಎಸ್ಗೆ ಎದುರಾಳಿಯಾಗಿರುವುದು ಮತ್ತೊಂದು ವಿಶೇಷ. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ಎನ್.ಜಿ. ಮಧು 11ನೇ ವಾರ್ಡಿನಿಂದ ಕೆಜೆಪಿ ಅಭ್ಪ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದರೆ, ಬಿ.ಜೆ.ಪಿ.ಯ ಹಿರಿಯ ಮುಖಂಡ ಪರಶುರಾಮ್ ಪುತ್ರ ಕೆ.ಪಿ.ಬಭ್ರುವಾಹನರಾವ್ 20ನೇ ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದರೆ 27ನೇ ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಮೋಹನ್ಕುಮಾರ್ ಗೆಲುವಿಗಾಗಿ ಕಾದಾಟ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

