ಗ್ರಾಮೀಣ ಸಂಸ್ಕೃತಿ ವಿನಾಶದಂಚಿಗೆ: ಪಾಪು ವಿಷಾದ
ಅರಸೀಕೆರೆ: ಗ್ರಾಮಾಂತರ ಪ್ರದೇಶಗಳ ಜನರು ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದು ಹಳ್ಳಿಗಳು ನಶಿಸುವ ಮೂಲಕ ಗ್ರಾಮೀಣ ಸಂಸ್ಕೃತಿ ವಿನಾಶದ ಹಂಚಿಗೆ ತಲುಪುತ್ತಿದೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ(ಪಾಪು) ವಿಷಾದ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಸಮೀಪದ ಕಸ್ತೂರ ಬಾ ಟ್ರಸ್ಟಿನ ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಮೈಸೂರು ವಿಶ್ವವಿದ್ಯಾನಿಲಯ, ಗಾಂಧೀ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಮದ್ಯಪಾನ ಸಂಯಮ ಮಂಡಳಿ, ಅರಸೀಕೆರೆ ಹಾಗೂ ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಹಳ್ಳಿಗಳ ಏಳ್ಗೆಯಿಂದಲೇ ದೇಶದ ಉದ್ಧಾರ ಸಾಧ್ಯ ಎಂದು ಭಾವಿಸಿದ್ದರು. ಅವರ ಕನಸನ್ನು ನನಸು ಮಾಡಬೇಕಾದರೆ ಯುವಸಮೂಹ ಹಳ್ಳಿಗಳನ್ನು ತೊರೆದು ಪಟ್ಟಣಗಳಿಗೆ ವಲಸೆ ಹೋಗುವುದನ್ನು ಕೈಬಿಡಬೇಕು.
ಖಾದಿ ಗ್ರಾಮೋದ್ಯೋಗ, ಗುಡಿ ಕೈಗಾರಿಕೆಗಳಿಗೆ ಸರ್ಕಾರಗಲು ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಯುವಶಕ್ತಿಗೆ ಕೆಲಸ ನೀಡಿ ಪ್ರೋತ್ಸಾಹಿಸಬೇಕಿದೆ ಎಂದರು.
ಅನರ್ಹರಿಗೆ ಡಾಕ್ಟರೇಟ್: ಕೆಲವು ವಿಶ್ವವಿದ್ಯಾಲಯಗಳು ಮನಬಂದಂತೆ ಡಾಕ್ಟರೇಟ್ ಪ್ರಶಸ್ತಿ ನೀಡುತ್ತಿದ್ದು, ಡಾಕ್ಟರೇಟ್ ಹಂಚಿಕೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿಗೆ ಗೌರವವೇ ಇಲ್ಲದಂತಾಗುತ್ತದೆ. ಹಣ ಪಡೆದು ಅನರ್ಹರಿಗೆ ಡಾಕ್ಟರೇಟ್ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಡಾಕ್ಟರೇಟ್ ಪಡೆಯಲು ಜನರೇ ಇಲ್ಲದಂತಾಗಬಹುದೆಂದು ಹೇಳಿದರು.
ವ್ಯವಸ್ಥೆ ಪಾತಾಳಕ್ಕೆ ತಲುಪಿದೆ: ಬಹುತೇಕ ಮಂತ್ರಿ ಮಹೋದಯರು ಪರಪ್ಪನ ಅಗ್ರಹಾರದಲ್ಲಿರಲು ಲಾಯಕ್ಕಾದವರೇ. ಕೆಲವು ರಾಜಕಾರಣಿಗಳ ಅಧಿಕಾರದ ಮದ ನೆತ್ತಿಗೇರಿದ್ದು ವ್ಯವಸ್ಥೆಯನ್ನು ಕಲುಷಿತಗೊಳಿಸುವ ಪ್ರಯತ್ನ ನಡೆಸತೊಡಗಿದ್ದಾರೆ. ಇದರಿಂದಾಗಿಯೇ ವ್ಯವಸ್ಥೆ ಪಾತಾಳಕ್ಕೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವಕರೇ ದೇಶದ ಭದ್ರ ಬುನಾದಿಯಾಗಿದ್ದು ಯುವ ಸಮುದಾಯಕ್ಕೆ ಪ್ರೋತ್ಸಾಹ ಅಗತ್ಯ ಬೆಂಬಲ ನೀಡುವ ಮೂಲಕ ತರುಣರಲ್ಲಿ ವಿಶ್ವಾಸ ವೃದ್ಧಿಸುವಂತೆ ನಡೆದುಕೊಳ್ಳಬೇಕು. ಗಾಂಧೀಜಿಯವರ ತತ್ವ, ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಭಾರತೀಯರೆಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಹಿರಿಯ ಐಎಎಸ್ ಅಧಿಕಾರಿ ಶಂಕರಲಿಂಗೇಗೌಡ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಮುಖ್ಯಸ್ಥ ಸಚ್ಚಿದಾನಂದ ಹೆಗಡೆ, ಪ್ರಾಂಶುಪಾಲ ಸೈಯದ್ಬಾಷ ಮಾತನಾಡಿದರು.
ಆಶ್ರಮದ ಮುಖ್ಯಸ್ಥೆ ಉಷಾ ಬೆಹನ್, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಆರ್.ಅನಂತಕುಮಾರ್, ಉಷಾ ಅಬ್ರಾಲ್, ಶೋಭಾಮೂರ್ತಿ, ಎಂ.ರುದ್ರಯ್ಯ, ಎಚ್.ಎಂ.ಶಿವಣ್ಣ, ಸರೋಜ ತುಳಸಿದಾಸ್, ಚಂದ್ರಹಾಸ್, ಶಕೀಲ್ ಅಹಮದ್, ಮಂಜುನಾಥ್ ಹೆಗಡೆ, ಅರುಣಕುಮಾರ್, ಕೆ.ಟಿ.ವೀರಪ್ಪ, ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಇದ್ದರು.
ಬಾಣಾವರ ಸಪ್ರ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಮಂಜುನಾಥಸ್ವಾಮಿ ಸ್ವಾಗತಿಸಿದರು. ಶಿವರಾಜ್ ನಿರೂಪಿಸಿದರು. ವಿಶ್ವನಾಥ್ ವಂದಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

